ಪುತ್ತೂರು: ಲೋಕಕಲ್ಯಾಣಾರ್ಥವಾಗಿ ಹಾಗು ಹಿಂದೂ ಬಾಂಧವರ ಏಕತೆಗಾಗಿ ಮುಂದಿನ ಮಾಸದಲ್ಲಿ ಶ್ರೀ ದೇವರ ನಾಮವನ್ನು ‘ಓಂ ಶ್ರೀ ಮಹಾಲಿಂಗೇಶ್ವರಯಾ ನಮಃ’ ಎಂಬ ಸರಳ ಸೂತ್ರದಲ್ಲಿ ಏಕಾದಶ ಕೋಟಿ ಸಂಖ್ಯೆಯಲ್ಲಿ ಜಪಿಸಿ ದೇವರಿಗೆ ಸಮರ್ಪಣೆ ಮಾಡುವ ವಿಶೇಷ ಕಾರ್ಯಕ್ರಮವನ್ನು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಮ್ಮಿಕೊಂಡಿದ್ದು, ಈ ಕುರಿತು ಆ.20ರಂದು ಬೆಳಿಗ್ಗೆ ಗಂಟೆ 10.30ರಿಂದ ದೇವಳದ ನಟರಾಜ ವೇದಿಕೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಪುತ್ತೂರಿನ ಮತ್ತು ಸುತ್ತಮುತ್ತಲಿನ ಹತ್ತೂರ ಮಹಾಜನರ ಆರಾಧ್ಯ ದೇವರಾಗಿದ್ದು, ಈ ಭಾಗದ ಹಿಂದೂ ಜನರ ಧಾರ್ಮಿಕ ಶ್ರದ್ಧಾ ಭಕ್ತಿಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ದೇವಳದ ವ್ಯವಸ್ಥಾಪನ ಸಮಿತಿಗಳು ಕೈಗೊಂಡಂತಹ ಹಲವು ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿರುವುದು ಸಂತೋಷದ ವಿಚಾರ. ಇದೀಗ ಲೋಕಕಲ್ಯಾಣಾರ್ಥವಾಗಿ ಹಾಗೂ ಈ ಭಾಗದ ಹಿಂದೂ ಜನರ ಜನರ ಏಕತೆಗಾಗಿ ನಾವೆಲ್ಲರೂ ಸೇರಿ ಮುಂದಿನ ಮಾಸದಲ್ಲಿ ಶ್ರೀದೇವರ ನಾಮವನ್ನು ‘ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂಬ ಸರಳ ಸೂತ್ರದಲ್ಲಿ 11,000 ಭಕ್ತರು ಸರಳ ವೃತಧಾರಿಗಳಾಗಿ ದಿನಕ್ಕೆ 1080 ಬಾರಿ (ದಿನಕ್ಕೆ 20 ನಿಮಿಷಗಳಂತೆ) 11 ದಿನಗಳ ಕಾಲ ಜಪಿಸಿ ಏಕಾದಶ ಕೋಟಿ ಸಂಖ್ಯೆಯಲ್ಲಿ ದೇವರಿಗೆ ಸಮರ್ಪಿಸಿದಲ್ಲಿ ಶ್ರೀ ದೇವರು ಸಂತುಷ್ಟರಾಗಿ ನಮ್ಮೆಲ್ಲರನ್ನು ಹರಸುತ್ತಾರೆ ಎಂಬ ನಂಬಿಕೆ ನಮ್ಮದು. ಈ ಪ್ರಯುಕ್ತ ಭಕ್ತರು ಮಹತ್ಕಾರ್ಯವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚಿಸಲು ಆ.20 ರಂದು ಬೆಳಗ್ಗೆ ಗಂಟೆ 10:30 ರಿಂದ ದೇವಳದ ನಟರಾಜ ವೇದಿಕೆಯಲ್ಲಿ ಊರಿನ ಸಮಸ್ತ ಭಕ್ತರು, ವಿವಿಧ ವಾರ್ಡು ಮತ್ತು ಗ್ರಾಮಗಳ ಮಮ ಪರಿವಾರದ ಸದಸ್ಯರ ಸಭೆ ಕರೆಯಲಾಗಿದೆ. ನಾಮಜಪ ಮಹಾಯಜ್ಞ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.