ಪುತ್ತೂರು: ಬಿಳಿಬೋರ್ಡು ವಾಹನ(ಖಾಸಗಿ ವಾಹನ) ಚಾಲಕರು ಅನಧಿಕೃತವಾಗಿ ಟೂರಿಸ್ಟ್ ವಾಹನದಂತೆ ಬಾಡಿಗೆಗೆ ತೆರಳುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಆಂಡ್ ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್ ಪುತ್ತೂರು ಘಟಕದಿಂದ ಪುತ್ತೂರು ಆರ್‌ಟಿಒ ಅವರಿಗೆ ದೂರು ನೀಡಲಾಗಿದೆ.
ಪುತ್ತೂರಿನಲ್ಲಿ ಖಾಸಗಿ ವಾಹನಗಳು ಬಾಡಿಗೆಗೆ ತೆರಳುವುದರಿಂದ ಟೂರಿಸ್ಟ್ ಚಾಲಕ ಮಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅನಧಿಕೃತವಾಗಿ ನೂರಾರು ಖಾಸಗಿ ವಾಹನಗಳು ಪುತ್ತೂರಿನಲ್ಲಿ ಬಾಡಿಗೆ ನಡೆಸುತ್ತಿದ್ದು ಇದರಿಂದ, ವಾಹನವನ್ನೇ ನಂಬಿ ಬದುಕು ಸಾಗಿಸುತ್ತಿರುವ ನೂರಾರು ಟೂರಿಸ್ಟ್ ವಾಹನ ಚಾಲಕರಿಗೆ ನಿತ್ಯ ಬದುಕಿಗೂ ತೊಂದರೆಯಾಗಿದೆ. ಖಾಸಗಿ ವಾಹನಗಳು ಬಾಡಿಗೆಗೆ ತೆರಳುವಂತಿಲ್ಲ ಎಂಬ ಕಾನೂನು ಇದೆ. ಖಾಸಗಿ ವಾಹನವನ್ನು ಸ್ವಂತಕ್ಕೆ ಮಾತ್ರ ಬಳಸಬಹುದಾಗಿದೆ ಎಂಬ ಸಾರಿಗೆ ಇಲಾಖೆಯ ನಿಯಮವನ್ನು ಉಲ್ಲಂಘನೆ ಮಾಡಿ ಖಾಸಗಿಯವರು ಬಾಡಿಗೆ ಮಾಡುತ್ತಿದ್ದು ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ರಿಕ್ಷಾ ಚಾಲಕರು ತಾಲೂಕು ಹೊರಗಡೆ ಬಾಡಿಗೆ ಮಾಡುವಂತಿಲ್ಲ. ಆದರೆ ಬಹುತೇಕ ರಿಕ್ಷಾ ಚಾಲಕರು ಕಾನೂನನ್ನು ಉಲ್ಲಂಘನೆ ಮಾಡಿ ಹೊರ ತಾಲೂಕು ಹಾಗೂ ಹೊರ ಜಿಲ್ಲೆಗಳಿಗೆ ಬಾಡಿಗೆ ನಡೆಸುತ್ತಿದ್ದು ಅವರ ವಿರುದ್ದವೂ ಕಾನೂನು ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ದ.ಕ ಜಿಲ್ಲಾ ಕೇಂದ್ರೀಯ ಮಂಡಲದ ಪದಾಧಿಕಾರಿಗಳಾದ ಆನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ, ಪುತ್ತೂರು ಘಟಕದ ಗೌರವಾಧ್ಯಕ್ಷ ಮೋನಪ್ಪ ಪೂಜಾರಿ ಕುಂಬ್ರ, ಅಧ್ಯಕ್ಷ ಶರಣ್, ಕಾರ್ಯದರ್ಶಿ ಸುರೇಂದ್ರ, ಉಪಾಧ್ಯಕ್ಷ ಪ್ರವೀಣ್, ಕೋಶಾಧಿಕಾರಿ ಜಗದೀಶ್, ಸಲಹೆಗಾರರಾದ ತೇಜ್‌ಕುಮಾರ್, ಹಮೀದ್ ಮತ್ತು ಸದಸ್ಯರುಗಳು ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಆರ್‌ಟಿಒರವರು ಇದರ ವಿರುದ್ದ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.