ಪುತ್ತೂರು:ಸಾಲ್ಮರ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮದ್ರಸಕ್ಕೆ ಹೋಗುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ನಾಯಿ ಕಡಿದ ಪರಿಣಾಮ ಪರಿಸರದ ಜನರು ಆತಂಕಿತರಾಗಿದ್ದಾರೆ.ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಆಗ್ರಹಿಸಿದ್ದಾರೆ.
ಸಾಲ್ಮರ ಪರಿಸರದಲ್ಲಿ ಬೀದಿ ನಾಯಿಗಳ ವಿಪರೀತ ಹಾವಳಿಯಿಂದಾಗಿ ವಾಹನ ಸವಾರರು ಸೇರಿದಂತೆ ದಾರಿ ಹೋಕರು ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ.ಪ್ರತಿಯೊಂದು ಬೀದಿಗಳಲ್ಲಿಯೂ ಬೀದಿ ನಾಯಿಗಳದ್ದೇ ದರ್ಬಾರು.ಸುಮಾರು 20ಕ್ಕೂ ಅಧಿಕ ಬೀದಿ ನಾಯಿಗಳು ಗುಂಪುಗುಂಪಾಗಿ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡಿಕೊಂಡಿದ್ದು, ಬೆಳಗ್ಗೆ ಮತ್ತು ಸಂಜೆ ಮದ್ರಸಕ್ಕೆ ಹೋಗುವ ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಬರುತ್ತಿವೆ.ಇತ್ತೀಚೆಗಷ್ಟೆ ಇಬ್ಬರು ವಿದ್ಯಾರ್ಥಿಗಳಿಗೆ ನಾಯಿಗಳು ಕಚ್ಚಿವೆ ಎಂದು ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.