





ಪುತ್ತೂರು: ಥೈಲ್ಯಾಂಡ್ ದೇಶದಲ್ಲಿ ಗೇಮಿಂಗ್ ಕಂಪನಿಯಲ್ಲಿ ಉದ್ಯೋಗ ಮಾಡಿಕೊಡುತ್ತೇವೆ ಎಂದು ನಂಬಿಸಿ ಮಂಗಳೂರಿನ ಯುವಕನೊಬ್ಬನಿಂದ ಲಕ್ಷಾಂತರ ರೂಪಾಯಿ ಪಡೆದು ಮಯನ್ಮಾರ್ ದೇಶಕ್ಕೆ ಕೆಲಸಕ್ಕೆ ಕಳುಹಿಸಿ ವಂಚನೆ ಮಾಡಿದ ಆರೋಪದ ಘಟನೆಗೆ ಸಂಬಂಧಿಸಿ ಪುತ್ತೂರಿನ ಗೋಲ್ಡನ್ ಟ್ರಾವೆಲ್ಸ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವಕ ಮಯನ್ಮಾರ್ ದೇಶದಲ್ಲಿ ಬಂಧನಕ್ಕೊಳಗಾಗಿರುವುದಾಗಿ ಕರೆ ಮಾಡಿ ತಿಳಿಸಿರುವುದಾಗಿ ತಾಯಿ ಜುಬೈದರವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


ಘಟನೆ ವಿವರ:
ಮಂಗಳೂರು ಉಳ್ಳಾಲ ಸೋಮೇಶ್ವರದ ಹುಸೇನ್ ಮತ್ತು ಜುಬೈದ ದಂಪತಿ ಪುತ್ರ ಹೇಮದ್ ರಜಾಕ್ ವಂಚನೆಗೊಳಗಾದವರು. ‘ಮಗ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಮಾಡಿ ಉದ್ಯೋಗಕ್ಕಾಗಿ ಹುಡುಕಾಟದಲ್ಲಿದ್ದಾಗ ಪುತ್ತೂರಿನ ಗೋಲ್ಡನ್ ಟ್ರಾವೆಲ್ ನ ಮಾಲಕ ಇಲಿಯಾಸ್ ಮತ್ತು ಆತನ ಸಹವರ್ತಿ ಯಶ್ ಎಂಬವರ ಪರಿಚಯವಾಗಿತ್ತು. ಅವರು ಮಗ ಹೇಮದ್ ರಜಾಕ್ ಗೆ ಥೈಲ್ಯಾಂಡ್ ದೇಶದಲ್ಲಿ ಗೇಮಿಂಗ್ ಕಂಪನಿಯಲ್ಲಿ ಉದ್ಯೋಗವನ್ನು ಮಾಡಿಕೊಡುತ್ತೇವೆ ಎಂದು ಭರವಸೆಯನ್ನು ನೀಡಿ ವೀಸಾ ಮಾಡಿಕೊಡುವುದಾಗಿ ನಂಬಿಸಿ ಮಗನಿಂದರೂ.1,50,000 ಹಣವನ್ನು ಪಡೆದುಕೊಂಡು, ಅ.17ರಂದು ಥೈಲ್ಯಾಂಡ್ ದೇಶಕ್ಕೆ ಹೊರಡಲು ಟಿಕೆಟ್ ಹಾಗೂ ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸಿ ‘ನೀನು ಥೈಲ್ಯಾಂಡ್ ದೇಶಕ್ಕೆ ತಲುಪಿದ ತಕ್ಷಣ ಅಲ್ಲಿಂದ ನನ್ನ ಪರಿಚಯಸ್ಥ ಜನರು ನಿನ್ನನ್ನು ಕಾರಿನಲ್ಲಿ ಕೆಲಸ ಮಾಡಲಿರುವ ಗೇಮಿಂಗ್ ಕಂಪೆನಿಗೆ ಕರೆದುಕೊಂಡು ಹೋಗುತ್ತಾರೆ’ ಎಂದು ಹೇಳಿ ಆತನನ್ನು ಮಂಗಳೂರಿನಿಂದ ದೆಹಲಿಗೆ ಕಳುಹಿಸಿ ಬಳಿಕ ಅಲ್ಲಿಂದ ಬ್ಯಾಂಕಾಕ್‌ಗೆ ಕಳುಹಿಸಿಕೊಟ್ಟಿರುತ್ತಾರೆ.