ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಉಡಾಫೆ ವರ್ತನೆ ಆರೋಪ-ಗ್ರಾ.ಪಂ ಸದಸ್ಯರ, ಗ್ರಾಮಸ್ಥರ ಆಕ್ರೋಶ
ಅಕ್ರಮ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದಕ್ಕೆ ಆಕ್ಷೇಪ
ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ ಘಟನೆ ಕೊಳ್ತಿಗೆ ಗ್ರಾಮ ಸಭೆಯಲ್ಲಿ ನಡೆಯಿತು. ಸಭೆ ಗ್ರಾ.ಪಂ ಅಧ್ಯಕ್ಷ ಶ್ಯಾಮ ಸುಂದರ ರೈ ಅಧ್ಯಕ್ಷತೆಯಲ್ಲಿ ಆ.19ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಮಣಿಕ್ಕರ ಅಂಗನವಾಡಿ ಜಾಗದ ವಿಚಾರ ಚರ್ಚೆ ನಡೆಯಿತು. ಜಾಗ ಒಂದು ಕಡೆ ಇದೆ, ಅಂಗನವಾಡಿ ಇನ್ನೊಂದು ಕಡೆ ಇದೆ ಎಂದು ಕೆಲ ಗ್ರಾಮಸ್ಥರು ಹೇಳಿದರು. ಗ್ರಾಮಸ್ಥ ಗಫೂರ್ ಮಾತನಾಡಿ ಅಂಗನವಾಡಿ ಜಾಗದ ವಿಚಾರ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇರಬೇಕು ಎಂದು ಹೇಳಿದರು. ಅಂಗನವಾಡಿಗಳಿಗೆ ಜಾಗ ಇದೆಯೋ ಇಲ್ವೋ ಎನ್ನುವ ಮಾಹಿತಿ ಅಧಿಕಾರಿಗಳಿಗೆ ಯಾಕೆ ಇಲ್ಲ ಎಂದು ಸದಸ್ಯ ಪ್ರಮೋದ್ ಕೆ.ಎಸ್ ಕೇಳಿದರು. ಅಂಗನವಾಡಿ ಜಾಗದ ವಿಚಾರದ ಬಗ್ಗೆ ಅಂಗನವಾಡಿ ಶಿಕ್ಷಕಿ ನವಿತಾ ಮಾಹಿತಿ ನೀಡಿದರು. ಮಣಿಕ್ಕರ ಅಂಗನವಾಡಿಗೆ ಸ್ವಂತ ಜಾಗವಿದ್ದರೂ ಬೇರೆ ಜಾಗದಲ್ಲಿ ಅಂಗನವಾಡಿ ಇದೆ ಎನ್ನುವ ವಿಚಾರದಲ್ಲಿ ಕೆಲಕಾಲ ಚರ್ಚೆ ನಡೆಯಿತು. ಅಧ್ಯಕ್ಷ ಶ್ಯಾಮ ಸುಂದರ ರೈ ಮಾತನಾಡಿ ಅಂಗನವಾಡಿಗಳ ಜಾಗದ ವಿಚಾರವಾಗಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇರಬೇಕು ಎಂದು ಹೇಳಿ ಮುಂದಿನ ದಿನಗಳಲ್ಲಿ ವಿ.ಎ ಅವರು ಗಡಿಗುರುತು ಮಾಡಬೇಕು ಎಂದು ಹೇಳಿದರು.
ಶಿಕ್ಷಣಾಧಿಕಾರಿ ವಿರುದ್ಧ ಅಸಮಾಧಾನ:
ಸದಸ್ಯ ಪವನ್ ಡಿ.ಜಿ ಮಾತನಾಡಿ ಸರಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷನಿಗಿರುವ ಅರ್ಹತೆ ಏನು? ಎಸ್‌ಡಿಎಂಸಿಗೆ ಇಲಾಖೆಯಿಂದ ಸಿಗಬೇಕಾದ ಮಾನ್ಯತೆಯೇನು ಎಂದು ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದ ಅಕ್ಷರ ದಾಸೋಹ ತಾ.ಪಂ ಪುತ್ತೂರು ಸಹಾಯಕ ನಿರ್ದೇಶಕರಾದ ವಿಷ್ಣುಪ್ರಸಾದ್ ಅವರಲ್ಲಿ ಪ್ರಶ್ನಿಸಿದರು. ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿಗೆ ಗ್ರಾ.ಪಂ ಲೆಟರ್‌ನೊಂದಿಗೆ ಕೊಂರ್ಬಡ್ಕ ಶಾಲಾ ಎಸ್‌ಡಿಎಂಸಿಯವರು ಹೋಗಿದ್ದು ಆ ವೇಳೆ ಶಿಕ್ಷಣಾಧಿಕಾರಿಗಳು ಮತ್ತು ಇತರರು ಉಡಾಫೆಯ ಮಾತುಗಳನ್ನಾಡಿದ್ದಾರೆ ಎಂದು ಪವನ್ ಡಿ.ಜಿ ಆಕ್ರೋಶ ವ್ಯಕ್ತಪಡಿಸಿದರು.
