ಪುತ್ತೂರು: ರಸ್ತೆ ಸಮಸ್ಯೆಯೊಂದಕ್ಕೆ ಸಂಬಂಧಪಟ್ಟಂತೆ ಕೈಗೊಂಡ ಕ್ರಮದ ಕುರಿತು ನಿಗದಿತ ಅವಧಿಯೊಳಗೆ ಸೂಕ್ತ ಮಾಹಿತಿ ನೀಡದೇ ಇರುವುದು,ಆಯೋಗ ನಿರ್ದೇಶನ ನೀಡಿದ್ದರೂ ಸ್ಪಷ್ಟ ಸಮಜಾಯಿಷಿ ನೀಡದಿರುವುದು ಹಾಗೂ ವಿಚಾರಣೆಗೆ ಹಾಜರಾಗದೇ ಇರುವ ಆರೋಪದಲ್ಲಿ ಪುತ್ತೂರು ತಾಲ್ಲೂಕು, ತಹಸಿಲ್ದಾರ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ ರೂ.15 ಸಾವಿರ ದಂಡ ವಿಧಿಸಿದೆ.
ತಾಲ್ಲೂಕು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸುಲೋಚನಾ ಅವರಿಗೆ ದಂಡ ವಿಧಿಸಿ ಆದೇಶಿಸಿರುವ ಕರ್ನಾಟಕ ಮಾಹಿತಿ ಆಯೋಗ, ದಂಡದ ಮೊತ್ತವನ್ನು ಸರಕಾರದ ಖಾತೆಗೆ ಜಮೆ ಮಾಡಿಸಲು ಸೂಕ್ತ ಕ್ರಮ ವಹಿಸಲು ಆಯೋಗದ ಕಾರ್ಯದರ್ಶಿಗೆ ಸೂಚಿಸಿದೆ. ಅಲ್ಲದೆ, ಮೇಲ್ಮನವಿದಾರರ ಪ್ರಕರಣದ ಕುರಿತು ನಿಯಮಾನುಸಾರ ಕ್ರಮ ಕೈಗೊಂಡು ಇತ್ಯರ್ಥಪಡಿಸಲು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಆಯೋಗ ಸೂಚಿಸಿದೆ.
ನೆಟ್ಟಣಿಗೆಮುಡ್ನೂರು ಗ್ರಾಮದ ಕೆಳಂದೂರು ನಿವಾಸಿ ಶ್ರೀಧರ್ ಪೂಜಾರಿ ಎಂಬವರು ಈ ಕುರಿತು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ 25 ವರ್ಷಗಳಿಂದ ಅವರು ಬಳಸುತ್ತಿದ್ದ ಸರ್ಕಾರಿ ಜಾಗವನ್ನು ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿದ್ದರು ಎಂದು ಪುತ್ತೂರು ತಹಶೀಲ್ದಾರರಿಗೆ ದೂರು ನೀಡಿದ್ದರು. ದೂರು ನೀಡಿ ಒಂದೂವರೆ ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು, ಆಗಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಜೇಂದ್ರ ಕೆ.ವಿ.ಅವರು ನಡೆಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲೂ ಶ್ರೀಧರ ಪೂಜಾರಿಯವರು ಮನವಿ ನೀಡಿದ್ದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರು ಪುತ್ತೂರು ತಹಶೀಲ್ದಾರರಿಗೆ ಸೂಚಿಸಿದ್ದರು. ಬಳಿಕ, ಈ ಕುರಿತು ಕೈಗೊಂಡ ಕ್ರಮದ ಮಾಹಿತಿಯನ್ನು ನೀಡುವಂತೆ ಶ್ರೀಧರ್ ಪೂಜಾರಿಯವರು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ನೀಡಿದ್ದ ಮನವಿಗೆ ಸ್ಪಂದನೆ ದೊರೆಯಲಿಲ್ಲ ಎಂದು ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ (ಕಮಾಆ 24550 ಎಪಿಎಲ್ 2022)ಸಲ್ಲಿಸಿದ್ದರು.
ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಾಲ್ಲೂಕು ಕಚೇರಿ, ಪುತ್ತೂರು ಪ್ರತಿವಾದಿ ನಂ.1 ಆಗಿಯೂ, ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಹಾಗೂ ತಹಸಿಲ್ದಾರ್ ತಾಲ್ಲೂಕು ಕಚೇರಿ ಪುತ್ತೂರು ಪ್ರತಿವಾದಿ ನಂ.2 ಆಗಿಯೂ ಮೇಲ್ಮನವಿಯಲ್ಲಿ ಕಾಣಿಸಲಾಗಿತ್ತು.
ಪ್ರಕರಣವನ್ನು ವಿಚಾರಣೆ ನಡೆಸಿದ ಕರ್ನಾಟಕ ಮಾಹಿತಿ ಆಯೋಗ, ಮಾಹಿತಿ ಹಕ್ಕು ಅಧಿನಿಯಮ 2005, ಕಲಂ 10(3)ರ ಅಡಿಯಲ್ಲಿ ದಂಡ ವಿಧಿಸಿ ಆದೇಶ ಮಾಡಿದೆ. ಶ್ರೀಧರ ಪೂಜಾರಿಯವರ ಮೇಲ್ಮನವಿಯನ್ನು 10-2-2023, 24-04-2023 ಮತ್ತು 24-05-2023ರಂದು ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಮೇಲ್ಮನವಿದಾರರಿಗೆ ಕೋರಿರುವ ಮಾಹಿತಿಯನ್ನು ಒದಗಿಸಿ,ವರದಿಯನ್ನು ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಕಲಂ 7(6)ರನ್ವಯ ಆಯೋಗದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸುಲೋಚನ, ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಸಿಲ್ದಾರ್ ಪುತ್ತೂರು ಇವರಿಗೆ ಸೂಚಿಸಲಾಗಿತ್ತು. ಆದರೂ ಮೇಲ್ಮನವಿದಾರರಿಗೆ ಮಾಹಿತಿ ಒದಗಿಸದೆ ಇರುವುದನ್ನು ಮತ್ತು ದಂಡದ ಕ್ರಮವನ್ನು ಜರಗಿಸದೆ ಇರುವ ವಿಚಾರದಲ್ಲಿ ಲಿಖಿತ ಸಮಜಾಯಿಷಿಯನ್ನು ಆಯೋಗಕ್ಕೆ ಸಲ್ಲಿಸದೇ ಇರುವುದನ್ನು ಪರಿಶೀಲಿಸಿದ ಆಯೋಗವು ದಂಡ ವಿಧಿಸುವ ವಿಚಾರದಲ್ಲಿ ಪ್ರತಿವಾದಿಯವರ ಲಿಖಿತ ಸಮಜಾಯಿಷಿ ಏನೂ ಇರುವುದಿಲ್ಲದೆವಂದು ಭಾವಿಸಿ, ಸುಲೋಚನರವರು ದಂಡನೆಗೆ ಅರ್ಹರೆಂದು ಅಭಿಪ್ರಾಯಿಸಿದೆ. ಇವರು ಮೇಲ್ಮನವಿದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿಯನ್ನು ಒದಗಿಸದೇ ಇರುವುದು, ಮಾಹಿತಿ ಒದಗಿಸುವಂತೆ ಮೂರು ಬಾರಿ ಆದೇಶದಲ್ಲಿ ಆಯೋಗ ನಿರ್ದೇಶನ ನೀಡಿದ ನಂತರವೂ ಮೇಲ್ಮನವಿದಾರರಿಗೆ ಮಾಹಿತಿ ಒದಗಿಸದೆ ಇರುವುದು, ಮೇಲ್ಮನವಿದಾರರು ದಿನಾಂಕ 20-೦9-2021ರಂದು ಮಾಹಿತಿ ಕೋರಿಕೆ ಅರ್ಜಿ ಸಲ್ಲಿಸಿದ್ದು 30 ದಿನಗಳ ನಿಗದಿತ ಅವಧಿಯೊಳಗೆ ಒದಗಿಸದೆ ಮೇಲ್ಮನವಿದಾರರಿಗೆ ಹಿಂಬರಹ ಒದಗಿಸಿ, ಕೋರಿರುವ ಮಾಹಿತಿಯ ಕಡತವು ಗ್ರಾಮಲೆಕ್ಕಿಗರ ಕಚೇರಿಯಲ್ಲಿ ತನಿಖಾ ಹಂತದಲ್ಲಿದೆ ಎಂದು ವಿಳಂಬವಾಗಿ ತಿಳಿಸಿರುವುದು, ಮೇಲ್ಮನವಿದಾರರು ಮಾಹಿತಿ ಕೋರಿ ಸಲ್ಲಿಸಿರುವ ಅರ್ಜಿಗೆ ನಿಗದಿತ ಅವಧಿಯೊಳಗೆ(30 ದಿನ)ಶುಲ್ಕ ಪಾವತಿಸುವಂತೆ ಸೂಚಿಸದೆ ಪ್ರಥಮ ಮೇಲ್ಮನವಿ ಪ್ರಾಧಿಕಾರಿಯವರ ಆದೇಶದ ನಂತರ ವಿಳಂಬವಾಗಿ ಶುಲ್ಕವನ್ನು ಪಾವತಿಸುವಂತೆ ಸೂಚಿಸಿರುವುದು, ಮೇಲ್ಮನವಿದಾರರಿಗೆ ಪ್ರಕೃತ ಪ್ರಕರಣಕ್ಕೆ ಸಂಬಂಧಿಸದ ಮಾಹಿತಿ ಒದಗಿಸಿರುವುದು, ಮೇಲ್ಮನವಿದಾರರಿಗೆ ಮಾಹಿತಿ ಒದಗಿಸದೆ ಇರುವುದರಿಂದ ದಂಡ ವಿಧಿಸುವ ಕುರಿತು ಆಯೋಗ ಸ್ಪಷ್ಟ ನಿರ್ದೇಶನ ನೀಡಿದ್ದರೂ ಯಾವುದೇ ಲಿಖಿತ ಸಮಜಾಯಿಷಿ ನೀಡದಿರುವುದು ಮತ್ತು ಆಯೋಗದ ವಿಚಾರಣೆಗೆ ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸುಲೋಚನರವರಿಗೆ 15 ಸಾವಿರ ರೂ.ದಂಡ ವಿಧಿಸಿದೆ. ದಂಡದ ಮೊತ್ತವನ್ನು ಅವರ ವೇತನದಿಂದ ಕಡಿತಗೊಳಿಸಿ ಸರಕಾರದ ಖಾತೆಗೆ ಜಮೆ ಮಾಡಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ತುಮಕೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಜಯಪಾಲ್ ಅವರಿಗೆ ಆಯೋಗ ನಿರ್ದೇಶನ ನೀಡಿದೆ. ದಂಡದ ಮೊತ್ತವನ್ನು ಸರಕಾರದ ಖಾತೆಗೆ ಪಾವತಿಸುವಲ್ಲಿ ಸೂಕ್ತ ಕ್ರಮವಹಿಸಲು ಮಾಹಿತಿ ಆಯುಕ್ತ ಕೆ.ಪಿ.ಮಂಜುನಾಥ್ ಅವರು ಆಯೋಗದ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.
ದಂಡದ ಮೊತ್ತವನ್ನು ಅವರ ವೇತನದಿಂದ ಕಡಿತಗೊಳಿಸಿ ಸರಕಾರದ ಖಾತೆಗೆ ಜಮೆ ಮಾಡಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ತುಮಕೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಜಯಪಾಲ್ ಅವರಿಗೆ ಆಯೋಗ ನಿರ್ದೇಶನ ನೀಡಿದೆ. ದಂಡದ ಮೊತ್ತವನ್ನು ಸರಕಾರದ ಖಾತೆಗೆ ಪಾವತಿಸುವಲ್ಲಿ ಸೂಕ್ತ ಕ್ರಮವಹಿಸಲು ಮಾಹಿತಿ ಆಯುಕ್ತ ಕೆ.ಪಿ.ಮಂಜುನಾಥ್ ಅವರು ಆಯೋಗದ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.