*ಪ್ರವೀಣ್ ಚೆನ್ನಾವರ
ಸವಣೂರು: ಸರಕಾರಿ ಶಾಲೆಗಳು ಉಳಿಯಬೇಕು.ಅವು ಅಭಿವೃದ್ದಿಯಾಗಬೇಕು,ಜತೆಗೆ ಸರಕಾರಿ ಶಾಲೆಗಳ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಜನಪ್ರತಿನಿಧಿ ಹಾಗೂ ಸರಕಾರದಿಂದ ಕೇಳುವ ಮಾತು. ಆದರೆ ಶಾಲೆಯ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ಆಡಳಿತ ಯಂತ್ರ ಎಡವುತ್ತಿದೆ ಎಂಬುದು ಅಲ್ಲಲ್ಲಿ ಕೇಳಿಬರುತ್ತಿರುವ ಮಾತು. ಕಡಬ ತಾಲೂಕಿನ ಸವಣೂರು ಗ್ರಾಮದ ಮೊಗರು ಸ.ಹಿ.ಪ್ರಾ.ಶಾಲಾ ಕೊಠಡಿಯೊಂದು ಬಿರುಕು ಬಿಟ್ಟು ಅಪಾಯದ ಅಂಚಿನಲ್ಲಿದ್ದು, ಎಚ್ಚರಿಕೆಯ ಕರೆಗಂಟೆ ಬಡಿಯುತ್ತಿದೆ, ಅಪಾಯದ ಆತಂಕದಲ್ಲಿಯೇ ಮಕ್ಕಳ ಕಲಿಕೆ ಮುಂದುವರಿದಿದೆ.ಶಾಲಾ ತರಗತಿ ಕೊಠಡಿಯೊಂದರಲ್ಲಿ ಬಿರುಕು ಬಿಟ್ಟಿದ್ದು, ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗತೊಡಗಿದೆ.
105 ಮಕ್ಕಳು
ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಸ್ತುತ ಶಾಲೆಯಲ್ಲಿ 105 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲಾಭಿವೃದ್ದಿ ಸಮಿತಿಯ ನೇತೃತ್ವದಲ್ಲಿ ಶಾಲೆಗೆ ದಾನಿಗಳಿಂದ ಅಗತ್ಯವಾಗಿರುವ ಕೆಲ ಅವಶ್ಯಕತೆಗಳನ್ನು ಪಡೆದುಕೊಂಡು ಮುನ್ನಡೆಸಲಾಗುತ್ತಿದ್ದು,ಇದೀಗ ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರಿಗೆ ದೊಡ್ಡ ಸಮಸ್ಯೆಯೊಂದು ತಲೆದೋರಿದೆ.ಅದೇ ಕಟ್ಟಡದ ಬಿರುಕು.
ಸಭೆಯಲ್ಲಿ ಪ್ರಸ್ತಾಪ
ಶಾಲಾ ಕಟ್ಟಡ ಬಿರುಕು ಬಿಟ್ಟಿರುವ ಕುರಿತು ಸವಣೂರು ಗ್ರಾ.ಪಂ.ನಲ್ಲಿ ನಡೆದ ಪ್ರಾಕೃತಿಕ ವಿಕೋಪ ಮುಂಜಾಗರೂಕತೆ ಸಭೆಯಲ್ಲಿ ಶಾಲಾಭಿವೃದ್ದಿ ಸಮಿತಿಯವರು ಪ್ರಸ್ತಾಪ ಮಾಡಿದ್ದರು. ಬಳಿಕ ನಡೆದ ಸಾಮಾನ್ಯ ಸಭೆಯಲ್ಲೂ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ,ಗ್ರಾ.ಪಂ.ಸದಸ್ಯ ಎಂ.ಎ.ರಫೀಕ್ ವಿಷಯ ಪ್ರಸ್ತಾಪ ಮಾಡಿದ್ದರು.
ಆತಂಕ ಹೆಚ್ಚಳ
ನಿರಂತರ ಸುರಿದ ಮಳೆಯಿಂದಾಗಿ ಶಾಲಾ ಕೊಠಡಿಯ ಮೂಲೆಯೊಂದು ಬಿರುಕು ಬಿಟ್ಟಿದ್ದು, ಕಟ್ಟಿರುವ ಕಲ್ಲುಗಳು ಬೀಳತೊಡಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಆದರೂ ಯಾವಾಗ ಕಟ್ಟಡ ಬೀಳಬಹುದು ಎಂಬ ಆತಂಕ ಶುರುವಾಗಿದೆ.
