ಖ್ಯಾತ ಚಲನಚಿತ್ರ ನಟ ಮನೋಜ್ ಪುತ್ತೂರು ಭಾಗಿ
ಪುತ್ತೂರು: ಪುತ್ತೂರು ಮತ್ತು ಕಡಬ ಅವಿಭಜಿತ ತಾಲೂಕುಗಳನ್ನು ಒಳಗೊಂಡಿದ್ದು ಪುತ್ತೂರು ಕುಲಾಲ ಸಹಕಾರ ಭವನದಲ್ಲಿ ಕಚೇರಿಯನ್ನು ಹೊಂದಿರುವ ಕುಲಾಲ ಸಮಾಜಸೇವಾ ಸಂಘದ ಪುತ್ತೂರು ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಶಸ್ತಿ ಪ್ರಧಾನ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆಯು ಜು.23ರಂದು ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಕುಲಾಲ ಸಮಾಜಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಕುಲಾಲ ಸಹಕಾರ ಭವನದಲ್ಲಿರುವ ಸಂಘದ ಕಚೇರಿಯಲ್ಲಿ ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಭಜನೆ ನಡೆಯಲಿದ್ದು, ಪುರಭವನದಲ್ಲಿ ಪ್ರಶಸ್ತಿಪ್ರದಾನ, ವಿದ್ಯಾರ್ಥಿವೇತನ ವಿತರಣೆ, ವಾರ್ಷಿಕ ಮಹಾಸಭೆ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ, ಖ್ಯಾತ ಬಹುಭಾಷ ಚಲನಚಿತ್ರ ನಟ ಮಾಣಿ ಸಮೀಪದ ಮನೋಜ್ ಪುತ್ತೂರು, ಕರ್ನಾಟಕ ರಾಜ್ಯ ನಿವೃತ್ತ ಯೋಧರ ರಾಜ್ಯ ಅಧ್ಯಕ್ಷರಾಗಿರುವ ಬಿಎಸ್ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಬೈಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ಧಾರೆ. ವಿಟ್ಲ, ಬೆಳ್ಳಾರೆ ಸಹಿತಿ ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರು ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಸಮಾರಂಭದ ಬಳಿಕ ಮಧ್ಯಾಹ್ನ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ನವೀನ್ ಕುಲಾಲ್ ಅವರು ಹೇಳಿದರು.
ಪ್ರಶಸ್ತಿ ಪ್ರದಾನ:
ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರಿಗೆ ’ಕುಲಾಲ ಕುಲತಿಲಕ’ ಪ್ರಶಸ್ತಿ ಮತ್ತು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಬೈಲ್ ಅವರಿಗೆ ’ಕುಲಾಲ ಕುಲಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು, ಸಾಧನೆಗೈದ ಪದವಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ನವೀನ್ ಕುಲಾಲ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಜನಾರ್ದನ ಮೂಲ್ಯ ಸಾರ್ಯ, ಉಪಾಧ್ಯಕ್ಷ ಸಚ್ಚಿದಾನಂದ ಡಿ ಉಪಸ್ಥಿತರಿದ್ದರು.