ಕುಮಾರಧಾರ ನದಿಯಲ್ಲಿ ತೇಲಿ ಹೋದ ಶವ?? ಪ್ರಾಕೃತಿಕ ವಿಕೋಪ ರಕ್ಷಣಾ ತಂಡದಿಂದ ಹುಡುಕಾಟ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಹಿಂಬದಿಯಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯಲ್ಲಿ ಮೃತದೇಹವೊಂದು ತೇಲಿ ಹೋದ ಬಗ್ಗೆ ಸುದ್ದಿ ಹರಡಿದ್ದು, ಗೃಹ ರಕ್ಷಕದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ರಕ್ಷಣಾ ತಂಡದ ಸದಸ್ಯರು ನದಿಯಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮೃತದೇಹ ಪತ್ತೆಯಾಗದೇ ಅವರು ವಾಪಸ್ ಮರಳಿದ ಘಟನೆ ಜು.27ರಂದು ಸಂಜೆ ನಡೆದಿದೆ.


ದೇವಾಲಯದ ಹಿಂಬದಿಯಲ್ಲಿರುವ ಕುಮಾರಧಾರ ನದಿಯಲ್ಲಿ ಮೃತದೇಹವೊಂದು ತೇಲಿ ಹೋಗುತ್ತಿರುವುದನ್ನು ಸಾರ್ವಜನಿಕರು ಕಂಡಿದ್ದು, ಕೂಡಲೇ ಅಲ್ಲೇ ಸಮೀಪದಲ್ಲೇ ಇರುವ ಪ್ರಾಕೃತಿಕ ವಿಕೋಪ ರಕ್ಷಣಾ ತಂಡದವರಿಗೆ ವಿಷಯ ಮುಟ್ಟಿಸಿದರು. ಸಾರ್ವಜನಿಕರು ನೀಡಿದ ಮಾಹಿತಿಯನ್ನಧಾರಿಸಿ ತಕ್ಷಣವೇ ಕಾರ್ಯಪ್ರವೃತರಾದ ಪ್ರಾಕೃತಿಕ ವಿಕೋಪ ರಕ್ಷಣಾ ತಂಡದ ಸದಸ್ಯರು ತಮ್ಮಲ್ಲಿರುವ ರಬ್ಬರ್ ಬೋಟಿನಲ್ಲಿ ನದಿಯಲ್ಲಿ ಸುಮಾರು ನಾಲ್ಕು ಕಿ.ಮೀ. ತನಕ ಹೋಗಿ ಹುಡುಕಾಟ ನಡೆಸಿದರೂ, ಆದರೆ ಅವರಿಗೆ ಮೃತದೇಹ ಪತ್ತೆಯಾಗದ್ದರಿಂದ ಮತ್ತೆ ವಾಪಸ್ ಮರಳಿದರು. ಆ ಬಳಿಕ ಈ ವಿಷಯ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಕುಮಾರಧಾರ ಸೇತುವೆಯಿಂದ ಯಾರಾದರೂ ಹಾರಿರಬಹುದು ಎಂದರೆ, ಇನ್ನು ಕೆಲವರು ಎಲ್ಲೋ ನೀರಿಗೆ ಬಿದ್ದವರ ಮೃತದೇಹವಾಗಿರಬಹುದೆಂದು ಶಂಕಿಸುತ್ತಿದ್ದಾರೆ. ನದಿಯಲ್ಲಿ ಮೃತದೇಹ ತೇಲುತ್ತಿದೆ ಎಂದು ಹೇಳಿದ ಸಾರ್ವಜನಿಕರು ಬೇರೇನ್ನನ್ನೋ ಮೃತದೇಹವೆಂದು ಭ್ರಮಿಸಿದ್ದಾರೋ ಎಂಬ ಸಂಶಯನೂ ಇಲ್ಲಿ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ., ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಗ್ರಾಮ ಸಹಾಯಕ ಯತೀಶ್ ಮಡಿವಾಳ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಹುಡುಕಾಟದ ತಂಡದಲ್ಲಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್, ಎಎಸ್‌ಎಲ್ ಜನಾರ್ದನ ಆಚಾರ್ಯ, ಅಣ್ಣು, ಡೀಕಯ್ಯ ಇದ್ದರು.

LEAVE A REPLY

Please enter your comment!
Please enter your name here