ನೆಲ್ಯಾಡಿ: ಕಾಡಾನೆ ದಾಳಿಯಿಂದ ಕೃಷಿ ಹಾಗೂ ಮನೆ ಆವರಣಗೋಡೆ ಹಾನಿಗೊಂಡಿರುವ ಘಟನೆ ಇಚ್ಲಂಪಾಡಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ ದಯಾನಂದ ಆಚಾರ್ಯರವರ ಕೃಷಿ ತೋಟಕ್ಕೆ ನುಗ್ಗಿರುವ ಕಾಡಾನೆ ನೇಂದ್ರ ಬಾಳೆಗಿಡ ಹಾನಿಗೊಳಿಸಿದೆ. ಇದರಿಂದ ಅವರಿಗೆ ಸಾವಿರಾರು ರೂ.ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಬಿಜೇರು ನಿವಾಸಿ ಬಿಂದು ಸಂತೋಷ್ ಅವರ ನಿರ್ಮಾಣ ಹಂತದ ಮನೆಯ ಸುತ್ತಲಿನ ತಡೆಗೋಡೆಯನ್ನು ಕಾಡಾನೆ ಕೆಡವಿ ಹಾಕಿವೆ. ಅಲ್ಲದೇ ಅವರ ನಿರ್ಮಾಣ ಹಂತದ ಮನೆಯ ಮೆಟ್ಟಿಲನ್ನು ಸಹ ಹಾನಿಗೊಳಿಸಿವೆ. ಇದರಿಂದ ಅವರಿಗೆ ಸುಮಾರು 3 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಆನೆ ದಾಳಿ ಬಗ್ಗೆ ಎರಡೂ ಮನೆಯವರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಡೈಸಿ ವರ್ಗೀಸ್, ದಿನೇಶ್ ಬರಮೇಲು, ರೋಯಿ ಟಿ.ಕೆ., ರತ್ನಾವತಿ, ಅರಣ್ಯ ವೀಕ್ಷಕ ಜನಾರ್ದನರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಚ್ಲಂಪಾಡಿ ಗ್ರಾಮದಲ್ಲಿ ಪದೇ ಪದೇ ಆನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿದ್ದು ಈ ಆನೆಗಳ ಸ್ಥಳಾಂತರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.