ಪುತ್ತೂರಿನಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು-ನಾಗರಿಕರಲ್ಲಿ ಭಯದ ವಾತಾವರಣ

0

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರ ಕಾರ್ಯಕ್ಷಮತೆಯಲ್ಲಿ ಹಿನ್ನಡೆ ಎದ್ದು ಕಾಣುತ್ತಿರುವ ಆರೋಪ ಕೇಳಿ ಬಂದಿದೆ.ಈ ನಡುವೆ ಕಳವು ಪ್ರಕರಣವೊಂದರಲ್ಲಿ 4 ತಿಂಗಳ ಬಳಿಕ ಆರೋಪಿ ಪತ್ತೆಯಾಗಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದರೂ ಅದನ್ನು ಬಹಿರಂಗ ಪಡಿಸದೇ ಇರುವುದು ಮತ್ತು ಕೆಲವು ದಿನಗಳ ಹಿಂದೆ ನಡೆದಿದ್ದ ಅಡಿಕೆ ಉದ್ಯಮಿಯ ನಗದು ಕಳವು ಪ್ರಕರಣದಲ್ಲಿ ತೋರಿಸಿದ್ದ ಆಸಕ್ತಿಯನ್ನು ಉಳಿದ ಕಳವು ಪ್ರಕರಣಗಳಲ್ಲಿ ಪೊಲೀಸರು ತೋರಿಸಿಲ್ಲ ಎಂಬ ಅಪಸ್ವರ ಕೇಳಿ ಬರುತ್ತಿದೆ.


ಪುತ್ತೂರು ನೆಲ್ಲಿಕಟ್ಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಕೆಲ ದಿನಗಳ ಹಿಂದೆಯಷ್ಟೇ ಎರಡನೇ ಬಾರಿಗೆ ಕಳವಾಗಿತ್ತು.ಘಟನೆಗೆ ಸಂಬಂಧಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದವರು ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ವೇಳೆ ಪೊಲೀಸರು, ಪ್ರಾಥಮಿಕ ಆರೋಗ್ಯ ಕೇಂದ್ರ ಸಾರ್ವಜನಿಕ ಸೊತ್ತು ಎಂಬುವುದನ್ನು ಪರಿಗಣಿಸದೆ, ನೀವು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿ, ನ್ಯಾಯಾಲಯದ ಆದೇಶದೊಂದಿಗೆ ಬನ್ನಿ ಎಂಬ ಸಲಹೆ ನೀಡಿದ್ದರು.ಆದರೆ ಬನ್ನೂರು ನಿವಾಸಿಯೋರ್ವರಿಗೆ ಸೇರಿರುವ ಟ್ರಾನ್ಸ್‌ಪೋರ್ಟ್ ಸಂಸ್ಥೆಯ,ಅಡಿಕೆ ಸಾಗಾಟದ ಲಾರಿಯಿಂದ ಕಂಡೆಕ್ಟರ್ ರೂ.10 ಲಕ್ಷ ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ರೂ.3.79 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.ಎರಡು ವಾರಗಳ ಹಿಂದೆ ನಡೆದಿದ್ದ ಈ ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಆಸಕ್ತಿ ತೋರಿದ್ದರೂ ಇಲ್ಲಿ ನಡೆದ ಇತರ ಕಳವು ಪ್ರಕರಣಗಳ ಪತ್ತೆಗಾಗಿ ಆಸಕ್ತಿ ತೋರಿಲ್ಲ ಎಂಬ ಅಪಸ್ವರ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.