ಈ ಕೊಠಡಿಯ ಸುತ್ತಮುತ್ತ ಹೋಗುವುದೇ ಬಾರಿ ಅಪಾಯಕಾರಿಯಾಗಿ ಪರಿಣಮಿಸಿದೆ. ನಿರಂತರ ಮಳೆಯಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ ರಜೆ ಇದ್ದುದರಿಂದ ಮಕ್ಕಳು ಶಾಲೆಗೆ ಬಂದಿಲ್ಲ. ಉಳಿದ ದಿನಗಳಲ್ಲಿ ಹೇಗೆ ಶಾಲೆಗೆ ಕಳುಹಿಸುವುದು ಎಂಬ ಆತಂಕ ಮಕ್ಕಳ ಪೋಷಕರದ್ದು,ಅಷ್ಟು ಅಪಾಯಕಾರಿಯಾಗಿದೆ ಈ ಕಟ್ಟಡ.
8 ಕೊಠಡಿಯಲ್ಲಿ 4 ಅಪಾಯಕಾರುಯಾಗಿದೆ
ಶಾಲೆಯ ಒಟ್ಟು 8 ಕೊಠಡಿಗಳಲ್ಲಿ 4 ಕೊಠಡಿಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಉಳಿದ 4 ಕೊಠಡಿಗಳಲ್ಲಿ ಒಂದರಲ್ಲಿ ಶಾಲಾ ಕಛೇರಿ, ಇನ್ನೊಂದರಲ್ಲಿ ಕಂಪ್ಯೂಟರ್ ಹಾಗೂ ಗ್ರಂಥಾಲಯವಿದೆ. ಉಳಿದ 2 ಕೊಠಡಿಗಳಲ್ಲಿ ಹಾಗೂ ಕಛೇರಿ,ಗ್ರಂಥಾಲಯದಲ್ಲಿ 7 ತರಗತಿಯ ಮಕ್ಕಳಿಗೆ ಪಾಠಮಾಡಲಾಗುತ್ತಿದೆ.
ಸೂಕ್ತ ಕ್ರಮ ಕೈಗೊಳ್ಳಬೇಕು
ಸವಣೂರು ಗ್ರಾಮದ ಮೊಗರು ಶಾಲೆಯ ಕೊಠಡಿಯಲ್ಲಿ ಬಿರುಕು ಬಿಟ್ಟಿದ್ದು,ಅಪಾಯಕಾರಿ ಸ್ಥಿತಿಯಲ್ಲಿದೆ. ಹೊಸ ಕಟ್ಟಡದ ಬೇಡಿಕೆಯನ್ನು ಇಡಲಾಗಿದ್ದು,ಅಪಾಯಕಾರಿ ಶಾಲಾ ಕಟ್ಟಡವನ್ನು ಕಡಬ ಉಪತಹಶೀಲ್ದಾರ್ ಅವರು ವೀಕ್ಷಿಸಿ ಮಕ್ಕಳನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.ಆದರೆ ಶಿಕ್ಷಣ ಇಲಾಖೆಯ ಯಾವ ಅಧಿಕಾರಿಯೂ ಪರಿಶೀಲನೆ ನಡೆಸಿಲ್ಲ.ಕೂಡಲೇ ನೂತನ ಕೊಠಡಿಗಳನ್ನು ಮಂಜೂರು ಮಾಡಿ ಅಪಾಯಕಾರಿ ಸ್ಥಿತಿಯಲ್ಲಿರುವ ಕೊಠಡಿಗಳನ್ನು ತೆರವು ಮಾಡಬೇಕಾಗಿದೆ.
-ಎಂ.ಎ.ರಫೀಕ್
ಅಧ್ಯಕ್ಷರು ಶಾಲಾಭಿವೃದ್ದಿ ಸಮಿತಿ ,
ಸದಸ್ಯರು ಸವಣೂರು ಗ್ರಾ.ಪಂ.