ಉಪ್ಪಿನಂಗಡಿ:`ವರ್ಷೋದ ಉಚ್ಛಯ ಬೊಕ್ಕ ಆಟಿದ ಮದಿಪು’ ಕಾರ್ಯಕ್ರಮ

0

ಪರೋಪಕಾರಿ ಮನಸ್ಸಿದ್ದಾಗ ಉತ್ತಮ ಮಾನವನಾಗಲು ಸಾಧ್ಯ: ಒಡಿಯೂರು ಶ್ರೀ

ಉಪ್ಪಿನಂಗಡಿ: ಜ್ಞಾನವಿದ್ದ ತಲೆ ಇದ್ರೆ ಸಾಲದು. ಪ್ರೀತಿ ತುಂಬಿದ ಹೃದಯ, ಪರೋಪಕಾರಿ ಮನಸ್ಸು ನಮ್ಮಲ್ಲಿದ್ದಾಗ ಮಾತ್ರ ಉತ್ತಮ ಮಾನವನಾಗಲು ಸಾಧ್ಯ. ಅದಕ್ಕೆ ತಾಯಿಯೇ ಮೊದಲ ಗುರುವಾಗಬೇಕು. ಮನೆಯೇ ನಮ್ಮ ಮೊದಲ ಪಾಠ ಶಾಲೆಯಾಗಬೇಕು. ಆಗ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣಗೊಳ್ಳಲು ಸಾಧ್ಯ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಒಡಿಯೂರು ಶ್ರೀ ಗುರುದೇವ ಬಳಗ ಉಪ್ಪಿನಂಗಡಿ ವಲಯದ ವತಿಯಿಂದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉಪ್ಪಿನಂಗಡಿ ಮತ್ತು ಶ್ರೀ ಗ್ರಾಮ ವಿಕಾಸ ಯೋಜನೆ ಒಡಿಯೂರು ಇವುಗಳ ಸಂಯುಕ್ತಾಶ್ರಯದಲ್ಲಿ ಆ.6ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆದ `ವರ್ಷೋದ ಉಚ್ಛಯ ಬೊಕ್ಕ ಆಟಿದ ಮದಿಪು’ ಕಾರ್ಯಕ್ರಮದ ಸುಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.


ನದಿ ಅದರ ನೀರನ್ನು ಹೇಗೆ ಕುಡಿಯುವುದಿಲ್ಲ. ಮರ ಅದರ ಹಣ್ಣುಗಳನ್ನು ಹೇಗೆ ತಿನ್ನುವುದಿಲ್ಲ. ಆದ್ದರಿಂದ ಪರೋಪಕಾರಿಯ ಪಾಠವನ್ನು ಪ್ರಕೃತಿ ನಮಗೆ ಕಲಿಸುತ್ತದೆ. ಅಂತಹ ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಕೃತಿಯೊಂದಿಗೆ ಬೆರೆತು ಬದುಕಿದಾಗ ಉತ್ತಮ ಬದುಕು ಸಾಧ್ಯ. ಹಿರಿಯರ ಪ್ರತಿಯೊಂದು ಆಚರಣೆ, ಆಹಾರ ಪದ್ಧತಿಯಲ್ಲಿಯೂ ಒಂದೊಂದು ಅರ್ಥವಿದೆ ಎಂದ ಅವರು, ಹುಟ್ಟು ಹಬ್ಬದ ದಿನದಂದು ನಿಮ್ಮ ನಿಮ್ಮ ನಕ್ಷತ್ರದ ಹೆಸರಲ್ಲಿ ಒಂದೊಂದು ಗಿಡಗಳನ್ನು ನೆಟ್ಟಾಗ ಸಂಪದ್ಭರಿತ ಪ್ರಕೃತಿ ನಿರ್ಮಾಣವಾಗಲು ಸಾಧ್ಯವಿದೆ ಎಂದರು.


ಮಂಗಳೂರಿನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಾತನಾಡಿ, ಹಿಂದೆ ಸಾಗುವಳಿಗೆ ಪ್ರಾಧಾನ್ಯತೆ ಇತ್ತು. ಆಗ ಆರ್ಥಿಕವಾಗಿ ಬಡತನವಿದ್ದರೂ, ಪ್ರೀತಿಯಲ್ಲಿ ಬಡತನವಿರಲಿಲ್ಲ. ಹಣದ ಮೇಲಿನ ವ್ಯಾಮೋಹದಿಂದ ನಾವಿಂದು ಹಿಂದಿನ ನೆನಪುಗಳನ್ನು ಮರೆಯುತ್ತಿದ್ದೇವೆ. ನಮ್ಮ ಹಿರಿಯರ ಕಾಲದಲ್ಲಿ ಬಡತನದ ತಿಂಗಳಾದ ಆಟಿ ಇಂದಿನ ದಿನಗಳಲ್ಲಿ ಸಂಸ್ಕೃತಿ, ಆಚರಣೆಯಾಗಿ ಮಾರ್ಪಾಡಾಗಿದೆ. ಹಿಂದಿನವರು ಮಾಡಿದ ಎಲ್ಲಾ ಆಚಾರ- ವಿಚಾರಗಳಲ್ಲೂ ವೈಜ್ಞಾನಿಕ ಸತ್ಯವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ ಎಂದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಋಷಿ ಮತ್ತು ಕೃಷಿ ದೇಶದ ಆಧ್ಯಾತ್ಮಿಕ ಬದುಕಿನ ಮೂಲವಾಗಿದೆ. ಕೃಷಿ ಪರಂಪರೆ ಉಳಿದಾಗ ಮಾತ್ರ ಭಾರತ ಉಳಿಯಲು ಸಾಧ್ಯ. ಕಾಲ ಬದಲಾದಂತೆ ಯುವಕರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಐಟಿ- ಬಿಟಿ ಸಂಸ್ಕೃತಿ ನಮ್ಮದಾಗುತ್ತಿದೆ. ಏನೇ ಬದಲಾವಣೆಗಳಾದರೂ ನಮ್ಮ ಆಚಾರ – ವಿಚಾರ, ಸಂಸ್ಕೃತಿ, ವೇಷ- ಭೂಷಣದಲ್ಲಿ ಪರಿವರ್ತನೆ ಆಗಬಾರದು ಎಂದರು.


