ಬೆಂಗಳೂರು:ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯಾಗಿ ಅಧಿಕೃತ ಸ್ಥಾನಮಾನ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈಯವರು ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಅಧ್ಯಯನ ನಡೆಸಲು 2023ರ ಜನವರಿ 12ರಂದು ಡಾ.ಮೋಹನ್ ಆಳ್ವ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು.ಫೆ.14ರಂದು ಆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ.ಮೋಹನ್ ಆಳ್ವ ವರದಿಯಲ್ಲಿ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯುವಂತೆ ತಿಳಿಸಲಾಗಿದೆ.ನಾವು ಈಗಾಗಲೇ ಇಲಾಖೆಗಳ ಅಭಿಪ್ರಾಯವನ್ನು ಕೋರಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಡಾ.ಮೋಹನ ಆಳ್ವರ ವರದಿಯಲ್ಲಿ ಸೂಚಿಸುವಂತೆ ಇಲಾಖೆಗಳ ಅಭಿಪ್ರಾಯ ಬಂದ ಬಳಿಕ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.ನಮ್ಮ ಸರಕಾರಕ್ಕೂ ತುಳು ಭಾಷೆಯ ಬಗ್ಗೆ ಕಾಳಜಿ ಇದೆ.ಇದೀಗ ಸದನದ ಅಧ್ಯಕ್ಷರಾಗಿ ತುಳು ಭಾಷೆ ಮಾತನಾಡುವ ತಾವು ಇರುವುದು ಮತ್ತೊಂದು ವಿಶೇಷ ಎಂದು ಸಭಾಧ್ಯಕ್ಷರನ್ನುದ್ದೇಶಿಸಿ ಸಚಿವರು ಹೇಳಿದರು.
ವಿಷಯ ಪ್ರಸ್ತಾವಿಸಿದ ಶಾಸಕ ಅಶೋಕ್ ಕುಮಾರ್ ರೈ, ಸುಮಾರು ಒಂದು ಕೋಟಿ ಜನ ತುಳು ಭಾಷೆಯನ್ನು ಮಾತನಾಡುತ್ತಾರೆ.1994ರಲ್ಲಿ ವೀರಪ್ಪ ಮೊಯ್ಲಿ ತುಳು ಅಕಾಡೆಮಿ ಆರಂಭಿಸಿದರು.2007ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿ ಆರಂಭಿಸಿತು.ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಸಿಆರ್‌ಇ ಮತ್ತು ಟೂಫೆಲ್ ಪರೀಕ್ಷೆಗಳಿಗೆ ಸಂಬಂಧಿಸಿದ ಅರ್ಜಿಯನ್ನು 133 ಜಾಗತಿಕ ಭಾಷೆಗಳಲ್ಲಿ ನೀಡಲಾಗುತ್ತಿದ್ದು ಇದರಲ್ಲಿ 17 ಭಾರತೀಯ ಭಾಷೆಗಳೂ ಇವೆ.ಈ 17 ಭಾಷೆಗಳಲ್ಲಿ ತುಳು ಕೂಡಾ ಸೇರ್ಪಡೆಯಾಗಿದೆ.ಆದುದರಿಂದ, ತುಳು ಭಾಷೆಗೆ ರಾಜ್ಯದ ಎರಡನೆ ಅಽಕೃತ ಭಾಷೆಯ ಸ್ಥಾನಮಾನ ನೀಡಬೇಕು.ಇದಕ್ಕೆ ಯಾವುದೇ ರೀತಿಯ ಹಣಕಾಸಿನ ವೆಚ್ಚವಿಲ್ಲ ಎಂದು ಹೇಳಿದರು.ಈ ಕುರಿತು ಅಗತ್ಯ ಕ್ರಮಕೈಗೊಳ್ಳುವಂತೆ ಸಭಾಧ್ಯಕ್ಷರು ಸಚಿವರಿಗೆ ಸೂಚನೆ ನೀಡಿದರು.
ತುಳುವಿನಲ್ಲಿ ಮಾತನಾಡಿದರು..: ಚರ್ಚೆ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ತುಳುವಿನಲ್ಲಿ ಮಾತನಾಡಿ ಬಳಿಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರು ತುಳುವಿನಲ್ಲಿ ಮಾತನಾಡಿ ಇಡೀ ಸದನದ ಗಮನ ಸೆಳೆದರು.
