ಪುಣಚ; ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಕಾಂಗ್ರೆಸ್ ಸರಕಾರದ ಯೋಜನೆಗಳು ಕಟ್ಟಕಡೇಯ ವ್ಯಕ್ತಿಗೂ ತಲುಪಬೇಕಿದೆ;ಶಾಸಕ ಅಶೋಕ್ ರೈ


ಪುತ್ತೂರು: ಬಡವರನ್ನು ಮೇಲಕ್ಕೆತ್ತಲು ಮತ್ತು ಬಡವರ ಉದ್ದಾರಕ್ಕಾಗಿ ರಾಜ್ಯದ ಕಾಂಗ್ರೆಸ್ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಈ ಪೈಕಿ ಐದು ಗ್ಯಾರಂಟಿ ಯೋಜನೆಗಳನ್ನು ಬಡವರಿಗಾಗಿಯೇ ಜಾರಿಗೆ ತಂದಿದ್ದು ಈ ಯೋಜನೆಗಳು ಕಟ್ಟಕಡೇಯ ವ್ಯಕ್ತಿಗೂ ತಲುಪಬೇಕು ಹಾಗಿದ್ದಲ್ಲಿ ಮಾತ್ರ ಸರಕಾರದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ ಹೇಳಿದರು.


ಅವರು ಪುಣಚ ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪರಿಯಾಲ್ತಡ್ಕ ಶಾಲಾ ವಠಾರದಲ್ಲಿ ನಡೆದ ವಲಯ ಕಾರ್ಯಕರ್ತರ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರದ ಐದು ಗ್ಯಾರಂಟಿ ಯೋಜನೆಗಳು ಇಂದು ಜನರಲ್ಲಿ ಖುಷಿಯನ್ನು ತಂದಿದೆ, ಶಕ್ತಿ ಯೋಜನೆಯಿಂದ ಮಹಿಳೆಯರು ಇಂದು ಶಕ್ತಿವಂತರಾಗುತ್ತಿದ್ದಾರೆ, ಗೃಹಜ್ಯೋತಿ ಯೋಜನೆ ಲಕ್ಷಾಂತರ ಕುಟುಂಬವನ್ನು ಬೆಳಗಿಸಿದೆ, ಸರಕಾರದ ಗ್ಯಾರಂಟಿ ಯೋಜನೆಗಳಿಂದ ಶೇ.95ರಷ್ಟು ಜನರಿಗೆ ಪ್ರಯೋಜನವಾಗಿದೆ ಎಂದು ಹೇಳಿದರು.

