ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಕಾಶ್ಮೀರ ವಿಜಯ ತಾಳಮದ್ದಳೆ

0

ಕಲೆಯಲ್ಲಿ ಪಾತ್ರದ ಸೋಲೂ ಗೆಲುವಾಗಿ ಮಾರ್ಪಾಡಾಗುತ್ತದೆ : ಲಕ್ಷ್ಮೀಶ ತೋಳ್ಪಾಡಿ


ಪುತ್ತೂರು: ಕಲೆಯ ಪ್ರದರ್ಶನದ ಸಂದರ್ಭದಲ್ಲಿ ಪ್ರಸ್ತುತಿಯ ಆಧಾರದ ಮೇಲೆ ಪಾತ್ರದ ಸೋಲೂ ಪ್ರೇಕ್ಷಕನಿಗೆ ಗೆಲುವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಬದುಕಿನಲ್ಲಿ ಸೋಲು ಕೇವಲ ಸೋಲಾಗಿ ಅಷ್ಟೇ ಉಳಿದು ಕಾಡುತ್ತದೆ. ಹಾಗಾಗಿ ಜೀವನದುದ್ದಕ್ಕೂ ಎದುರಾಗುವ ಸೋಲುಗಳನ್ನು ಕಲೆಯ ಸಂದರ್ಭದ ಸೋಲಿನಂತೆ ಸ್ವೀಕರಿಸಿ ಮುನ್ನಡೆಯುವ ಕಲೆ ಕರಗತಗೊಳ್ಳಬೇಕು. ಆಗ ಬದುಕು ರಸಮಯವಾಗಿ ಕಾಣಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ದಶಮಾನೋತ್ಸವ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾಶ್ಮೀರ ವಿಜಯ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕಾಶ್ಮೀರ ನಮ್ಮ ದೇಶದ ಹೆಮ್ಮೆ. ಅಲ್ಲಿನ ಪೌರಾಣಿಕ, ಐತಿಹಾಸಿಕ ಹಾಗೂ ಪ್ರಚಲಿತ ಚಿತ್ರಣವನ್ನು ಯುವಸಮೂಹಕ್ಕೆ ಕಟ್ಟಿಕೊಡುವ ನೆಲೆಯಲ್ಲಿ ಕಾಶ್ಮೀರ ವಿಜಯ ತಾಳಮದ್ದಳೆ ಕಾರ್ಯನಿರ್ವಹಿಸುತ್ತಿದೆ. ದೇಶದ ಬಗೆಗೆ ಯೋಚಿಸುವ ಮನೋಭಾವ ಎಳೆಯ ಮಕ್ಕಳಲ್ಲಿ ಬೆಳೆದುಬರಬೇಕು ಎಂದು ನುಡಿದರು.


ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಪ್ರೊ.ಎಂ.ಎಲ್.ಸಾಮಗ, ಭಾಗವತ ಪಟ್ಲ ಸತೀಶ್ ಶೆಟ್ಟಿ, ಕಾಶ್ಮೀರ ವಿಜಯ ಪ್ರಸಂಗಕರ್ತ ಪ್ರೊ.ಪವನ್ ಕಿರಣಕೆರೆ ಹಾಗೂ ಸಂಯೋಜಕ ಸುಧಾಕರ ಆಚಾರ್ಯ ಉಡುಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರುಗಳಾದ ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಪ್ರಸನ್ನ ಭಟ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ., ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಹಿಂದಾರು ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.


ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಾದ ನಿಯತಿ ಭಟ್, ಆದಿತ್ಯಕೃಷ್ಣ, ಸುಧನ್ವ ಹಾಗೂ ಅದ್ವೈತ ಕೃಷ್ಣ ಭಾಗವತಿಕೆಯ ಶೈಲಿಯಲ್ಲಿ ಪ್ರಾರ್ಥಿಸಿದರು. ಶಿಕ್ಷಕಿ ಸುಜಯಾ ಸ್ವಾಗತಿಸಿ. ಶಿಕ್ಷಕಿ ಸೌಂದರ್ಯಲಕ್ಷ್ಮೀ ವಂದಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಹಾಗೂ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.


ಯಕ್ಷಗಾನ ತಾಳಮದ್ದಳೆ : ಸಭಾಕಾರ್ಯಕ್ರಮದ ತರುವಾಯ ಕಾಶ್ಮೀರ ವಿಜಯ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಡಾ.ವಿಖ್ಯಾತ್ ಶೆಟ್ಟಿ ಹಾಗೂ ಅಮೃತಾ ಅಡಿಗ ಪಾಣಾಜೆ, ಚೆಂಡೆ ಹಾಗೂ ಮದ್ದಳೆವಾದಕರಾಗಿ ಪದ್ಮನಾಭ ಉಪಾಧ್ಯಾಯ ಹಾಗೂ ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಚಕ್ರತಾಳದಲ್ಲಿ ರಾಜೇಂದ್ರಕೃಷ್ಣ ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಸಹಕರಿಸಿದರು. ಮುಮ್ಮೇಳದಲ್ಲಿ ಪ್ರೊ.ಎಂ.ಎಲ್.ಸಾಮಗ, ಮಹೇಂದ್ರ ಆಚಾರ್ಯ, ಸರ್ಪಂಗಳ ಈಶ್ವರ ಭಟ್, ಡಾ.ವಾದಿರಾಜ ಕಲ್ಲೂರಾಯ, ಪ್ರೊ.ಪವನ್ ಕಿರಣಕೆರೆ ಹಾಗೂ ಶ್ರೀರಮಣಾಚಾರ್ಯ ಕಾರ್ಕಳ ಪಾತ್ರಪ್ರಸ್ತುತಿ ನಡೆಸಿಕೊಟ್ಟರು.


ಕಾಶ್ಮೀರ ವಿಜಯ ತಾಳಮದ್ದಳೆಯು ಪೌರಾಣಿಕ ಹಿನ್ನಲೆ, ಐತಿಹಾಸಿಕ ಘಟನಾವಳಿಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಬಗೆಗೆ ಬೆಳಕುಚೆಲ್ಲಿದ್ದಲ್ಲದೆ ಶ್ರೀ ಆದಿ ಶಂಕರಾಚಾರ್ಯರು ಕಾಶ್ಮೀರದಲ್ಲಿ ಅನೇಕ ವಿದ್ವಾಂಸರೊಂದಿಗೆ ಚರ್ಚಿಸಿ ಗೆಲುವನ್ನು ಪಡೆದ ಪ್ರಕ್ರಿಯೆಯನ್ನು ಹಾಗೂ ಕಾಶ್ಮೀರದಲ್ಲಿರುವ ಸರ್ವಜ್ಞ ಪೀಠಾರೋಹಣಗೈದ ಚರಿತ್ರೆಯನ್ನು ಕಟ್ಟಿಕೊಟ್ಟಿತು. ಅಂತೆಯೇ 370ನೇ ವಿಧಿ ರದ್ದತಿಯ ಹಿನ್ನೆಲೆ. ಸಿದ್ಧತೆ ಹಾಗೂ ಕಾರ್ಯಯೋಜನೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಸಫಲವಾಯಿತು.

LEAVE A REPLY

Please enter your comment!
Please enter your name here