ಕೊಂರ್ಬಡ್ಕ ಶಾಲೆಯಲ್ಲಿ ಪೂರ್ಣಕಾಲಿಕ ಶಿಕ್ಷಕರಿಲ್ಲ, ಅಲ್ಲಿಗೆ ಶಿಕ್ಷಣ ಇಲಾಖೆ ಯಾಕೆ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಸದಸ್ಯ ಯತೀಂದ್ರ ಕೊಚ್ಚಿ ಮಾತನಾಡಿ ಶಾಲೆಯಿಂದ ಶಿಕ್ಷಕ/ಶಿಕ್ಷಕಿಯರನ್ನು ರಿಲೀವ್ ಮಾಡುವಾಗ ಆ ಶಾಲೆಗೆ ಬದಲಿ ಯಾರೆಂದು ಮೊದಲೇ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ತೀರ್ಥಾನಂದ ದುಗ್ಗಳ ಮಾತನಾಡಿ ಶಿಕ್ಷಣಾಧಿಕಾರಿ ಕಚೇರಿಗೆ ಹೋದರೆ ಕ್ಯಾರೇ ಮಾಡುವುದಿಲ್ಲ, ಮೊನ್ನೆಯ ವಿಚಾರವಾಗಿ ಈಗಲೇ ಬಿಇಒ ಅವರಿಗೆ ಕೇಳಿ ಎಂದರು.
ಕೊಳ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ವೆಂಕಟ್ರಮಣ ಕೆ.ಎಸ್ ಮಾತನಾಡಿ ಶಾಲಾ ಎಸ್‌ಡಿಎಂಸಿಗೆ ಜವಾಬ್ದಾರಿ ಇದೆ, ಅಧಿಕಾರ ಇದೆ. ಶಿಕ್ಷಕರಿಗೆ ಮತ್ತು ಇಲಾಖೆಗೆ ಅದೊಂದು ವೃತ್ತಿಯಾದರೆ ಪೋಷಕರಿಗೆ, ಎಸ್‌ಡಿಎಂಸಿಗೆ ವೃತ್ತಿಯಲ್ಲ, ಜವಾಬ್ದಾರಿ. ಹಾಗಾಗಿ ಎಸ್‌ಡಿಎಂಸಿಗೆ ಇಲಾಖೆ ಗೌರವ ಕೊಡಬೇಕು ಎಂದು ಹೇಳಿದರು.
ಶಿಕ್ಷಣಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಪವನ್ ಡಿ.ಜಿ ಅವರು ಶಿಕ್ಷಣಾಧಿಕಾರಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು.
ಸದಸ್ಯ ಪ್ರಮೋದ್ ಕೆ.ಎಸ್ ಮಾತನಾಡಿ ಬಿಇಒ ಅವರು ಶಾಲಾ ಸಮಸ್ಯೆ ಸರಿ ಮಾಡಬೇಕೇ ವಿನಃ ದಬ್ಬಾಳಿಕೆ ಮಾಡಬಾರದು ಎಂದು ಹೇಳಿದರು. ಶಿಕ್ಷಣ ಇಲಾಖೆಯ ವಿರುದ್ಧ ಖಂಡನಾ ನಿರ್ಣಯ ಮಾಡಿ ಎಂದು ಗ್ರಾಮಸ್ಥ ಸುಂದರ ಪೂಜಾರಿ ಹೇಳಿದರು.
ಕೊಂರ್ಬಡ್ಕ ಶಾಲಾ ವಿಚಾರದಲ್ಲಿ ಬಿಇಒ ಅವರಿಗೆ ಕರೆ ಮಾಡಿ ಈಗಲೇ ಸ್ಪಷ್ಟನೆ ಕೊಡಬೇಕೆಂದು ಗ್ರಾಮಸ್ಥರು ಉತ್ತಾಯಿಸಿದಾಗ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದ ಅಕ್ಷರ ದಾಸೋಹ ತಾ.ಪಂ ಪುತ್ತೂರು ಸಹಾಯಕ ನಿರ್ದೇಶಕರಾದ ವಿಷ್ಣುಪ್ರಸಾದ್ ಅವರು ನನ್ನ ಮೊಬೈಲ್‌ನಲ್ಲಿ ನೆಟ್‌ವರ್ಕ್ ಇಲ್ಲ ಎಂದು ಹೇಳಿದರು. ಬಳಿಕ ಗ್ರಾಮಸ್ಥ ಅಮಳ ರಾಮಚಂದ್ರ ಅವರು ಬಿಇಒ ಕಚೇರಿಗೆ ಕರೆ ಮಾಡಿ ವಿಷ್ಣುಪ್ರಸಾದ್ ಅವರಿಗೆ ಮಾತನಾಡಲು ನೀಡಿದರು. ಕೆಲ ಹೊತ್ತು ಮಾತನಾಡಿದ ವಿಷ್ಣುಪ್ರಸಾದ್ ಅವರು ಕೊಂರ್ಬಡ್ಕ ಶಾಲೆಗೆ ಪೆರ್ಲಂಪಾಡಿ ಶಾಲೆಯಿಂದ ಒಬ್ಬರು ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷ ಶ್ಯಾಮ ಸುಂದರ ರೈ ಉತ್ತರಿಸಿ ಮೊನ್ನೆಯ ವಿಚಾರ ಮತ್ತು ಇಂದಿನ ಚರ್ಚೆ ನಡೆದ ವಿಚಾರಗಳನ್ನು ನಿರ್ಣಯ ಮಾಡಿ ಡಿಡಿಪಿಐಗೆ ಕಳುಹಿಸುವ, ಶಾಸಕರಿಗೂ ವಿಷಯ ತಿಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುವ ಎಂದು ಹೇಳಿದರು.
ಖಾಯಂ ಪಶು ವೈದ್ಯಾಧಿಕಾರಿ ನೇಮಕಕ್ಕೆ ಆಗ್ರಹ:
ಕೊಳ್ತಿಗೆಗೆ ಖಾಯಂ ಪಶು ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ವೆಂಕಟ್ರಮಣ ಕೆ.ಎಸ್ ಆಗ್ರಹಿಸಿದರು. ಈ ಹಿಂದೆ ಮೂರು ಸಿಬ್ಬಂದಿ ಇದ್ದರು, ಈಗ ವೈದ್ಯಾಧಿಕಾರಿ ಇಲ್ಲದೇ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು. ಗ್ರಾ.ಪಂ ಅಧ್ಯಕ್ಷ ಶ್ಯಾಮ ಸುಂದರ ರೈ ಮಾತನಾಡಿ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕೂಡಾ ಇದೆ ಎಂದು ಹೇಳಿದರು.
ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ:
ಗ್ರಾಮ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಸದಸ್ಯ ಪ್ರಮೋದ್ ಕೆ.ಎಸ್ ಹೇಳಿದರು. ಮಾಜಿ ಸದಸ್ಯ ತೀರ್ಥಾನಂದ ದುಗ್ಗಳ ಮಾತನಾಡಿ ಮುಂದಿನ ಗ್ರಾಮ ಸಭೆಗೆ ಎಲ್ಲರನ್ನು ಬರುವ ಹಾಗೆ ಮಾಡಬೇಕು, ಶಾಸಕರಲ್ಲೂ ಈ ಬಗ್ಗೆ ಹೇಳಬೇಕು ಎಂದು ಹೇಳಿದರು. ಅಧ್ಯಕ್ಷ ಶ್ಯಾಮ ಸುಂದರ ರೈ ಉತ್ತರಿಸಿ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು, ಶಾಸಕರಿಗೂ ವಿಚಾರ ತಿಳಿಸಲಾಗುವುದು ಎಂದು ಹೇಳಿದರು.
ಶಿಕ್ಷಕರನ್ನು ಆಗಾಗ ಕಳುಹಿಸುವುದರಿಂದ ಸಮಸ್ಯೆ:
ಪೆರ್ಲಂಪಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಮಾತನಾಡಿ ನಮ್ಮ ಶಾಲಾ ಶಿಕ್ಷಕ/ಶಿಕ್ಷಕಿಯರನ್ನು ಬೇರೆ ಬೇರೆ ಶಾಲೆಗೆ ಕಳುಹಿಸುತ್ತಾರೆ, ಇದು ಯಾಕೆ, ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಅಕ್ರಮ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ..!
