ಪುತ್ತೂರು: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.12 ರಂದು ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರವಚನಕಾರ, ಅಧ್ಯಾತ್ಮಿಕ ಚಿಂತಕ, ಮಂಗಳೂರು ಧರ್ಮಪ್ರಾಂತ್ಯದ ಸಂಪರ್ಕ ಮಾಧ್ಯಮ ಆಯೋಗದ ಕಾರ್ಯದರ್ಶಿ ಹಾಗೂ ಮಂಗಳೂರು ಕೆನರಾ ಕಮ್ಯುನಿಕೇಶನ್ ಸೆಂಟರ್ ನ ನಿರ್ದೇಶಕರಾಗಿರುವ ವಂ|ಅನಿಲ್ ಫೆರ್ನಾಂಡಿಸ್‌ರವರು ‘ಮಕ್ಕಳ ಮಾಧ್ಯಮ ಶಿಕ್ಷಣದಲ್ಲಿ ಹೆತ್ತವರು ಹಾಗೂ ಶಿಕ್ಷಕರ ಪಾತ್ರದ ಬಗ್ಗೆ, ಮಕ್ಕಳ ಸ್ಮಾರ್ಟ್ ಫೋನ್ ಚಟವನ್ನು ಮುರಿಯಲು ಸೃಜನಾತ್ಮಕ ಮಾರ್ಗಗಳ ಬಗ್ಗೆ ಹಾಗೂ ಮೊಬೈಲ್ ವ್ಯಸನದಿಂದ ಹೇಗೆ ಮಕ್ಕಳನ್ನು ಕಾಪಾಡುವುದು ಎಂಬ ವಿಷಯದ ಮೇಲೆ ಮಾತನಾಡಿದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಲೀನಾ ಪಿಂಟೋರವರು ಮಕ್ಕಳ ಚಟುವಟಿಕೆ ಹಾಗೂ ಏಳಿಗೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊರವರು, ಶೇಕಡಾ 100ರಷ್ಟು ಫಲಿತಾಂಶ ಪಡೆದ ಹಿನ್ನಲೆಯಲ್ಲಿ ಶಾಲಾ ಶಿಕ್ಷಕರ ಪ್ರೋತ್ಸಾಹವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ವಂ| ಅಬೆಲ್ ಲೋಬೊರವರು ಮಾತನಾಡಿ, ಶಾಲೆಯ ಸರ್ವತೋಮುಖ ಏಳಿಗೆಯಲ್ಲಿ ಹೆತ್ತವರ ಪಾತ್ರದ ಬಗ್ಗೆ ತಿಳಿಸುತ್ತಾ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸುವಲ್ಲಿ ಶಿಕ್ಷಕರ ಜೊತೆ ಹೆತ್ತವರೂ ಕೈ ಜೋಡಿಸಬೇಕಾಗಿ ಹೇಳಿದರು.
ಸೈಂಟ್ ಮೇರಿಸ್ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮೀರಾ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನರ್ಸರಿ ವಿಭಾಗದ ಮುಖ್ಯ ಶಿಕ್ಷಕಿ ಧರ್ಮಭಗಿನಿ ವೆಲೆಂಟಿನಾ ಸ್ವಾಗತಿಸಿ, ಶ್ರೀಮತಿ ಪವಿತ್ರ ಕಾರ್ಲೋ ವಂದಿಸಿದರು. ಶ್ರೀಮತಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಹಿಂದಿನ ಮಹಾಸಭೆಯ ವರದಿ ವಾಚಿಸಿ, ವಾರ್ಷಿಕ ಲೆಕ್ಕಪತ್ರ ಮಂಡಿಸಲಾಯಿತು ಬಳಿಕ ಕಾರ್ಯಕಾರಿ ಸಮಿತಿಯ ಸದಸ್ಯರ ಚುನಾವಣೆ ನಡೆಸಲಾಯಿತು.
2022-23 ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.