ಮುಖ್ಯ ಅತಿಥಿಯಾಗಿದ್ದ ಡಾ. ನಿರಂಜನ ರೈ ಮಾತನಾಡಿ, ನಾವಿಂದು ನಮ್ಮ ನೆಲದ ಸಂಸ್ಕೃತಿ, ಮೊದಲಿನ ಜೀವನ ಶೈಲಿಯಿಂದ ದೂರವಾಗ್ತ ಇದ್ದೇವೆ. ಮೊದಲ ಆಹಾರ ಪದ್ಧತಿಯನ್ನು ಮರೆತಿದ್ದೇವೆ. ಪಾಶ್ಚಾತ ಸಂಸ್ಕೃತಿ ಹಳ್ಳಿ ಹಳ್ಳಿಗೂ ಕಾಲಿಟ್ಟಿದೆ. ಇಂತಹ ಸ್ಥಿತಿಯಲ್ಲಿ ಸಾಮಾಜಿಕ ನೆಲೆಯ ಪ್ರಾಧ್ಯಾನ್ಯತೆಯಿಂದ ಮಾತ್ರ ತುಳು ಭಾಷೆ, ತುಳುವರ ಸಂಸ್ಕೃತಿಯ ಉಳಿವು ಸಾಧ್ಯ ಎಂದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ಶ್ರೀ ಸತ್ಯನಾರಾಯಣ ಪೂಜೆ, ಮಕ್ಕಳಿಂದ ಭಜನಾ ಸೇವೆ, ಆಟೋಟ ಸ್ಪರ್ಧೆಗಳು ನಡೆಯಿತು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಜತೀಂದ್ರ ಶೆಟ್ಟಿ ಅಲಿಮಾರ್, ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಂಡರ್ ಚಂದಪ್ಪ ಮೂಲ್ಯ, ಗುಣಕರ ಅಗ್ನಾಡಿ, ಜಯರಾಮ ಶೆಟ್ಟಿ, ಸುರೇಶ್ ಅತ್ರೆಮಜಲು, ವೆಂಕಪ್ಪ ಪೂಜಾರಿ ಮರುವೇಲು, ಚಂದ್ರಶೇಖರ ಶೆಟ್ಟಿ, ವಿಶ್ವನಾಥ ಶೆಟ್ಟಿ ಕಂಗ್ವೆ, ಚಂದ್ರಶೇಖರ ಮಡಿವಾಳ, ಕೈಲಾರು ರಾಜಗೋಪಾ ಭಟ್, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಸುಂದರ ಗೌಡ, ಕಿಶೋರ್ ಜೋಗಿ, ಜಯಂತ ಪೊರೋಳಿ ಮತ್ತಿತರರು ಉಪಸ್ಥಿತರಿದ್ದರು.
ಒಡಿಯೂರು ಬಳಗದ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ನಾಯಕ್ ನಟ್ಟಿಬೈಲ್ ವಂದಿಸಿದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

ಜತೀಂದ್ರ ಶೆಟ್ಟಿ ಅಲಿಮಾರ್ ಸಂಪಾದಿಸಿರುವ ಕೃಷಿ ಸಲಕರಣೆಗಳು, ಅಡುಗೆ ಮನೆಯ ವಸ್ತುಗಳು, ನಿತ್ಯೋಪಯೋಗಿ ವಸ್ತುಗಳು ಹೀಗೆ ಪುರಾತನ ವಸ್ತುಗಳ ಪ್ರದರ್ಶನ, ಚಂದ್ರಪ್ಪ ಮೂಲ್ಯ ಅವರ ಸಂರಕ್ಷಣೆಯಲ್ಲಿರುವ 12, 25, 30 ವರ್ಷಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ ಮತ್ತು ವಿವಿಧ ಬಗೆಯ ಹಣ್ಣು ಹಂಪಲುಗಳು ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಆಟಿಯ ವಿಶಿಷ್ಟ ತಿನಿಸುಗಳು ಭೋಜನದಲ್ಲಿದ್ದವು.

LEAVE A REPLY

Please enter your comment!
Please enter your name here