ಪುತ್ತೂರು: ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗಳು ದೇಶದ ಬಗ್ಗೆ ದೇಶಭಕ್ತಿ, ಅಭಿಮಾನಗಳನ್ನು ಮೂಡಿಸಿಕೊಂಡು, ಸತ್ಪ್ರಜೆಗಳಾಗಿ ದೇಶದ ಕುರಿತು ಯೋಚಿಸಿದಾಗ ಈ ದೇಶದ ಸ್ವಾತಂತ್ರ್ಯದ ಆಚರಣೆ ಮಹತ್ವ ಪಡೆದುಕೊಳ್ಳುತ್ತದೆ ಎಂದು ಸೇನೆಯ ನಿವೃತ್ತ ಯೋಧ ಮೋಹನ್ ದಾಸ್ ತೆಂಕಿಲ ಹೇಳಿದರು.
ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಧ್ವಜಾರೋಹಣಗೈದು ಮಾತನಾಡಿದರು. ಸೇನೆಯಲ್ಲಿ ಸುಮಾರು 23 ವರ್ಷಗಳ ಅನುಭವಗಳನ್ನು ಅವರು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು. ತೆಂಕಿಲ ನರೇಂದ್ರ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಾಭಿಮಾನಿ ಪ್ರಜೆಗಳ ನಿರ್ಮಾಣದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಬಿ.ಎಡ್ ಕಾಲೇಜ್, ನರೇಂದ್ರ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರುಗಳು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ನಾಲ್ಕೂ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಹಲವಾರು ಪೋಷಕರು ಭಾಗವಹಿಸಿದ್ದರು.
ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಶೋಭಿತಾ ಸತೀಶ್ ಸ್ವಾಗತಿಸಿ, ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಸಾದ್ ಶಾನ್‌ಭಾಗ್ ವಂದಿಸಿದರು.ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೀತಾ ಕಾರ್ಯಕ್ರಮ ನಿರೂಪಿಸಿದರು.
ತೆಂಕಿಲ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ಬಳಿಕ ವಿವೇಕಾನಂದ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತ್ರಿವರ್ಣ ಧ್ವಜ ಧರಿಸಿ, ಶಿಕ್ಷಕ ವೃಂದದವರ ಜೊತೆಗೆ ತೆಂಕಿಲ, ಬಪ್ಪಳಿಗೆ ಜಂಕ್ಷನ್, ಜೈನ್ ಭವನ, ವಿಕಾಸಸೌಧ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ರಸ್ತೆಯ ಮೂಲಕ ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಪುನಃ ತೆಂಕಿಲ ಕ್ರೀಡಾಂಗಣದಲ್ಲಿ ಸಮಾವೇಶಗೊಂಡರು. ಈ ಮೆರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿಯಲ್ಲಿ ಪುತ್ತೂರು ತಾಲೂಕಿನ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು.