ಅಭಿವೃದ್ಧಿಗಾಗಿ ಒಮ್ಮತದ ತೀರ್ಮಾನ: ಡಾ. ರಾಜಾರಾಮ್ ಕೆ.ಬಿ
ಉಪ್ಪಿನಂಗಡಿ: ಉತ್ತಮ ಆಡಳಿತ, ಅಭಿವೃದ್ಧಿಯ ಚಿಂತನೆಯುಳ್ಳ ಪಕ್ಷಕ್ಕೆ ಬೆಂಬಲ ಸಿಗುತ್ತದೆ ಎಂಬುದಕ್ಕೆ ಮೊನ್ನೆ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯೇ ಸಾಕ್ಷಿ. ಇಲ್ಲೊಂದು ಮೈತ್ರಿ ಕೂಟ ರಚನೆಯಾಗಿ ಅಭಿವೃದ್ಧಿಗಾಗಿ ಒಮ್ಮತದ ತೀರ್ಮಾನ ತೆಗೆದುಕೊಂಡಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ತಿಳಿಸಿದರು.
ಉಪ್ಪಿನಂಗಡಿ ಗ್ರಾ.ಪಂ. ನಲ್ಲಿ ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾದವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದು ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ನ ಸಿದ್ಧಾಂತವಾಗಿದೆ. ಕಾಂಗ್ರೆಸ್ನಿಂದ ಮಾತ್ರ ಉತ್ತಮ ಆಡಳಿತ ಸಾಧ್ಯವಿದ್ದು, ಇದಕ್ಕಾಗಿ ಗ್ರಾ.ಪಂ.ನಲ್ಲಿ ಎಸ್ಡಿಪಿಐ, ಪಕ್ಷೇತರ ಸದಸ್ಯರು ಕೂಡಾ ನಮಗೆ ಬೆಂಬಲ ನೀಡಿದ್ದಾರೆ ಎಂದರು.
ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಮಾತನಾಡಿ, ಅಭಿವೃದ್ಧಿ ದೃಷ್ಟಿಯಲ್ಲಿ ಬದಲಾವಣೆ ಬೇಕು. ಆದರೆ ಆ ಬದಲಾವಣೆ ಅಭಿವೃದ್ಧಿಗೆ ಪೂರಕವಾಗಿರಬೇಕು. ಎಲ್ಲರ ಸಹಕಾರವಿದ್ದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ. ಇದರೊಂದಿಗೆ ವಿರೋಧ ಪಕ್ಷವೂ ಸಮರ್ಥವಾಗಿರಬೇಕು ಎಂದರು.
ಎಸ್ಡಿಪಿಐ ಮುಖಂಡ ಝಕಾರಿಯಾ ಕೊಡಿಪ್ಪಾಡಿ ಮಾತನಾಡಿ, ಬೇರೆ ಕಡೆಯಿಂದ ನಮಗೆ ಆಮಿಷಗಳು ಬಂದಿತ್ತು. ಆದರೆ ಅವರ ಆಮೀಷಕ್ಕೆ ಒಳಗಾಗದೇ ಕಾಂಗ್ರೆಸ್ನ ಜಾತ್ಯಾತೀತ ಸಿದ್ಧಾಂತವನ್ನು ಒಪ್ಪಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಾವು ಕಾಂಗ್ರೆಸ್ ಬೆಂಬಲಿತರಿಗೆ ಬೆಂಬಲ ನೀಡಿದ್ದೇವೆ. ನೂತನ ಆಡಳಿತದ ಮೂಲಕ ಈ ಗ್ರಾಮ ಇನ್ನಷ್ಟು ಅಭಿವೃದ್ಧಿ ಕಾಣುವಂತಾಗಬೇಕು ಎಂದರು.
