ಸಮುದಾಯದ ಬೆಳವಣಿಗೆಯಿಂದ ಸುಸ್ಥಿರ ಸಮಾಜ ನಿರ್ಮಾಣ : ಪ್ರೋ. ದಾಮೋದರ ಕಣಜಾಲು
ಬೆಳ್ಳಾರೆ : ಉನ್ನತ ಶಿಕ್ಷಣ ಸಂಸ್ಥೆಗಳು ಸಮುದಾಯದ ಬೆಳವಣಿಗೆಯಲ್ಲಿ ಕೈ ಜೋಡಿಸುವುದರಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಳ್ಳಾರೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೋ.ದಾಮೋದರ ಕಣಜಾಲು ಅಭಿಪ್ರಾಯಪಟ್ಟರು.
ಮಂಗಳೂರು ವಿ.ವಿ., ಎಂಜಿಎನ್‌ಸಿಆರ್‌ಇ ಪ್ರಾಯೋಜಿತ ಬೆಳ್ಳಾರೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಭಾಗಿತ್ವದಲ್ಲಿ ಮುಕ್ಕೂರು ಸ.ಹಿ.ಪ್ರಾ.ಶಾಲೆಯಲ್ಲಿ ಜು.19 ರಂದು ಉನ್ನತ ಶಿಕ್ಷಣ ಸಂಸ್ಥೆಗಳ ಸಮುದಾಯ ಭಾಗವಹಿಸುವಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಸಮುದಾಯ ಕೇಂದ್ರಿಕೃತ ಕಾರ್ಯಗಳ ಬಗ್ಗೆ ಅಧ್ಯಯನ, ಸ್ಪಂದನೆ ಮಾಡುವುದರಿಂದ ಜಾಗೃತಿ ಮೂಡುತ್ತದೆ. ಅದರ ಜತೆಗೆ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೂ ಪೂರಕವಾಗುತ್ತದೆ ಎಂದ ಅವರು, ನಮ್ಮ ಪ್ರಯತ್ನಗಳು ಆ ಊರು, ಸಮುದಾಯದಲ್ಲಿ ಸಕರಾತ್ಮಕ ಬದಲಾವಣೆಗೆ ನಾಂದಿಯಾದರೆ ಅದುವೇ ಯಶಸ್ಸು ಎಂದರು.
ಮಂಗಳೂರು ವಿ.ವಿ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ|ಯಶಸ್ವಿನಿ ಮಾತನಾಡಿ, ಸಮುದಾಯ ಅಭಿವೃದ್ಧಿಯಲ್ಲಿ ಮುಖಾಮುಖಿಯಾಗುವುದು ನಮ್ಮ ಸಾಮಾಜಿಕ ಜವಾಬ್ದಾರಿ ಅನ್ನುವ ಮನೋಭಾವ ಮೂಡಬೇಕು. ಕ್ಷಿಪ್ರಗತಿಯಲ್ಲಿ ಓಡುತ್ತಿರುವ ಯುವ ಪೀಳಿಗೆಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಅಗತ್ಯವಿದ್ದು ಇದಕ್ಕೆ ದತ್ತು ಗ್ರಾಮದಂತಹ ಕಾರ್ಯಕ್ರಮ ಪೂರಕ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಇದೊಂದು ಪ್ರೇರಣದಾಯಕ ಕಾರ್ಯಚಟುವಟಿಕೆಯಾಗಿದ್ದು, ಪೆರುವಾಜೆ ಕಾಲೇಜಿನ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ಸಾಧನೆ ಮಾಡಬೇಕು. ಸಮುದಾಯ ಆಧಾರಿತ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದರು.
ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಶುಭಹಾರೈಸಿದರು.
ವೇದಿಕೆಯಲ್ಲಿ ಬೆಳ್ಳಾರೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕಿ ಅರ್ಚನಾ, ಮುಕ್ಕೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು. ಮಂಗಳೂರು ವಿ.ವಿ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ|ಯಶಸ್ವಿನಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ವಿನಯ ಭಟ್ ಬಡಿಗೇರ್ ವಂದಿಸಿದರು. ವಿದ್ಯಾರ್ಥಿನಿ ಗಾನಶ್ರೀ ನಿರೂಪಿಸಿದರು. ಉಪನ್ಯಾಸಕಿಯರಾದ ಯಶೋಧಾ ಬಿ, ರಶ್ಮಿತಾ ಕರ್ಕೆರಾ, ಸ್ವಪ್ನ ಡಿ ಉಪಸ್ಥಿತರಿದ್ದರು.
ಪೌಷ್ಠಿಕ ಕೈ ತೋಟ ನಿರ್ಮಿಸುವ ಘೋಷಣೆ
ಶಾಲೆಯಲ್ಲಿ ಪೌಷ್ಠಿಕ ಕೈ ತೋಟ ನಿರ್ಮಿಸಿಕೊಡುವಂತೆ ಮುಕ್ಕೂರು ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ ವತಿಯಿಂದ ಪೆರುವಾಜೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿಗೆ ಪ್ರಾಂಶುಪಾಲ ದಾಮೋದರ ಕಣಜಾಲು ಅವರ ಮೂಲಕ ಮನವಿ ಸಲ್ಲಿಸಲಾಯಿತು. ದತ್ತು ಗ್ರಾಮದ ಅಡಿಯಲ್ಲಿ ಪೌಷ್ಠಿಕ ತೋಟ ನಿರ್ಮಿಸಿಕೊಡುವುದಾಗಿ ಕಾಲೇಜಿನ ವತಿಯಿಂದ ಘೋಷಿಸಲಾಯಿತು. ಪೆರುವಾಜೆ ಗ್ರಾ.ಪಂ. ವತಿಯಿಂದಲೂ ಸಹಕಾರ ನೀಡುವುದಾಗಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಭರವಸೆ ನೀಡಿದರು.
ಕಾರ್ಯಾಗಾರದಲ್ಲಿ ಮುಕ್ಕೂರು ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಜೈನುದ್ದೀನ್ ತೋಟದಮೂಲೆ, ಗಣಪಯ್ಯ ಭಟ್ ವನಶ್ರೀ, ಗೋಪಾಲಕೃಷ್ಣ ಭಟ್ ಮನವಳಿಕೆ, ಅಶ್ವಿನಿ ಕೋಡಿಬಲು, ತೇಜಸ್ವಿ ನರಸಿಂಹ ಕಾನಾವು, ಶ್ವೇತಾ ಕಾನಾವು, ಲೋಕೇಶ್ ಬೀರುಸಾಗು ಮೊದಲಾದವರು ಪಾಲ್ಗೊಂಡರು.