ಪುತ್ತೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ವಯೋವೃದ್ಧೆಯೊಬ್ಬರು ವಾಸವಿದ್ದ ಮನೆಯೊಂದು ಮುರಿದು ಬಿದ್ದು ಅಜ್ಜಿ ಪ್ರಾಣಾಪಾಯದಿಂದ ಪಾರಾದ ಘಟನೆ ಜು.23 ರಂದು ರಾತ್ರಿ ಕೆಯ್ಯೂರು ಗ್ರಾಮದ ತೆಗ್ಗು ಕಟ್ಟೇಜಿರ್ ಎಂಬಲ್ಲಿಯಿಂದ ವರದಿ ಆಗಿದೆ. ಕಳೆದ 30 ವರ್ಷಗಳಿಂದ ಕಟ್ಟೇಜಿರ್ ದಿ.ಉಪ್ಪಕುಂಞ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಇದೀಗ ಇವರ ಪತ್ನಿ ಬೀಪಾತುಮ್ಮ ಎಂಬವರು ಈ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ ರಾತ್ರಿ ವೇಳೆ ತಂಗಲು ಪಕ್ಕದ ಮನೆಗೆ ಹೋಗುತ್ತಿದ್ದರು ಎನ್ನಲಾಗಿದ್ದು ಅದರಂತೆ ಜು.23 ರಂದು ರಾತ್ರಿ ಕೂಡ ಪಕ್ಕದ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮನೆ ಬೀಳುವ ಸಮಯದಲ್ಲಿ ಮನೆಯಲ್ಲಿ ಅಜ್ಜಿ ಇಲ್ಲದೇ ಇದ್ದುದರಿಂದ ಅಪಾಯ ತಪ್ಪಿದೆ ಎನ್ನುತ್ತಾರೆ ಸ್ಥಳೀಯರು.
ಮನೆ ಸಂಪೂರ್ಣ ಮುರಿದು ಬಿದ್ದ ಪರಿಣಾಮ ಹಂಚು, ಪಕ್ಕಾಸುಗಳು ತುಂಡಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ ತಿಳಿಸಿದ್ದಾರೆ. ಸ್ಥಳಕ್ಕೆ ಕೆಯ್ಯೂರು ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತ ಅಧಿಕಾರಿ ಸ್ವಾತಿ, ಸಹಾಯಕ ನಾರಾಯಣ್ ಸಹಿತ ಹಲವು ಮಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಮನೆಯಲ್ಲಿ ಅಜ್ಜಿಯೊಬ್ಬರೇ ವಾಸವಾಗಿದ್ದರು. ಭಾರೀ ಮಳೆಯ ಕಾರಣ ರಾತ್ರಿ ಸಮಯ ಪಕ್ಕದ ಮನೆಗೆ ಹೋಗುತ್ತಿದ್ದರು. ಮನೆ ಸಂಪೂರ್ಣ ಮುರಿದು ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ಈ ಬಗ್ಗೆ ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಅಜ್ಜಿಗೆ ತುರ್ತು ಮನೆ ನಿರ್ಮಿಸಿ ಕೊಡಬೇಕಾದ ಅಗತ್ಯತೆ ಇದೆ. ಈ ಬಗ್ಗೆ ಶಾಸಕರಿಗೂ ಮಾಹಿತಿ ನೀಡಲಾಗುವುದು.
ಅಬ್ದುಲ್ ಖಾದರ್ ಮೇರ್ಲ, ಸದಸ್ಯರು ಕೆಯ್ಯೂರು ಗ್ರಾಪಂ