ಆಕ್ಷೇಪದ ಹೊರತಾಗಿಯೂ ಕಳಪೆ ಕಾಮಗಾರಿ ಟ್ಯಾಂಕ್ ಹಸ್ತಾಂತರ-ಇಳಂತಿಲ ಗ್ರಾ.ಪಂ.ನಲ್ಲಿ ನಿರ್ಣಯ ತಿರುಚಿದ, ವಿಡಿಯೋ ಡಿಲೀಟ್‌ನ ಆರೋಪ

0

ಉಪ್ಪಿನಂಗಡಿ: ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ದಾಖಲಿಸಿಕೊಳ್ಳದೇ, ಬೇರೆಯೇ ನಿರ್ಣಯವನ್ನು ನಿರ್ಣಯ ಪುಸ್ತಕದಲ್ಲಿ ದಾಖಲಿಸಿದ್ದಲ್ಲದೆ, ಆಕ್ಷೇಪದ ಹೊರತಾಗಿಯೂ ಕಳಪೆ ಕಾಮಗಾರಿಯ ನೀರಿನ ಟ್ಯಾಂಕನ್ನು ಗುತ್ತಿಗೆದಾರರಿಂದ ಗ್ರಾ.ಪಂ. ಸ್ವೀಕರಿಸಿದೆ ಎಂದು ಆರೋಪಿಸಿದ ಗ್ರಾ.ಪಂ. ಸದಸ್ಯ ಈಸುಬು ಪೆದಮಲೆ ಗ್ರಾ.ಪಂ. ಪಿಡಿಒ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಳಂತಿಲ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.


ಗ್ರಾ.ಪಂ. ಅಧ್ಯಕ್ಷೆ ಚಂದ್ರಿಕಾ ಭಟ್ ಅವರ ಅಧ್ಯಕ್ಷತೆಯಲ್ಲಿ ಇಳಂತಿಲ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದ ಹಂತದಲ್ಲಿಯೇ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ. ಸದಸ್ಯ ಈಸುಬು ಪೆದಮಲೆ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ಇಳಂತಿಲ ಗ್ರಾಮದ ಕಟ್ಟೆಚ್ಚಾರ್‌ನಲ್ಲಿ ನಿರ್ಮಾಣವಾದ ಟ್ಯಾಂಕ್ ಕಳಪೆ ಕಾಮಗಾರಿಯಿಂದ ಕೂಡಿದ್ದು, ಗ್ರಾ.ಪಂ.ಗೆ ಹಸ್ತಾಂತರವಾಗುವ ಮೊದಲೇ ಇದು ಸೋರಿಕೆಯಾಗುತ್ತಿದೆ. ಈ ಬಗ್ಗೆ ಕಳೆದ ಜೂ.8ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಾನು ವಿಷಯ ಪ್ರಸ್ತಾಪಿಸಿದ್ದು, ಕಳಪೆ ಕಾಮಗಾರಿ ನಡೆದಿರುವುದರಿಂದ ಅದನ್ನು ಗ್ರಾ.ಪಂ. ಹಸ್ತಾಂತರ ಪಡೆದುಕೊಳ್ಳಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದೆ. ಒಂದು ವೇಳೆ ಹಸ್ತಾಂತರ ಪಡೆದದ್ದೇ ಆದಲ್ಲಿ ನನ್ನ ಆಕ್ಷೇಪಣೆಯನ್ನು ನಿರ್ಣಯ ಪುಸ್ತಕದಲ್ಲಿ ದಾಖಲಿಸಲು ತಿಳಿಸಿದ್ದೆ. ಇದರ ಪರಿಶೀಲನೆ ನಡೆಸದೇ ಸೋರಿಕೆಯಾಗುತ್ತಿರುವ ಟ್ಯಾಂಕನ್ನು ಗ್ರಾ.