ಅ.18ರಂದು ರಾತ್ರಿ ಮಗ ಹೇಮದ್ ರಜಾಕ್ ನನಗೆ ಫೋನ್ ಕರೆ ಮಾಡಿ ‘ನಾನು ಥೈಲ್ಯಾಂಡ್ ದೇಶದ ಏರ್ಪೋಟ್ ಗೆ ತಲುಪಿದ ಬಳಿಕ ಅಲ್ಲಿ ಕೆಲವು ವ್ಯಕ್ತಿಗಳು ಒಂದು ಕಾರಿನಲ್ಲಿ ನನ್ನನ್ನು ಬೇರೆ ಬೇರೆ ಕಡೆಗಳಲ್ಲಿ ಕರೆದುಕೊಂಡು ಹೋಗಿ ನಾನು ವಿಚಾರಿಸಿದಾಗ ಸರಿಯಾಗಿ ಉತ್ತರವನ್ನು ನೀಡದೇ ನನಗೆ ಸರಿಯಾಗಿ ಆಹಾರ ನೀರು ಕೂಡಾ ನೀಡದೇ ಕಾಡಿನಲ್ಲಿ ಸುತ್ತಾಡಿಸಿ ಯಾವುದೋ ಒಂದು ಪ್ರದೇಶಕ್ಕೆ ಕರೆದುಕೊಂಡು ಬಂದಿರುತ್ತಾರೆ. ನನಗೆ ಇಲ್ಲಿ ತೊಂದರೆಯಾಗುತ್ತಿದೆ ಎಂದು ಹೇಳಿದ್ದ.ನಂತರ ಹೇಮದ್ ರಜಾಕ್ ಬೇರೆ ಬೇರೆ ಮೊಬೈಲ್ ನಂಬಗರ್‌ಳಿಂದ ನನಗೆ ಫೋನ್ ಕರೆ ಮಾಡಿ ನನಗೆ ಥೈಲ್ಯಾಂಡ್ ದೇಶದಲ್ಲಿ ಕೆಲಸ ಕೊಡಿಸುವ ಬದಲು ನನ್ನನ್ನು ಮಯನ್ಮಾರ್ ದೇಶಕ್ಕೆ ಕೆಲಸಕ್ಕೆ ಕಳುಹಿಸಿರುತ್ತಾರೆ ನಂತರ ಇಲ್ಲಿ ಮಯನ್ಮಾರ್ ಸೇನೆಯು ನನ್ನನ್ನು ಹಾಗೂ ಇತರ ಕೆಲವು ವ್ಯಕ್ತಿಗಳನ್ನು ಬಂಧಿಸಿ ನಮ್ಮ ಬಳಿ ಇದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿರುತ್ತಾರೆ. ಇಲ್ಯಾಸ್ ನನಗೆ ಮೋಸ ಮಾಡಿ ಇಲ್ಲಿಗೆ ಕಳುಹಿಸಿಕೊಟ್ಟಿರುತ್ತಾನೆ. ಈಗ ನಾವು ಮಯನ್ಮಾರ್ ಸೇನೆಯ ಬಂಧನದಲ್ಲಿ ಇರುತ್ತೇವೆ ಎಂಬುದಾಗಿ ಆತನ ಜೊತೆ ಇದ್ದ ಒಬ್ಬ ವ್ಯಕ್ತಿಯ ಮೊಬೈಲ್ ಫೋನ್‌ನಿಂದ ಕರೆ ಮಾಡಿ ತಿಳಿಸಿದ್ದಾನೆ.ಈ ಕುರಿತು ಅ.29ಕ್ಕೆ ನಾನು ಪುತ್ತೂರಿನ ಗೋಲ್ಡನ್ ಟ್ರಾವೆಲ್ಸ್ನ ಮಾಲಕ ಇಲಿಯಾಸ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಅವರು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ. ಮಗನಿಗೆ ಥೈಲ್ಯಾಂಡ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಮಗನಿಂದ ರೂ.1,50,000 ಹಣವನ್ನು ಪಡೆದು ಮೋಸ ಮಾಡಿ ಮಯನ್ಮಾರ್ ದೇಶಕ್ಕೆ ಕಳುಹಿಸಿ ಅಲ್ಲಿ ಮಗನು ತೊಂದರೆಗೆ ಒಳಗಾಗುವಂತೆ ಮಾಡಲಾಗಿದೆ’ ಎಂದು ಜುಬೈದಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಲಂ:10, 24 ಇಮಿಗ್ರೇಷನ್ ಆ್ಯಕ್ಟ್ 1983ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.