ಪೆರ್ಲಂಪಾಡಿ ಶಾಲೆಗೆ ಸೇರಿದ ಜಾಗದಲ್ಲಿ ಒತ್ತೆಕೋಲ ಸಮಿತಿಯವರು ಅಕ್ರಮ ಕಟ್ಟಡ ಕಟ್ಟಿದ್ದು ಅದಕ್ಕೆ ಮೆಸ್ಕಾಂನವರು ವಿದ್ಯುತ್ ಸಂಪರ್ಕ ನೀಡಿದ್ದಾರೆ ಎಂದು ಸದಸ್ಯ ಪ್ರಮೋದ್ ಕೆ.ಎಸ್ ಆಕ್ಷೇಪ ವ್ಯಕ್ತಪಡಿಸಿದರು. ಶಾಲೆಯವರಿಗೂ ಗೊತ್ತಿಲ್ಲದೇ ವಿದ್ಯುತ್ ಸಂಪರ್ಕ ಹೇಗೆ ಕೊಟ್ಟಿದ್ದೀರಿ ಎಂದು ಪ್ರಮೋದ್ ಕೆ.ಎಸ್ ಮೆಸ್ಕಾಂ ಇಲಾಖೆಯನ್ನು ಪ್ರಶ್ನಿಸಿದರು.
ವಿದ್ಯುತ್ ಕಂಬ ತೆರವುಗೊಳಿಸಿ:
ಅಮ್ಚಿನಡ್ಕ-ನೆಟ್ಟಾರು ರಸ್ತೆಯ ಬದಿಯಡ್ಕ ಎಂಬಲ್ಲಿ ರಸ್ತೆಗೆ ತಾಗಿಕೊಂಡೇ ವಿದ್ಯುತ್ ಕಂಬವೊಂದು ಇದ್ದು ಅದನ್ನು ತೆರವು ಮಾಡಬೇಕೆಂದು ಸದಸ್ಯ ಪವನ್ ಡಿ.ಜಿ ಮೆಸ್ಕಾಂ ಇಲಾಖೆಯನ್ನು ಒತ್ತಾಯಿಸಿದರು.
ಗ್ರಾ.ಪಂ ಸದಸ್ಯೆ ಯಶೊಧಾರಿಗೆ ಸನ್ಮಾನ:
ಕೊಳ್ತಿಗೆ ಗ್ರಾ.ಪಂನಲ್ಲಿ 1995ರಿಂದ ಸತತ 6 ಬಾರಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಗೊಂಡಿರುವ ಮತ್ತು ಪ್ರಸ್ತುತ ಅನಾರೋಗ್ಯದಲ್ಲಿರುವ ಗ್ರಾ.ಪಂ ಸದಸ್ಯೆ ಯಶೋಧ ಅವರನ್ನು ಗ್ರಾ.ಪಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆಯಾಗಿ, ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಯಶೋಧ ಅವರು ಅನೇಕ ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು. ಅವರು ಆದಷ್ಟು ಬೇಗ ಅನಾರೋಗ್ಯದಿಂದ ಗುಣ ಹೊಂದಿ ಹಿಂದಿನಂತೆ ಕಾರ್ಯಚಟುವಟಿಕೆ ಮಾಡುವಂತಾಗಲಿ ಎಂದು ಗ್ರಾ.ಪಂ ಅಧ್ಯಕ್ಷ ಶ್ಯಾಮ ಸುಂದರ ರೈ ಹಾರೈಸಿದರು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ನಾಗವೇಣಿ ಕೆ, ಸದಸ್ಯರಾದ ಪ್ರಮೋದ್ ಕೆ.ಎಸ್, ಪವನ್ ಡಿ.ಜಿ, ಯತೀಂದ್ರ ಕೊಚ್ಚಿ, ಲತಾಕುಮಾರಿ, ಶುಭಲತಾ ರೈ, ಯಶೋಧ ಕೋಡಂಬು, ಯಶೋಧ ರಾಜೇಂದ್ರ, ಪ್ರೇಮಾ, ಅಕ್ಕಮ್ಮ, ವೇದಾವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಓ ಸುನಿಲ್ ಎಚ್.ಟಿ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.