ಭ್ರಷ್ಟಾಚಾರ ವಿರುದ್ಧ ಅಶೋಕ್ ರೈ ಕೆಲಸ ಮಾಡೇ ಮಾಡ್ತಾರೆ, ನೋ ಕನ್ಸೆಶನ್..ತಾ.ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ – ಪ್ರತಿಭಾ ಪುರಸ್ಕಾರ

0

ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಮಾತು

ಪುತ್ತೂರು: ಶಾಸನ ಮಾಡುವವರು ಶಾಸಕಾಂಗ, ಶಾಸಕಾಂಗದಲ್ಲಿ ಆದ ನಿರ್ಣಯವನ್ನು ಜನರಿಗೆ ತಿಳಿಸುವತ್ತ ಕಾರ್ಯಾಂಗ ಕೆಲಸ ಮಾಡಬೇಕು. ಎರಡೂ ಕಡೆ ನ್ಯಾಯ ಸಿಗದಿದ್ದಾಗ ನ್ಯಾಯಾಂಗ ಇದ್ದೇ ಇದೆ. ಇವೆಲ್ಲವುದರಿಂದ ಕೆಲಸವಾಗದಿದ್ದಾಗ ತಪ್ಪು ಮಾಡಿದ್ರೆ ತಿದ್ದುವ ಕೆಲಸ ಮಾಡುವ ಪತ್ರಿಕಾಂಗ ಇದ್ದೇ ಇದೆ. ಆದ್ದರಿಂದ ಯಾವುದೇ ಇಲಾಖೆಯಾಗಲಿ ಯಾರು ಭ್ರಷ್ಟಾಚಾರ ಎಸಗುತ್ತಾರೋ ಅವರ ವಿರುದ್ಧ ಅಶೋಕ್ ರೈ ಕೆಲಸ ಮಾಡೇ ಮಾಡ್ತಾರೆ, ಇದಕ್ಕೆ ನೋ ಕನ್ಸೆಶನ್ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.


ಜು.25ರಂದು ಸರಕಾರಿ ನೌಕರರ ಸಭಾಭವನದಲ್ಲಿ ಜರಗಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ತಾಲೂಕು ಶಾಖೆ ಪುತ್ತೂರು ಇದರ ವತಿಯಿಂದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿದರು. ವಿಶ್ವದಲ್ಲಿ ತೊಂದರೆ ಇಲ್ಲದವರು ಯಾರೂ ಇಲ್ಲ. ಸಮಸ್ಯೆನೇ ಇಲ್ಲದ ಜಾಗ ಅಂದ್ರೆ ಅದು ದೇವರ ಸ್ವರ್ಗ ಮಾತ್ರ. ಅದರಂತೆ ಎಲ್ಲಾ ಕ್ಷೇತ್ರದಲ್ಲಿ ತೊಂದರೆ ಇದೆ ಆದರೆ ಇದ್ದಂತಹ ತೊಂದರೆಯನ್ನು ನಿಭಾಯಿಸಿಕೊಂಡು ಹೋಗುವುದೇ ಜೀವನವಾಗಿದೆ. ಸರಕಾರಿ ಇಲಾಖೆಯವರು ಬಡವರಿಗೆ ಸೂಕ್ತ ಸ್ಪಂದನೆ ನೀಡಿ, ಕಾನೂನಿನಡಿಯಲ್ಲಿ ಕೆಲಸ ಮಾಡಿಕೊಡಿ, ಅವರನ್ನು ಸತಾಯಿಸಬೇಡಿ. ಜನರಿಗೆ ತಿಳಿಸುವ ತಾಳ್ಮೆ ಮನೋಭಾವನೆ ಇರಲಿ. ಹಣವಿರುವವರು ಯಾವ ಕೆಲಸ ಕೂಡ ಮಾಡಿಸಿಕೊಂಡು ಬಿಡುತ್ತಾರೆ ಎಂದ ಅವರು ಶಾಸಕರು ಎಂಬುದು ಜನರ ಸಮಸ್ಯೆಯನ್ನು ಆಲಿಸುವ ಮತ್ತು ಜನರ ಮಧ್ಯೆ ಇರುವ ಕೊಂಡಿ. ಯಾವುದೇ ಕ್ಷೇತ್ರವಿರಲಿ, ಇಲಾಖೆಯಿರಲಿ, ಎಲ್ಲರೂ ಜೊತೆಗೂಡಿ ಕೆಲಸ ಮಾಡಿದಾಗ ಸೇವೆಯ ಸಮರ್ಪಣೆ ಆಗೋದು ಎಂದು ಅವರು ಹೇಳಿದರು.]

ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕರು ವಿಧಾನಸಭೆಯಲ್ಲಿ ಮಾತನಾಡಿ ನ್ಯಾಯ ಒದಗಿಸಿಕೊಡಬೇಕು-ಶಿವಾನಂದ ಆಚಾರ್ಯ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯ ಸರಕಾರಿ ನೌಕರರ ಸಂಘ ಇದರ ಪುತ್ತೂರು ತಾಲೂಕಿನ ಅಧ್ಯಕ್ಷ ಶಿವಾನಂದ ಆಚಾರ್ಯರವರು ಮಾತನಾಡಿ, ರಾಜ್ಯ ಸರಕಾರಿ ನೌಕರರ ವೇತನವನ್ನು ಶೇ.40 ಹೆಚ್ಚಳಗೊಳಿಸಬೇಕು ಎಂಬ ಬಗ್ಗೆ ಇತ್ತೀಚೆಗೆ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಿಂದಿನ ರಾಜ್ಯ ಸರಕಾರ ಸರಕಾರಿ ನೌಕರರ ವೇತನವನ್ನು ಶೇ.17 ಏರಿಸಿತ್ತು. ಸರಕಾರದ ಪ್ರತಿಯೊಂದು ಕಾರ್ಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವವರು ಸರಕಾರಿ ನೌಕರರು. ಆದರೆ ಸರಕಾರಿ ನೌಕರರ ಸಂಬಳದ ಬಗ್ಗೆ ವಿಳಂಬ ಧೋರಣೆ ಯಾಕೆ?. ಶಾಸಕ ಅಶೋಕ್ ರೈಯವರು ಮೊದಲ ಅಧಿವೇಶನದಲ್ಲಿ ಸರಕಾರಿ ನೌಕರರ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದೀರಿ. ಮುಂದಿನ ದಿನಗಳಲ್ಲಿ ಸರಕಾರಿ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕರು ವಿಧಾನಸಭೆಯಲ್ಲಿ ಮಾತನಾಡಿ ನ್ಯಾಯ ಒದಗಿಸಿಕೊಡಬೇಕು ಎಂದರು.
ಸರಕಾರ ಸರಕಾರಿ ನೌಕರರ ಪಾಲಿಗೆ ಆಶಾಕಿರಣವಾಗಿರಬೇಕು-ಭರತ್ ಬಿ.ಎಂ:
ಮುಖ್ಯ ಅತಿಥಿಗಳಾಗಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ. ಮಾತನಾಡಿ, ರಾಜ್ಯ ಸರಕಾರವು ಕೇಂದ್ರ ಸರಕಾರದ ನೌಕರರಿಗೆ ಸರಿಸಮಾನವಾಗಿ ವೇತನ ನೀಡಬೇಕು. ಈ ನಿಟ್ಟಿನಲ್ಲಿ ಏಳನೇ ವೇತನ ಆಯೋಗ ಶೀಘ್ರ ಜಾರಿಗೊಳ್ಳಬೇಕು. ಸರಕಾರಿ ಯೋಜನೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಸಂದರ್ಭದಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು. ಹೊಸ ಪಿಂಚಣಿ ಯೋಜನೆ ಬದಲು ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸುವ ಮೂಲಕ ಸರಕಾರ ಸರಕಾರಿ ನೌಕರರ ಪಾಲಿಗೆ ಆಶಾಕಿರಣವಾಗಿರಬೇಕು ಎಂದರು.

