ಪುತ್ತೂರು:ಪ್ರಸ್ತುತ ಮಳೆಗಾಲವಾಗಿದ್ದರೂ ಈ ಹಿಂದಿನಂತೆ ಸರಿಯಾಗಿ ಮಳೆ ಬರುತ್ತಿಲ್ಲ.ಬಿಸಿಲಿನೊಂದಿಗೆ ಬಿಟ್ಟು ಬಿಟ್ಟು ಮಳೆಯಾಗುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ, ಬೇಸಿಗೆಯಲ್ಲಿ ಕಾಡುತ್ತಿರುವ ಕೆಂಗಣ್ಣು ಈಗಲೂ ಅಲ್ಲಲ್ಲಿ ಮಕ್ಕಳನ್ನು ಕಾಡುತ್ತಿರುವ ಕುರಿತು ವರದಿಯಾಗುತ್ತಿದೆ.ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಂದಿಬ್ಬರು ಕೆಂಗಣ್ಣು ನೋವಿಗೆ ಚಿಕಿತ್ಸೆ ಪಡೆದಿದ್ದರೂ ಹೊರಗಡೆ ಹೆಚ್ಚಿನ ಸಂಖ್ಯೆಯಲ್ಲಿ ಕೆಂಗಣ್ಣು ನೋವು ಬಾಧಿಸುತ್ತಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಂಗಣ್ಣು ಬೇನೆ ಈಗ ವರ್ಷದ ಎಲ್ಲಾ ಕಾಲದಲ್ಲೂ ಕಾಣಿಸಿಕೊಳ್ಳುತ್ತಿದೆ.ಇದಕ್ಕೆ ಕಾರಣ ಸೋಂಕು ಎನ್ನುತ್ತಾರೆ ತಜ್ಞರು.ಕಣ್ಣುಗಳ ಹೊರಭಾಗದ ಸುತ್ತ ಇರುವ ಸೂಕ್ಷ್ಮ ಪದರ(ಕಂಜಕ್ಟಿವಾ)ಕ್ಕೆ ಸೋಂಕು ತಗುಲಿದಾಗ ಕೆಂಗಣ್ಣು ಬೇನೆ ಕಾಣಿಸಿಕೊಳ್ಳುತ್ತದೆ.ಸಾಮಾನ್ಯವಾಗಿ ವೈರಸ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುವ ಈ ಸಮಸ್ಯೆ ಇತ್ತೀಚೆಗೆ ಪುತ್ತೂರಿನಲ್ಲಿ ಹೆಚ್ಚಾಗಿದೆ.ಶಾಲೆಗಳಲ್ಲಿ ಈ ಸೋಂಕು ಹೆಚ್ಚು ವೇಗವಾಗಿ ಹರಡುತ್ತದೆ.ಕೆಂಗಣ್ಣಿಗೆ ಬಾಧಿತರಾಗುವವರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳೇ ಹೆಚ್ಚಿದ್ದು ಕೆಂಗಣ್ಣಿನ ವೈರಸ್ ಬಹಳಷ್ಟು ವೇಗವಾಗಿ ಹರಡುತ್ತದೆ.ರೋಗ ಲಕ್ಷಣ ಕಂಡು ಬಂದರೆ ಗುಣವಾಗುವ ತನಕ ಮಕ್ಕಳು ಶಾಲೆಗೆ ಹೋಗದೇ ಇರುವುದು ಉತ್ತಮ.ಯಾವುದೇ ಅಪಾಯ ಇಲ್ಲದಿದ್ದರೂ ಹರಡುವ ಕಾಯಿಲೆಯಾಗಿರುವುದರಿಂದ ಮುಂಜಾಗ್ರತೆ ಅಗತ್ಯ.ಕೆಂಗಣ್ಣಿನ ಲಕ್ಷಣ ಕಂಡುಬಂದ ತಕ್ಷಣವೇ ಹತ್ತಿರದ ಆಸ್ಪತ್ರೆಯಿಂದ ಔಷಧ ಪಡೆಯುವುದು ಸೂಕ್ತ.
ಕೆಂಗಣ್ಣು ಬೇನೆಯ ಲಕ್ಷಣಗಳೇನು?:
ಕಣ್ಣಿನ ಸುತ್ತ ಬಿಳಿಯ ಅಥವಾ ಹಳದಿ ಬಣ್ಣದ ಲೋಳೆ ಆವರಿಸಿಕೊಳ್ಳುತ್ತದೆ.ಕಣ್ಣುಗಳು ಕೆಂಪಗಾಗಿ ನೀರು ಸುರಿಯುತ್ತದೆ. ಒಂದು ಕಣ್ಣಿಗೆ ಬಂದರೆ ಅದರ ಸೋಂಕು ಇನ್ನೊಂದು ಕಣ್ಣಿಗೂ ಸುಲಭವಾಗಿ ಹರಡುತ್ತದೆ.ಈ ಎಲ್ಲಾ ಲಕ್ಷಣಗಳೊಂದಿಗೆ ವೈರಲ್ ಕೆಂಗಣ್ಣು ಬೇನೆಯಲ್ಲಿ ಕಣ್ಣಿನ ಊತ ಮತ್ತು ಲಿಂಪ್ ಗ್ರಂಥಿಯ ಸೋಂಕಿನಿಂದ ಕಿವಿಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.ಕೆಲವು ರೋಗಿಗಳಲ್ಲಿ ಜ್ವರ, ಗಂಟಲು ನೋವು ಮತ್ತು ಶೀತ ಸೇರಿದಂತೆ ಹಲವು ಲಕ್ಷಣಗಳು ಕಂಡು ಬರುತ್ತವೆ.
ಇತರರಿಗೂ ಹರಡುತ್ತದೆ: ಕೆಂಗಣ್ಣು ಬೇನೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ದಿಟ್ಟಿಸಿ ನೋಡುವುದರಿಂದ ಈ ರೋಗ ಹರಡುವುದಿಲ್ಲ.ಆದರೆ, ಈ ಸಮಸ್ಯೆಯುಳ್ಳ ವ್ಯಕ್ತಿಯ ಜತೆಗೆ ಹಸ್ತಲಾಘವ, ರೋಗಿ ಬಳಸುವ ವಸ್ತುಗಳ ಬಳಕೆಯಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.ಹಾಗಾಗಿ ಕೈ ಹಾಗೂ ಕಣ್ಣುಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
ಅದಷ್ಟು ಶುಚಿತ್ವ ಕಾಪಾಡಿಕೊಳ್ಳಿ, ಚಿಕಿತ್ಸೆ ಪಡೆಯಿರಿ
ಕೆಂಗಣ್ಣು ಇದ್ದವರು ಆದಷ್ಟು ಶುಚಿತ್ವ ಕಾಪಾಡಿಕೊಳ್ಳುವುದರಿಂದ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು.ಯಾವುದೇ ರೀತಿಯ ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳಿ-
ಡಾ.ಆಶಾ ಪುತ್ತೂರಾಯ, ಆಡಳಿತ ವೈದ್ಯಾಧಿಕಾರಿ ಸರಕಾರಿ ಆಸ್ಪತ್ರೆ ಪುತ್ತೂರು