ಹಲವು ಕಡೆ ಕಳ್ಳತನ:
ಕೊಂಬೆಟ್ಟುವಿನಲ್ಲಿರುವ ಉದ್ಯಮಿಯೋರ್ವರ ಮನೆಯ ಹಿಂಬದಿಯ ಕಂಪೌಂಡ್ ಹಾರಿ ಒಳಪ್ರವೇಶಿಸಿದ್ದ ಕಳ್ಳರು ಮನೆಯ ಹಿಂಬದಿಯ ಬಾಗಿಲ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಸಿಸಿ ಕ್ಯಾಮರಾದ ಡಿವಿಆರ್ ಮತ್ತು ಫ್ಯಾನ್ಸಿ ಆಭರಣ ಹಾಗು ನಗದು ಕಳವು ಮಾಡಿದ್ದ ಮತ್ತು ಚಿನ್ನಾಭರಣ ಕಳವಿಗೆ ಯತ್ನ ನಡೆಸಿದ್ದ ಘಟನೆ ಜು.30ರಂದು ನಡೆದಿದೆ.


ಬ್ಯಾಟರಿ ಕಳವು:
ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿಯಲ್ಲಿರುವ ಆರ್ಯಾಪು ಗ್ರಾಮದ ಅವನೀಶ್ ಕುಮಾರ್ ಎಂಬವರ ಮಾಲಕತ್ವದ `ಟೆಕ್ನೋ ಎಂಜಿನಿಯರಿಂಗ್ ವರ್ಕ್‌ಶಾಪ್’ ಗ್ಯಾರೇಜ್ ಎದುರು ರಿಪೇರಿಗಾಗಿ ನಿಲ್ಲಿಸಲಾಗಿದ್ದ ವಾಹನಗಳಿಂದ 7 ಬ್ಯಾಟರಿ ಮತ್ತು ಗ್ಯಾರೇಜಿಗೆ ಸೇರಿದ 2 ಬ್ಯಾಟರಿ ಸೇರಿದಂತೆ ಒಟ್ಟು 9 ಬ್ಯಾಟರಿಗಳು ಕಳವಾದ ಘಟನೆಯೂ ಜು.30ರಂದು ನಡೆದಿತ್ತು.


ಆನೆಮಜಲು ಮನೆಯಿಂದ ಕಳವು:
ಬನ್ನೂರು ಗ್ರಾಮದ ಆನೆಮಜಲು ನಿವಾಸಿ ಮೌನೀಶ್ ಅವರ ಮನೆಯಿಂದ ಮೇ 29ರಂದು 19 ಪವನ್ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳರು ದೋಚಿದ್ದರು.ಅದೇ ರೀತಿ ಕಳೆದ ಫೆ.2ರಂದು ಮುರದಲ್ಲಿ ಸರಣಿ ಕಳ್ಳತನ ನಡೆದಿತ್ತು.ಮುರದ ಮಾಧವ ಕಾಂಪ್ಲೆಕ್ಸ್‌ನಲ್ಲಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆಯಿಂದ ರೂ.35 ಸಾವಿರ ನಗದು ಹಣ, ಲ್ಯಾಪ್‌ಟಾಪ್, ಕಂಪ್ಯೂಟರ್,ಇನ್‌ವರ್ಟರ್ ಕಳವಾಗಿತ್ತು.ಪಕ್ಕದ ಮಹಾಲಿಂಗೇಶ್ವರ ಎಲೆಕ್ಟ್ರಿಕಲ್ ಅಂಗಡಿಯಿಂದ ನಗದು ಹಣ ಹಾಗೂ 10ಕ್ಕೂ ಅಧಿಕ ಫ್ಯಾನ್‌ಗಳು ಕಳವಾಗಿತ್ತು.ಪುತ್ತೂರು ನಗರ ವ್ಯಾಪ್ತಿಯ ಸುತ್ತಮುತ್ತ ನಡೆದ ಹೆಚ್ಚಿನ ಕಳವು ಘಟನೆಗಳಿಗೆ ಸಂಬಂಧಿಸಿ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ.ಈ ನಡುವೆಯೇ ಮತ್ತೆ ಕಳ್ಳರ ಹಾವಳಿ ಹೆಚ್ಚಾಗತೊಡಗಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ.

LEAVE A REPLY

Please enter your comment!
Please enter your name here