ಸರಕಾರಿ ನೌಕರರ ಪಾಲಿಗೆ ಧ್ವನಿಗೂಡಿಸುವ ಕೆಲಸವಾಗಬೇಕಿದೆ-ಶ್ರೀಲತಾ:
ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ರೀಲತಾ ಮಾತನಾಡಿ, ಸರಕಾರಿ ಇಲಾಖೆಯಲ್ಲಿ ಮೊದಲೇ ಸರಕಾರಿ ನೌಕರರ ಕೊರತೆಯಿದೆ. ಈ ಸನ್ನಿವೇಶದಲ್ಲಿ ಸರಕಾರಿ ಅಧಿಕಾರಿಗಳ ಕಾರ್ಯಭಾರ ದುಪ್ಪಟ್ಟಾಗಿ ಕಾರ್ಯದೊತ್ತಡವನ್ನು ಎದುರಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕಾಗಿದೆ. ಈ ರೀತಿಯ ಕಾರ್ಯಾಭಾರದ ಒತ್ತಡದಿಂದ ಸರಕಾರಿ ನೌಕರರ ಕೌಟುಂಬಿಕ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಿಸಬೇಕಾಗಿತ್ತದೆ. ಸರಕಾರಿ ನೌಕರರಲ್ಲಿ ಒಗ್ಗಟ್ಟು ಬೇಕು. ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸುವ ಸರಕಾರಿ ನೌಕರರಿಗೆ ಅನ್ಯಾಯವಾದಾಗ ಅನ್ಯಾಯವಾಗಿರುವ ಸರಕಾರಿ ನೌಕರರ ಪಾಲಿಗೆ ಧ್ವನಿಗೂಡಿಸುವ ಕೆಲಸವಾಗಬೇಕಿದೆ ಎಂದರು.

ತಾ.ಸರಕಾರಿ ನೌಕರರ ಸಂಘ ಕ್ರಿಯಾಶೀಲವಾಗಿ ಬೆಳೆಯುತ್ತಿದೆ-ಮಹೇಶ್ ಎಸ್:
ಪುತ್ತೂರು ಉಪ ಖಜಾನೆ ಸಹಾಯಕ ನಿರ್ದೇಶಕ ಮಹೇಶ್ ಎಸ್ ಮಾತನಾಡಿ, ಪ್ರಸ್ತುತ ದಿನದಲ್ಲಿ ಸರಕಾರಿ ನೌಕರಿ ಸಿಗುವುದು ಬಹಳ ಕಷ್ಟ. ಕಾಲ ಕಾಲಕ್ಕೆ ತಕ್ಕಂತೆ ಸರಕಾರಿ ನೌಕರರ ಬೇಡಿಕೆಯನ್ನು ಈಡೇರಿಕೆಯಾಗಬೇಕಿದ್ದರೆ ಸಂಘಟನೆಯ ಅಗತ್ಯ ಬಹಳ ಬೇಕಾಗಿದೆ. ಸಂಘಟನೆಗಳು ಕೇವಲ ಹೆಸರಿಗೆ ತಕ್ಕಂತೆ ಆಗಿರಬಾರದು. ಈ ನಿಟ್ಟಿನಲ್ಲಿ ಪುತ್ತೂರಿನ ಸರಕಾರಿ ನೌಕರರ ಸಂಘಟನೆಯು ಬಹಳ ಸರಕಾರಿ ನೌಕರರ ಪಾಲಿಗೆ ಕ್ರಿಯಾಶೀಲ, ಶಕ್ತಿಯುತ ಸಂಘಟನೆಯಾಗಿ ಬೆಳೀತಿದೆ ಎಂದರು.

ಸರಕಾರಿ ನೌಕರರ ಸಂಘದ ಸಹಕಾರಿ ಸಂಘದ ನಿರ್ಮಾಣವಾಗಬೇಕಿದೆ-ನಾಗೇಶ್ ಕೆ:
ಸಂಘದ ಮಾಜಿ ಕೋಶಾಧಿಕಾರಿ ನಾಗೇಶ್ ಕೆ. ಮಾತನಾಡಿ, ನೂತನ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಸರಕಾರಿ ನೌಕರರು ದೇಣಿಗೆ ನೀಡಿದ್ದರಿಂದ ಕಟ್ಟಡ ಸುಂದರವಾಗಿ ನಿರ್ಮಾಣವಾಗಿದೆ. ಸರಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣವಾಗಿದೆ, ಮುಂದಿನ ದಿನಗಳಲ್ಲಿ ಸರಕಾರಿ ನೌಕರರ ಸಂಘದ ಸಹಕಾರಿ ಸಂಘದ ನಿರ್ಮಾಣವಾಗಬೇಕಿದೆ. ನೂತನ ಪಿಂಚಣಿ ಯೋಜನೆಯಲ್ಲಿ ನಿವೃತ್ತಿಯಾಗುತ್ತಿರುವ ಸರಕಾರಿ ನೌಕರರಿಗೆ ನಿವೃತ್ತಿ ಜೀವನ ಕಷ್ಟಸಾಧ್ಯ. ಆದ್ದರಿಂದ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಿದರೆ ಸರಕಾರಿ ನೌಕರನ ಜೀವನ ಉಜ್ವಲವೆನಿಸುವುದು ಎಂದರು.

ಭ್ರಷ್ಟಾಚಾರ ರಹಿತ ಪುತ್ತೂರು ಆಗಬೇಕು ಶಾಸಕರ ಚಿಂತನೆಗೆ ಸಹಕರಿಸಿ-ಮೌರಿಸ್ ಮಸ್ಕರೇನ್ಹಸ್:
ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಸಂಪನ್ಮೂಲ ಕ್ರೋಢೀಕರಣದ ಸಮಸ್ಯೆಯಿಂದಾಗಿ ಸರಕಾರಿ ನೌಕರರ ಸಂಘದಲ್ಲಿ ಹಿಂದೆ ಕಾರ್ಯಕ್ರಮ ನಡೀತಿರಲಿಲ್ಲ. ಈಗ ಸರಕಾರಿ ನೌಕರರ ಒಗ್ಗಟ್ಟುವಿಕೆಯಿಂದಾಗ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ಕೆಲವೇ ಸರಕಾರಿ ಇಲಾಖೆಗಳಲ್ಲಿನ ವ್ಯಕ್ತಿಗಳಿಂದಾಗಿ ನಡೆಯುವ ಭ್ರಷ್ಟಾಚಾರದಿಂದಾಗಿ ಎಲ್ಲಾ ಸರಕಾರಿ ನೌಕರರಿಗೆ ಕೆಟ್ಟ ಹೆಸರು ಬರುವಂತಾಗಿದೆ. ಪುತ್ತೂರು ಶಾಸಕರಿಗೆ ಭ್ರಷ್ಟಾಚಾರ ರಹಿತ ಪುತ್ತೂರು ಆಗಬೇಕು ಎನ್ನುವ ಚಿಂತನೆಗೆ ಸರಕಾರಿ ನೌಕರರು ಸಹಾಯ ಹಸ್ತ ನೀಡಬೇಕಾಗಿದೆ. ಇದಕ್ಕೆ ನಿದರ್ಶನ ಪುತ್ತೂರಿನ ಶಾಸಕರು. ಯಾಕೆಂದರೆ ಯಾರದೇ ಹಣವನ್ನು ಖರ್ಚು ಮಾಡಿ ಅವರು ಶಾಸಕರಾಗಿದ್ದಲ್ಲ. ತನ್ನ ಸ್ವಂತ ಹಣವನ್ನು ಖರ್ಚು ಮಾಡಿ ಚುನಾವಣೆಯನ್ನು ಎದುರಿಸಿದವರಾಗಿದ್ದಾರೆ ಎಂದರು.

ಡಿಸ್ಟಿಂಕ್ಷನ್ ವಿಜೇತರಿಗೆ ಅಭಿನಂದನೆ:
ಸರಕಾರಿ ನೌಕರರ ಮಕ್ಕಳಾಗಿದ್ದು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಅವನೀಶ್ ಎನ್.ಎಸ್, ಅಮೂಲ್ಯ, ಶ್ರೇಷ್ಟ ಡಿ, ಅಜಿತ್ ಕುಮಾರ್ ಕೆ.ಎಸ್, ಕೆ.ಆರ್ ಮೈತ್ರಿ, ಪ್ರಥ್ವಿ ಪಿ, ಅನ್ವಿತ್ ಎನ್, ವಿರಾಜಕ್ ಭಟ್, ನೇಹಾ ಬಿ.ಎಚ್, ಶ್ಯಾಂ ಸಫನ್ಯ, ಶ್ರೇಯಾ ಪಿ, ಅಚಲ್ ಕೆ, ಮೆಲ್ಟನ್ ಲೋಬೊ, ಅವನಿ ರೈ, ಶ್ರಾವ್ಯ ಎಂ.ಆರ್, ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ವಿಭಾ ಎಚ್.ಡಿ, ಹರ್ಷ ಕೆ.ಎಲ್, ಸೃಜನ್ ಆರ್.ಶೆಟ್ಟಿ, ತನ್ವಿ ರೈ.ಎನ್, ಸಹನಾ ಕೆ, ಯಶಸ್ವಿನಿ ಶೆಟ್ಟಿ, ಫಾತಿಮತ್ ಹನಿಯಾ, ಸಾಯಿಚಂದ್ ಶೆಟ್ಟಿ, ಗ್ರೀಷ್ಮಾ ವಿ.ನಾಯ್ಕ್, ಕೆ.ಜೆ ಯಜ್ಞಶ್ರೀ, ಆಕಾಶ್ ಜೆ.ರಾವ್, ಅಶ್ವಿತ್ ಪಿ.ಕೆ, ಅಮೋಘ್ ಎಸ್.ಬಿ, ಚೈತನ್ಯ ಪಿ.ಎಸ್.ರವರುಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಮುಂಡೂರು ಶಾಲಾ ಶಿಕ್ಷಕಿ ಶಶಿಕಲಾ ಹಾಗೂ ಕುಟ್ಟಿನೋಪಿನಡ್ಕ ಶಾಲೆಯ ಶಿಕ್ಷಕಿ ಸುನೀತಾ ಪ್ರಾರ್ಥಿಸಿದರು. ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಬ್ರಹಾಂ ಎಸ್.ಎ ವರದಿ ಮಂಡಿಸಿದರು. ಜೊತೆ ಕೋಶಾಧಿಕಾರಿ ಕವಿತಾರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರಾಮಚಂದ್ರ, ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಕೋಶಾಧಿಕಾರಿ ಕೃಷ್ಣ ಬಿ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಹೊನ್ನಪ್ಪ ಗೌಡ ಹಾಗೂ ಪದ್ಮಾವತಿ ಎಂ.ಆರ್‌ರವರು ಸನ್ಮಾನಿತರ ಪರಿಚಯ ಮಾಡಿದರು. ಆರೋಗ್ಯ ಇಲಾಖೆಯ ಪದ್ಮನಾಭ್ ಶಿಂಧೆ, ಶಿಕ್ಷಣ ಇಲಾಖೆಯ ಗಿರಿಧರ್ ಗೌಡ, ತನುಜಾ, ಜ್ಯುಲಿಯಾನ ಮೊರಾಸ್, ವಾಣಿಜ್ಯ ಇಲಾಖೆಯ ವರುಣ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ರೈ, ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ, ಅಬಕಾರಿ ಇಲಾಖೆಯ ವಿಜಯ ಕುಮಾರ್, ತೋಟಗಾರಿಕಾ ಇಲಾಖೆಯ ಸುಧೀರ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅಬಕಾರಿ ಇಲಾಖೆಯ ವಿಜಯ ಕುಮಾರ್ ವಂದಿಸಿದರು. ಸಂಘದ ಕ್ರೀಡಾ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಮಹಮದ್ ಅಶ್ರಫ್ ಹಾಗೂ ಸದಸ್ಯ ಅರಣ್ಯ ಇಲಾಖೆಯ ಚಿದಾನಂದ ಬಿ ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ನೌಕರರ ಬೇಡಿಕೆ ಕುರಿತು ವಿಧಾನ ಸಭೆಯಲ್ಲಿ ಧ್ವನಿ ಎತ್ತಲಿದ್ದೇನೆ..
ಸರಕಾರಿ ನೌಕರರು ಎಂದಾಕ್ಷಣ ಭ್ರಷ್ಟಾಚಾರ ಎಂಬ ಉಲ್ಲೇಖ ಬರುತ್ತದೆ. ಓರ್ವ ಸರಕಾರಿ ಅಧಿಕಾರಿಗೆ ಕನಿಷ್ಟ ರೂ.25-30 ಸಾವಿರ ವೇತನ, ಖಾಸಗಿ ಸಂಸ್ಥೆಯ ನೌಕರರಿಗೆ ರೂ.70 ಸಾವಿರ ಮೇಲ್ಪಟ್ಟು, ಅದೇ ರೀತಿ ಯುಜಿಸಿ ವೇತನ ಪಡೆಯುವ ಅಧ್ಯಾಪಕರಿಗೆ ರೂ.1.90 ಲಕ್ಷ, ಪ್ರಾಥಮಿಕ, ಪ್ರೌಢ ಶಿಕ್ಷಕರಿಗೆ ರೂ.30 ಸಾವಿರ. ಈ ನಿಟ್ಟಿನಲ್ಲಿ ಸರಕಾರದ ಕಾನೂನುನುಗಳಲ್ಲಿ ಮಾರ್ಪಾಡು ಮಾಡುವ ಅವಶ್ಯಕತೆಯಿದೆ. ಓರ್ವ ಸರಕಾರಿ ನೌಕರನಿಗೆ ಸೂಕ್ತ ವೇತನ ನೀಡಿದ್ದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಪ್ರಸಕ್ತ ರಾಜ್ಯದಲ್ಲಿ ಸರಕಾರಿ ನೌಕರರ ಸಂಖ್ಯೆಯಲ್ಲಿ ಕೊರತೆಯಿದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರ ಸೇರಿದಂತೆ ಮುಂದಿನ ದಿನಗಳಲ್ಲಿ ಶೇ.25ರಷ್ಟು ಸರಕಾರಿ ನೌಕರರನ್ನು ಖಾಯಂಗೊಳಿಸುವ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಸರಕಾರಿ ನೌಕರರ ಏನೇ ಬೇಡಿಕೆಯಿದ್ದರೂ ಅದರ ಅಂಕಿ-ಅಂಶಗಳನ್ನು ಕೊಟ್ಟರೆ ವಿಧಾನಸಭೆಯಲ್ಲಿ ಈ ಕುರಿತು ಧ್ವನಿ ಎತ್ತಲಿದ್ದೇನೆ.
-ಅಶೋಕ್ ಕುಮಾರ್ ರೈ,
ಶಾಸಕರು, ಪುತ್ತೂರು

ಪ್ರಮುಖ ಬೇಡಿಕೆಗಳು..
-ಹೊಸ ಪಿಂಚಣಿ ಯೋಜನೆ ಬದಲು ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸಿ ಸರಕಾರಿ ನೌಕರರ ಜೀವನಕ್ಕೆ ಭದ್ರತೆ ಒದಗಿಸುವುದು.
-ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ವೇತನ ತಾರಾತಮ್ಯ ನಿವಾರಿಸಿ ಏಳನೇ ವೇತನ ಆಯೋಗ ಶೀಘ್ರ ಜಾರಿಯಾಗಲಿ
-ಈಗಾಗಲೇ 5.26 ಲಕ್ಷ ಸರಕಾರಿ ನೌಕರರಿದ್ದು, ಬಾಕಿ ಉಳಿದ 2.69 ಲಕ್ಷ ಸರಕಾರಿ ನೌಕರರ ಶೀಘ್ರ ನೇಮಕಾತಿಗೊಳಿಸಿ ಸರಕಾರಿ ನೌಕರರ ಕಾರ್ಯದೊತ್ತಡವನ್ನು ಕಡಿಮೆಗೊಳಿಸಬೇಕು
-ಸರಕಾರಿ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಸರಕಾರಿ ನೌಕರರಿಗೆ ಭದ್ರತೆಯನ್ನು ಒದಗಿಸುವುದು

ಸನ್ಮಾನ..
ನೂತನವಾಗಿ ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈ ಅಲ್ಲದೆ ಶ್ರೇಷ್ಟ ಪಶು ವೈದ್ಯಾಧಿಕಾರಿ ಪ್ರಶಸ್ತಿ ಪುರಸ್ಕೃತ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಸನ್ನ ಹೆಬ್ಬಾರ್ ಹಾಗೂ ಕರ್ನಾಟಕ ಸರಕಾರದಿಂದ ವೈದ್ಯರ ದಿನಾಚರಣೆಯಂದು ಶ್ರೇಷ್ಟ ವೈದ್ಯ ಪ್ರಶಸ್ತಿ ಪುರಸ್ಕೃತರಾಗಿರುವ ತಾಲೂಕು ಸರಕಾರಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ.ಅಜಯ್ ರವರನ್ನು ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here