ಕಾಂಗ್ರೆಸ್ ಮುಖಂಡ ನಝೀರ್ ಮಠ ಮಾತನಾಡಿ, ಅಧಿಕಾರ ಪಡೆದಿದ್ದೇವೆ ಎನ್ನುವುದಕ್ಕಿಂತ ನಮ್ಮ ಅಧಿಕಾರವಧಿಯಲ್ಲಿ ಏನು ಮಾಡಿದ್ದೇವೆ ಅನ್ನುವುದು ಮುಖ್ಯ. ಉಪ್ಪಿನಂಗಡಿಯು ಉತ್ತಮ ಆದಾಯವಿರುವ ಪಂಚಾಯತ್. ಆದರೆ ಇಲ್ಲಿನ ಆದಾಯದಲ್ಲಿ ಶೇ.65 ಪಾಲು ಪಂಚಾಯತ್ ಆಡಳಿತ ವ್ಯವಸ್ಥೆಗೆ ಖರ್ಚಾಗುತ್ತಿದೆ. ಇನ್ನಾದರೂ ಅದು ಸಾರ್ವಜನಿಕ ಅಭಿವೃದ್ಧಿಗೆ ಬಳಕೆಯಾಗಲಿ. ದ್ವೇಷ ಮುಕ್ತ, ಭ್ರಷ್ಟ ಮುಕ್ತ ಸಮಾಜ ನಮ್ಮದಾದರೆ ಮಾತ್ರ ದೇಶ ಒಳ್ಳೆಯದಾಗಲು ಸಾಧ್ಯ ಎಂದರು.
ಗ್ರಾ.ಪಂ. ಸದಸ್ಯ ಧನಂಜಯ ನಟ್ಟಿಬೈಲು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನೂತನ ಆಡಳಿತದವರಿಂದ ಆಗಬೇಕು. ಎಲ್ಲಾ 20 ಸದಸ್ಯರನ್ನು ಒಟ್ಟು ಸೇರಿಸಿಕೊಂಡು ಅಭಿವೃದ್ಧಿಯ ವಿಚಾರದಲ್ಲಿ ಮುಂದುವರಿಯಬೇಕು ಎಂದರು.
ಗ್ರಾ.ಪಂ. ಸದಸ್ಯ ಸಣ್ಣಣ್ಣ ಮಾತನಾಡಿ, ಪಂಚಾಯತ್ನಲ್ಲಿ ಯಾವುದೇ ಜಾತಿ, ಮತ, ಧರ್ಮದ ರಾಜಕೀಯ ಬೇಡ. ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲಾ ಒಟ್ಟಿಗೆ ಸಾಗೋಣ. ಸಾರ್ವಜನಿಕರು ಯಾರೂ ಲಂಚ ಕೊಡಲು ಬರಬೇಡಿ. ಲಂಚಕ್ಕೆ ಒತ್ತಾಯ ಮಾಡಿದ್ದಲ್ಲಿ ಅದನ್ನು ನೇರ ನಮಗೆ ತಿಳಿಸಿ ಎಂದರು.
ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ವಿದ್ಯಾಲಕ್ಷ್ಮೀ ಪ್ರಭು, ಅಧಿಕಾರ ಕ್ಷಣಿಕ. ಅದಕ್ಕಿಂತಲೂ ಜನರ ಪ್ರೀತಿ ವಿಶ್ವಾಸ ಮುಖ್ಯ. ನಮ್ಮ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಮಾಡುತ್ತೇವೆ ಎಂದರು.
ವೇದಿಕೆಯಲ್ಲಿ ನೂತನ ಅಧ್ಯಕ್ಷೆ ಲಲಿತಾ, ಎಸ್ಡಿಪಿಐ ಬ್ಲಾಕ್ ಅಧ್ಯಕ್ಷ ಮುಸ್ತಾಫ ಲತೀಫಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಇಬ್ರಾಹೀಂ ಕೆ., ಯು.ಟಿ. ತೌಸೀಫ್, ವಿನಾಯಕ ಪೈ, ಕಾಂಗ್ರೆಸ್ ಪ್ರಮುಖರಾದ ಕಲಂದರ್ ಶಾಫಿ, ಸೋಮನಾಥ, ಮುಹಮ್ಮದ್ ಕೆಂಪಿ, ಆದಂ ಕೊಪ್ಪಳ, ಸಿದ್ದೀಕ್ ಕೆಂಪಿ, ಉಮೇಶ, ಫೌಝರ್ ಮತ್ತಿತರರು ಉಪಸ್ಥಿತರಿದ್ದರು.ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುರ್ರಹ್ಮಾನ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಬ್ದುರ್ರಶೀದ್ ವಂದಿಸಿದರು.