ನೆಲ್ಯಾಡಿ: ಆ.9ರಂದು ನಡೆದ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಅವರಿಗೆ ಮಾನಸಿಕ ಹಿಂಸೆ ನೀಡಿರುವ ಗ್ರಾಮಸ್ಥರಿಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗಣೇಶ ಎಂಬ ಹೆಸರು ಉಲ್ಲೇಖಿಸಿರುವುದರಿಂದ ಜನ ನಮ್ಮನ್ನು ಆರೋಪಿಗಳಂತೆ ನೋಡುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಗೋಳಿತ್ತೊಟ್ಟು ಗ್ರಾಮದ ಬೊಟ್ಟಿಮಜಲು ನಿವಾಸಿ ಗಣೇಶ ಬಿ.ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ವೈದ್ಯಾಧಿಕಾರಿಯವರಿಗೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ದ.ಕ.ಜಿಲ್ಲಾ ಶಾಖೆ ವತಿಯಿಂದ ಆ.14 ರಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಈ ದೂರಿನಲ್ಲಿ ಗ್ರಾಮಸ್ಥರಾದ ಡೀಕಯ್ಯ ಪೂಜಾರಿ ಮತ್ತು ಗಣೇಶ್ ಎಂಬವರು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಡೀಕಯ್ಯ ಪೂಜಾರಿ ಮತ್ತು ಗಿರೀಶ್ ಎಂಬ ಎರಡು ಜನರ ಬದಲು ಡೀಕಯ್ಯ ಪೂಜಾರಿ ಮತ್ತು ಗಣೇಶ್ ಎಂಬ ಹೆಸರನ್ನು ಉಲ್ಲೇಖ ಮಾಡಿರುವುದರಿಂದ ಜನರು ನನ್ನನ್ನು ಆರೋಪಿಯಂತೆ ನೋಡುತ್ತಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳಲ್ಲಿ ವಿಚಾರಿಸಿದಾಗ ಈ ಹೆಸರನ್ನು ಪಂಚಾಯತ್ ಸಿಬ್ಬಂದಿ ನೀಡಿದ್ದಾರೆ ಎಂದು ಹೇಳಿ ವಿಷಯದ ಪರಿವರ್ತನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅವರು ಗ್ರಾ.ಪಂ.ನ ನಿರ್ಣಯದ ಪ್ರತಿಯೊಂದಿಗೆ ಪೊಲೀಸರಿಗೆ ಮನವಿ ಮಾಡಿದ್ದಾರೆ.