ಭ್ರಷ್ಟಾಚಾರವನ್ನು ಮಟ್ಟಹಾಕುತ್ತೇನೆ
ಇಲಾಖೆಯಲ್ಲಿ ಎಲ್ಲೂ ಭ್ರಷ್ಟಾಚಾರ ನಡೆಯದಂತೆ ಅದನ್ನು ಬೇರು ಸಹಿತ ಮಟ್ಟ ಹಾಕುತ್ತೆನೆ. ಅಕ್ರಮ ಸಕ್ರಮ ಮತ್ತು 94 ಸಿ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡುತ್ತೇನೆ. ಕಳೆದ ಬಾರಿ ಅನೇಕ ಮಂದಿ ಸಾರ್ವಜನಿಕರು ಅಕ್ರಮ ಸಕ್ರಮ ಕಡತಗಳ ವಿಲೇವಾರಿಗಾಗಿ ಲಂಚ ನೀಡಿದ್ದು ಅಂಥವರಿಗೆ ಇನ್ನೂ ಅಕ್ರಮ ಸಕ್ರಮ ಕಡತಗಳು ವಿಲೇವಾರಿಯಾಗಿಲ್ಲ. ಬಾಕಿ ಇರುವ ಎಲ್ಲಾ ಕಡತಗಳನ್ನು ನಾನು ವಿಲೇವಾರಿ ಮಾಡುವ ಮೂಲಕ ನನ್ನ ಕ್ಷೆತ್ರದ ಜನತೆಗೆ ನ್ಯಾಯ ಸಿಗುವಂತೆ ಮಾಡುವುದಾಗಿ ಶಾಸಕರು ಭರವಸೆ ನೀಡಿದರು. ಪುಣಚ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಇಲ್ಲಿನ ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ. ಅವುಗಳನ್ನು ಒಂದೊಂದಾಗಿ ಬಗೆಹರಿಸಲಾಗುವುದು ಎಂದು ಹೇಳಿದರು. ಕಾರ್ಯಕರ್ತರು ಪ್ರತೀ ಮನೆಮನೆಗೆ ತೆರಳಿ ರಾಜ್ಯದ ಕಾಂಗ್ರೆಸ್ ಸರಕಾರದ ಸಮಾಜಮುಖಿ ಯೋಜನೆಗಳನ್ನು ತಿಳಿಸಬೇಕು ಆ ಮೂಲಕ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಬಿಜೆಪಿಯವರು ಶಾಲೆಯನ್ನು ಬಂದ್ ಮಾಡಿದ್ದಾರೆ: ಎಂ ಎಸ್ ಮಹಮ್ಮದ್
ಪರಿಯಾಲ್ತಡ್ಕ ಶಾಲೆಯಲ್ಲಿ ಪ್ರೌಢ ಶಾಲೆಯನ್ನು ಪ್ರಾರಂಭ ಮಾಡುವಾಗ ಅದಕ್ಕೆ ಬಿಜೆಪಿಯವರೇ ಅಡ್ಡಿ ಮಾಡಿದ್ದರು. ಇಲ್ಲಿ ಪ್ರೌಢ ಶಾಲಾ ತರಗತಿ ಅಗತ್ಯವಾಗಿದೆ ಮಂಜೂರಾದ ಕ್ಲಾಸನ್ನು ಖಾಸಗಿಯವರ ಲಾಬಿಗೆ ಮಣಿದ ಅಂದಿನ ಬಿಜೆಪಿ ಶಾಸಕಿ ಇಲ್ಲಿನ ಜನರ ಭಾವನೆಗೂ ಬೆಲೆ ಕೊಡದೆ ತರಗತಿಯನ್ನು ರದ್ದು ಮಾಡಿದ್ದರು ಎಂದು ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್ ಸಭೆಯಲ್ಲಿ ತಿಳಿಸಿದರು.ಮುಂದಿನ ದಿನಗಳಲ್ಲಿ ಪರಿಯಾಲ್ತಡ್ಕದಲ್ಲಿ ಪ್ರೌಢ ಶಾಲೆಯನ್ನು ಪ್ರಾರಂಭ ಮಾಡುವ ಮೂಲಕ ಇಲ್ಲಿನ ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಮಾಡಬೆಕು ಎಂದು ಶಾಸಕರಿಗೆ ಮನವಿ ಮಾಡಿದರು. ಪುಣಚ ಗ್ರಾಮದಲ್ಲಿ ಕಾಂಗ್ರೆಸ್ ಭದ್ರವಾಗಿದ್ದು ಕಳೆದ ಗ್ರಪಂ ಚುನಾವಣೆಯಲ್ಲಿ ವೈಯುಕ್ತಿಕ ಕೆಲವು ವಿಚಾರಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು ಇಲ್ಲಿ ಕಾರ್ಯಕರ್ತರ ಕೊರತೆಯಿಲ್ಲ ನಾವು ಎಲ್ಲರೂ ಸೇರಿ ಪಕ್ಷವನ್ನು ಕಟ್ಟುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಎಂದೆಂದೂ ಬಡವರ ಪರ; ಡಾ. ರಾಜಾರಾಂ
ದೇಶದಲ್ಲಿ , ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಬಡವರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಎಂದೂ ಬಡವರ ಪರವಾಗಿಯೇ ಇರುತ್ತದೆ ಎಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು.
ಕಳೆದ ಅವಧಿಯಲ್ಲಿದ್ದ ಬಿಜೆಪಿ ಸರಕಾರದಿಂದ ಜನತೆ ರೋಸಿ ಹೋಗಿದ್ದು ಇದರ ಪರಿಣಾಮ ರಾಜ್ಯದಲ್ಲಿ ಇಂದು ಸುಭದ್ರ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಜನ ಎಂದಿಗೂ ಕಾಂಗ್ರೆಸ್ಸನ್ನು ಕೈ ಬಿಡುವುದಿಲ್ಲ ಮತ್ತು ಕಾಂಗ್ರೆಸ್ ಸರಕಾರ ಇದ್ದರೆ ಮಾತ್ರ ಜನತೆ ನೆಮ್ಮದಿಯಿಂದ ಬಾಳಬಹುದು ಎಂಬುದು ಜನತೆಗೆ ಅರಿವಾಗಿದ್ದು ಆ ಕಾರಣಕ್ಕೆ ಈ ಬಾರಿ ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ. ಪುತ್ತೂರು ಶಾಸಕರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಪುತ್ತೂರು ಅಭಿವೃದ್ದಿಯಾಗುವುದು ನಿಶ್ಚಿತ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಪುಣಚ ವಲಯ ಕಾಂಗ್ರೆಸ್ ಸಮಿತಿಯಿಂದ ಶಾಸಕರಾದ ಅಶೋಕ್ ರೈ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನದ ಬಳಿಕ ಶಾಸಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಸೂಚಿಸಿದರು.

ವೇದಿಕೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವಕ ಕಾಂಗ್ರೆಸ್ ಅಧ್ಯಕ್ಷ ಫಾರೂಖ್ ಪೆರ್ನೆ, ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ,ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಪುಣಚ ವಲಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ, ವಲಯ ಕಾಂಗ್ರೆಸ್ ಕಾರ್ಯದರ್ಶಿ ಸಿರಾಜ್ ಮಣಿಲ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಝೀರ್ ಮಠ, ಡಿಸಿಸಿ ಸದಸ್ಯೆ ಪ್ರತಿಭಾ ಶೆಟ್ಟಿ, ಗ್ರಾಪಂ ಸದಸ್ಯೆ ಲಲಿತಾ, ಗಿರಿಜಾ ಮೊದಲಾದವರು ಉಪಸ್ಥಿತರಿದ್ದರು.
ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here