ಪಂ. ಪಡೆದರೆ ಜನರು ನಮ್ಮ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ ಎಂದಿದ್ದೆ. ಆಗ ಸರ್ವ ಸದಸ್ಯರು ಟ್ಯಾಂಕ್ ಸ್ವೀಕಾರ ಬೇಡ ಎಂಬ ನನ್ನ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ ನಿರ್ಣಯಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಪ್ರಕಟವಾಗಿದೆ. ಆದರೆ ಬಳಿಕ ಈ ಬಗೆಗಿನ ನಿರ್ಣಯವನ್ನು ನಿರ್ಣಯ ಪುಸ್ತಕದಲ್ಲಿ ಈ ಯೋಜನೆಯನ್ನು ಹಸ್ತಾಂತರ ಪಡೆದುಕೊಳ್ಳುವ ಬಗ್ಗೆ ಪಂಚಾಯತ್ ಸದಸ್ಯರಾದ ಈಸುಬು ಅವರು ಕಳಪೆ ಕಾಮಗಾರಿ ಎಂಬುದಾಗಿ ಆಕ್ಷೇಪಣೆ ವ್ಯಕ್ತಪಡಿಸಿರುವುದನ್ನು ದಾಖಲಿಸಿಕೊಳ್ಳಲಾಯಿತು. ಮತ್ತು ಇತರ ಸದಸ್ಯರ ಸಮ್ಮತಿಯೊಂದಿಗೆ ಸದರಿ ಯೋಜನೆಯನ್ನು ಹಸ್ತಾಂತರ ಪಡೆದುಕೊಳ್ಳುವುದೆಂದು ಬಹುಮತದಿಂದ ನಿರ್ಣಯಿಸಲಾಯಿತು.” ಎಂದು ದಾಖಲಿಸಿಕೊಳ್ಳಲಾಗಿದೆ. ಇಲ್ಲಿ ಸಭೆಯಲ್ಲಿ ಆದ ನಿರ್ಣಯವನ್ನು ನಿರ್ಣಯ ಪುಸ್ತಕದಲ್ಲಿ ಬರೆಯುವಾಗ ತಿರುಚಿ ಕಳಪೆ ಕಾಮಗಾರಿಯಿದ್ದರೂ ಆ ಟ್ಯಾಂಕ್ ಅನ್ನು ಗ್ರಾ.ಪಂ. ಹಸ್ತಾಂತರ ಪಡೆದುಕೊಂಡಿದೆ ಎಂದು ಆರೋಪಿಸಿದರಲ್ಲದೆ, ಈ ಸಭೆಯ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದರೂ, ಅದರ ದಾಖಲೆಯನ್ನು ನಾನು ಮಾಹಿತಿ ಹಕ್ಕಿನಲ್ಲಿ ಕೇಳಿದಾಗಈ ಸಭೆಯ ವಿಡಿಯೋ ಚಿತ್ರೀಕರಣ ಮಾಡಿದ ಮೊಬೈಲ್‌ನ ವಿಡಿಯೋ ದಾಖಲೆಗಳು ತಾಂತ್ರಿಕ ಸಮಸ್ಯೆಯಿಂದ ಅಳಿಸಿ ಹೋಗಿರುವುದಾಗಿ” ಮಾಹಿತಿ ಲಭಿಸಿದೆ. ಇಲ್ಲಿ ನಿರ್ಣಯವನ್ನು ತಿರುಚಿ ಬರೆದ್ದಿದ್ದಲ್ಲದೆ, ಸಭೆಯ ವಿಡಿಯೋ ದಾಖಲೆಗಳನ್ನು ನಾಶ ಮಾಡಿಲಾಗಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ, ಈ ರೀತಿ ಮಾಡಿ ಕಳಪೆ ಕಾಮಗಾರಿಯ ಟ್ಯಾಂಕ್ ಅನ್ನು ಅಷ್ಟು ತುರ್ತಾಗಿ ಗ್ರಾ.ಪಂ. ಹಸ್ತಾಂತರ ಪಡೆದುಕೊಳ್ಳುವ ಅನಿವಾರ್ಯತೆ ಏನಿತ್ತು ಎಂದು ಗ್ರಾ.ಪಂ. ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.