ಶಾಸಕ ಅಶೋಕ್ ಕುಮಾರ್ ರೈಯವರು ವಿಷಯ ಪ್ರಸ್ತಾಪಿಸಿದ ವೇಳೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಮಂತ್ರಿಗಳು ಹೇಳ್ತಾರೆ ಎಂದು ಹೇಳಿದಾಗ ನಾನು ನನ್ನ ಪ್ರಶ್ನೆ, ವಿಚಾರಧಾರೆಯನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ ಅಶೋಕ್ ಕುಮಾರ್ ರೈಯವರು, ಅಧ್ಯಕ್ಷರೇ ಈರ್‌ಲ ಅಂಚಿರ್ದೆ ಬತ್ತಿನಾರ್ ಎಂದು ಹೇಳಿ ತುಳುವಿನಲ್ಲಿ ಮಾತು ಮುಂದುವರಿಸಿದರು.ಸಭಾಧ್ಯಕ್ಷರೂ ತುಳುವಿನಲ್ಲಿಯೇ ಪ್ರತಿಕ್ರಿಯಿಸಿ, ಮಂತ್ರಿಗಳು ಮಾತನಾಡಲಿ.ಆ ಬಳಿಕ ನೀವು ಏನಾದರೂ ಇದ್ದರೆ ಕೇಳಿ ಎಂದರು.ಇವರು ತುಳುವಿನಲ್ಲಿಯೇ ಚರ್ಚೆ ಮುಂದುವರಿಸಿದಾಗ ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜರಾಯರೆಡ್ಡಿ ಎದ್ದು ನಿಂತು ಆಕ್ಷೇಪಿಸಿದರು.
ಸಭಾಧ್ಯಕ್ಷರು ಅವರನ್ನು ತಡೆದಾಗ, ತುಳು ಭಾಷೆ ಮಾತನಾಡುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ.ಆದರೆ ತುಳು ಭಾಷೆ ಸಂವಿಧಾನದ ಶೆಡ್ಯೂಲ್‌ನಲ್ಲಿ ಇಲ್ಲ.ಸದಸ್ಯರು ಇಲ್ಲಿ ತುಳು ಭಾಷೆಯಲ್ಲಿ ಮಾತನಾಡಿದರೆ ದಾಖಲೆಗೂ ಹೋಗುವುದಿಲ್ಲ ಎಂದು ಬಸವರಾಜರಾಯ ರೆಡ್ಡಿ ಹೇಳಿದರು.ಬಳಿಕ ಸಭಾಧ್ಯಕ್ಷರು,ಕನ್ನಡದಲ್ಲಿ ಮಾತನಾಡಿ,ತುಳುವಿನಲ್ಲಿ ಮಾತನಾಡಿದರೆ ಇಲ್ಲಿ ಬರೆದುಕೊಳ್ಳುವವರಿಗೆ ಕಷ್ಟವಾಗುತ್ತದೆ ಎಂದು ಅಶೋಕ್ ಕುಮಾರ್ ರೈಯವರಿಗೆ ಸಲಹೆ ನೀಡಿದರು.ತುಳುಭಾಷೆಗೆ ಎರಡನೇ ಅಽಕೃತ ಭಾಷೆಯ ಸ್ಥಾನ ಮಾನ ನೀಡಿದರೆ ಅವರು ಬೇಡವೆಂದರೂ ನಮಗಿಲ್ಲಿ ಮಾತನಾಡಲು ಅವಕಾಶವಾಗುತ್ತದೆ ಎಂದು ಅಶೋಕ್ ಕುಮಾರ್ ರೈಯವರು ಹೇಳಿದರು.ಈ ವೇಳೆ ಶಾಸಕ ವೇದವ್ಯಾಸ ಕಾಮತ್‌ರವರೂ ಸಭಾಧ್ಯಕ್ಷರನ್ನುದ್ದೇಶಿಸಿ ತುಳುವಿನಲ್ಲಿ ಮಾತನಾಡಲಾರಂಭಿಸಿದಾಗ ಕನ್ನಡದಲ್ಲಿ ಮಾತನಾಡಿ ಎಂದು ಸಭಾಧ್ಯಕ್ಷರು ಸೂಚಿಸಿದರು.