ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಕಾವು ಮತ್ತು ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್(ರಿ.) ಮಂಗಳೂರು ಇವರ ಸಹಯೋಗದೊಂದಿಗೆ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಕಾವು ಮಾಡ್ನೂರು ಇದರ ವತಿಯಿಂದ ನವೋದಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆಯು ಜು.20 ರಂದು ಬೆಳಿಗ್ಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.
ಒಕ್ಕೂಟದ ಕಾರ್ಯಕ್ರಮ ಮಕ್ಕಳ ಶಿಕ್ಷಣಕ್ಕೆ ಪೂರಕ-ಬಾಲ್ಯೊಟ್ಟು
ಮಕ್ಕಳಿಗೆ ಪುಸ್ತಕ ವಿತರಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಕಾವು ನವೋದಯ ಒಕ್ಕೂಟವು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆಯ ಜತೆಗೆ ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ಕೆಲಸವನ್ನು ಮಾಡಿದೆ ಎಂದು ಹೇಳಿದರು.
ಸ್ವಸಹಾಯ ಸಂಘದಿಂದ ಆರ್ಥಿಕ ಸದೃಢತೆ-ಎಸ್.ಬಿ ಜಯರಾಮ ರೈ
ದೀಪ ಪ್ರಜ್ವಲನೆ ಮಾಡಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ ಜಯರಾಮ ರೈ ಬಳಜ್ಜರವರು ಮಾತನಾಡಿ ನವೋದಯ ಸ್ವಸಹಾಯ ಸಂಘಗಳ ಸಕ್ರಿಯತೆಯಿಂದ ಆರ್ಥಿಕವಾಗಿ ಸದೃಢತೆಯನ್ನು ಪಡೆಯಲು ಸಾಧ್ಯವಾಗಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ಮತ್ತು ಕೆಎಂಎಫ್‌ನಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಲು ನವೋದಯ ಸದಸ್ಯರಿಗೆ ಹೈನುಗಾರಿಕೆ ಸೇರಿದಂತೆ ಇತರ ಸ್ವಉದ್ಯೋಗದ ಅನುಕೂಲತೆಯನ್ನು ನೀಡಲಾಗಿದೆ ಎಂದು ಹೇಳಿದರು.
ಒಕ್ಕೂಟದ ಕೆಲಸ ಸಮಾಜಕ್ಕೆ ಪ್ರೇರಣೆ-ನನ್ಯ
ಸಭಾಧ್ಯಕ್ಷತೆ ವಹಿಸಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಕಾವು ನವೋದಯ ಸ್ವಸಹಾಯದ ಸದಸ್ಯರು ಒಕ್ಕೂಟದ ಮೂಲಕ ನಡೆಸುವ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ, ತಾಲೂಕು ಮೇಲ್ವಿಚಾರಕ ಚಂದ್ರಶೇಖರ್‌ರವರು ಶುಭಹಾರೈಸಿದರು. ಕಾವು ನವೋದಯ ಒಕ್ಕೂಟದ ಉಪಾಧ್ಯಕ್ಷೆ ಸುಮತಿ ಆಚಾರಿಮೂಲೆ ಉಪಸ್ಥಿತಿ ವಹಿಸಿದ್ದರು.
ಸನ್ಮಾನ:
ನಾಟಿವೈದ್ಯೆ, ಸಮಾಜ ಸೇವಕಿ ಗೀತಾ ಬಳ್ಳಿಕಾನರವರಿಗೆ ನವೊದಯ ಒಕ್ಕೂಟದಿಂದ ಸನ್ಮಾನ ನಡೆಸಲಾಯಿತು.
ಉಚಿತ ಪುಸ್ತಕ ವಿತರಣೆ-ವಿದ್ಯಾರ್ಥಿ ವೇತನ:
ಕಾವು ನವೋದಯ ಒಕ್ಕೂಟದ ಸದಸ್ಯರುಗಳ ಒಟ್ಟು 129 ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸವಿತಾ ರೈ ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡರವರು ಸ್ವಾಗತಿಸಿ ಪ್ರಸ್ತಾವನೆಗೈದರು. ನವೋದಯದ ಪ್ರೇರಕಿ ಮಾಧವಿ ವಂದಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಚಿದಾನಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದರು.