ನೆಲ್ಯಾಡಿ: ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಣ್ಣಂಪಾಡಿಯಲ್ಲಿ ಜು.25ರಂದು ರಾತ್ರಿ ನಡೆದಿದೆ.
ಮೃತ ಬೈಕ್ ಸವಾರರನ್ನು ನೆಲ್ಯಾಡಿ ಗ್ರಾಮದ ಮೊರಂಕಳ ನಿವಾಸಿ ಹಮ್ಮಬ್ಬರವರ ಪುತ್ರ ಇಕ್ಬಾಲ್(25ವ.) ಎಂದು ಗುರುತಿಸಲಾಗಿದೆ. ಸ್ವಂತ ರಿಕ್ಷಾ ಹೊಂದಿರುವ ಇಕ್ಬಾಲ್ರವರು ನೆಲ್ಯಾಡಿಯಲ್ಲಿ ಬಾಡಿಗೆ ನಡೆಸುತ್ತಿದ್ದರು. ಸಂಜೆ ಕೆಲಸದ ನಿಮಿತ್ತ ಬೈಕ್ನಲ್ಲಿ ಉಪ್ಪಿನಂಗಡಿಗೆ ಬಂದವರು ಮತ್ತೆ ನೆಲ್ಯಾಡಿಗೆ ಹೋಗುತ್ತಿದ್ದ ವೇಳೆ ಸಣ್ಣಂಪಾಡಿ ಸಮೀಪ ಕೆಟ್ಟು ನಿಂತಿದ್ದ ಪಾರ್ಸೆಲ್ ಸಾಗಾಟದ ವಾಹನದ ಹಿಂಭಾಕ್ಕೆ ಬೈಕ್ ಡಿಕ್ಕಿಯಾಗಿತ್ತು.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಇಕ್ಬಾಲ್ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಇಕ್ಬಾಲ್ರವರು ತಂದೆ,ತಾಯಿ, ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.