ಈ ಸಂದರ್ಭ ಗ್ರಾ.ಪಂ. ಪಿಡಿಒ ಚೆನ್ನಪ್ಪ ನಾಯ್ಕ ಮಾತನಾಡಿ, ನಿರ್ಣಯವನ್ನು ತಿರುಚಿ ದಾಖಲಿಸಿಲ್ಲ. ಸಭೆಯಲ್ಲಿ ಏನು ನಿರ್ಣಯ ಅಂಗೀಕಾರವಾಗಿದೆಯೋ ಅದನ್ನೇ ದಾಖಲಿಸಿಕೊಳ್ಳಲಾಗಿದೆ. ನಿಮ್ಮೊಬ್ಬರ ಆಕ್ಷೇಪಣೆಯನ್ನು ದಾಖಲಿಸಿಕೊಂಡು ಇತರ ಸದಸ್ಯರ ಸಮ್ಮತಿಯೊಂದಿಗೆ ಟ್ಯಾಂಕ್ ಅನ್ನು ಹಸ್ತಾಂತರಕ್ಕೆ ಪಡೆದುಕೊಳ್ಳಲಾಗಿದೆ ಎಂದರಲ್ಲದೆ, ಮಾಧ್ಯಮಗಳಲ್ಲಿ ಬರುವ ವರದಿಗೂ ತಮಗೂ ಯಾವುದೇ ಸಂಬಂಧಗಳು ಇಲ್ಲ ಎಂದರು. ಆಗ ಈಸುಬು ಮಾತನಾಡಿ ಈ ಪಂಚಾಯತ್‌ನಲ್ಲಿ ಪ್ರತಿ ಬಾರಿಯೂ ಮಾಧ್ಯಮದವರನ್ನು ಕತ್ತಲೆಯಲ್ಲಿಟ್ಟು ಸಭೆ ನಡೆಸಲಾಗುತ್ತದೆ. ಯಾವುದೇ ಸಭೆಗಳಿಗೆ ಅವರನ್ನು ಅಧ್ಯಕ್ಷರಾಗಲಿ, ಪಿಡಿಒ ಅವರಾಗಲೀ ಕರೆಯುತ್ತಿಲ್ಲ ಎಂದು ಆರೋಪಿಸಿದರಲ್ಲದೆ, 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಆ ಟ್ಯಾಂಕ್‌ನಲ್ಲಿ ನೀರು ಸೋರಿಕೆ ಇದೆಯೆಂದು ವಾಟರ್‌ಮೆನ್ ಅವರೇ ಸಭೆಯಲ್ಲಿ ನಮ್ಮೆಲ್ಲರ ಮುಂದೆ ತಿಳಿಸಿದ್ದಾರೆ. ಅದಾಗ್ಯೂ ಆ ಟ್ಯಾಂಕ್ ಅನ್ನು ಗ್ರಾ.ಪಂ. ತನ್ನ ಹಸ್ತಾಂತರಕ್ಕೆ ಪಡೆದುಕೊಳ್ಳುವ ಮೂಲಕ ಗ್ರಾಮದ ಜನರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕುತ್ತರಿಸಿದ ಗ್ರಾ.ಪಂ. ಅಧ್ಯಕ್ಷೆ ಚಂದ್ರಿಕಾ ಭಟ್, ಸಾಮಾನ್ಯ ಸಭೆಗೆ ಮಾಧ್ಯಮದವರನ್ನು ಕರೆಯಬೇಕಂತಿಲ್ಲ. ಇಷ್ಟರವರೆಗೆ ನಾನು ಕರೆದಿಲ್ಲ. ಆದರೆ ನೀವು ಆರೋಪ ಮಾಡಿದ ಹಾಗೆ ಮಾಧ್ಯಮದವರನ್ನು ಕತ್ತಲೆಯಲ್ಲಿಡುವ ಕೆಲಸ ಮಾಡಿಲ್ಲ ಎಂದರಲ್ಲದೆ, ನಿರ್ಣಯವು ಹೇಗೆ ಅಂಗೀಕಾರವಾಗಿದೆಯೋ ಅದೇ ರೀತಿ ದಾಖಲಾಗಿದೆ. ಈ ಟ್ಯಾಂಕ್ ಸಣ್ಣ ಮಟ್ಟಿನ ಸೋರಿಕೆಯಾಗುವುದು ಟ್ಯಾಂಕ್ ಹಸ್ತಾಂತರ ಆದ ಮೇಲೆ ಕಂಡು ಬಂದಿದ್ದು, ಅದನ್ನು ಸರಿ ಮಾಡಿ ಕೊಡದೇ ಅದೇ ಗುತ್ತಿಗೆದಾರರು ನಿರ್ಮಿಸಿದ ಬೇರೊಂದು ಟ್ಯಾಂಕ್ ಅನ್ನು ಗ್ರಾ.ಪಂ. ಹಸ್ತಾಂತರ ಪಡೆದುಕೊಂಡಿಲ್ಲ. ಕಟ್ಟೆಚ್ಚಾರ್‌ನಲ್ಲಿ ನಿರ್ಮಾಣವಾಗಿರುವ ಟ್ಯಾಂಕ್ ಸೋರಿಕೆ ಇರುವುದರಿಂದ ಈ ದಿನ ಅದರ ರಿಪೇರಿಯನ್ನು ಗುತ್ತಿಗೆದಾರರ ವತಿಯಿಂದ ಮಾಡಲಾಗುತ್ತಿದೆ ಎಂದು ಸಮಜಾಷಿಕೆ ನೀಡಿದರು. ಟ್ಯಾಂಕ್ ಹಸ್ತಾಂತರ ಪಡೆದುಕೊಂಡ ವಿಚಾರದ ಬಗ್ಗೆ ಗ್ರಾ.ಪಂ. ಸದಸ್ಯ ಈಸುಬು ಅವರು ಒಬ್ಬಂಟಿಯಾಗಿ ಅಧ್ಯಕ್ಷರು, ಪಿಡಿಒ ಅವರ ಮೇಲೆ ಆರೋಪಗಳ ಸುರಿಮಳೆಯನ್ನು ಮಾಡುತ್ತಿದ್ದರೆ, ಗ್ರಾ.ಪಂ. ಸದಸ್ಯರಾದ ವಸಂತ ಶೆಟ್ಟಿ ಹಾಗೂ ತಿಮ್ಮಪ್ಪ ಗೌಡ ಅಧ್ಯಕ್ಷರ ಪರ ವಹಿಸಿ ಮಾತನಾಡಿದರು. ಕೆಲ ಕಾಲದ ಚರ್ಚೆಯ ಬಳಿಕ ಈ ವಿಷಯಕ್ಕೆ ತೆರೆ ಬಿತ್ತು. ಸಭೆಯಲ್ಲಿ ಹಿಂದೂ ರುದ್ರಭೂಮಿಗೆಂದು ೧೫ ವರ್ಷದ ಹಿಂದೆ ಕೊಡಂಗೆಕೋಡಿ ಎಂಬಲ್ಲಿ ಮಂಜೂರಾದ ಜಾಗದಲ್ಲಿ ಸ್ಮಶಾನಕ್ಕೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಯಿತು.


ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸುಪ್ರೀತ್ ಪಿ., ಸದಸ್ಯರಾದ ರಮೇಶ್ ಎನ್., ಸಿದ್ದೀಕ್, ವಿಜಯಕುಮಾರ್ ಕೆ., ಸವಿತಾ ಎಚ್., ಉಷಾ ಎಂ.ಎಸ್., ರೇಖಾ, ಜಾನಕಿ, ಉಷಾ ಯು., ಮುಶ್ರತ್ ಸಲಹೆ- ಸೂಚನೆ ನೀಡಿದರು. ಗ್ರಾ.ಪಂ. ಕಾರ್ಯದರ್ಶಿ ಕಿರಣ್ ಎಂ. ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here