ಬೆಂಗಳೂರು : ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸುವ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿಣಿ ವ್ಯವಸ್ಥೆಯಡಿ 11ಇ ನಕ್ಷೆ, ಜಮೀನಿನ ತತ್ಕಾಲ್ ಪೋಡಿ, ಭೂ ಪರಿವರ್ತನೆ ಮತ್ತು ಹದ್ದುಬಸ್ತುಗಾಗಿ ಅರ್ಜಿಗಳು ವಿತರಿಸುವ ಯೋಜನೆಯನ್ನು ಆಯಾ ಗ್ರಾ.ಪಂ.ನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾಡಿಸುವಂತೆ ಸರಕಾರ ಆದೇಶಿಸಿದೆ.
ಗ್ರಾಮೀಣ ಜನರು ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸರ್ಕಾರಿ ಸೇವೆ ಪಡೆಯಬೇಕಾದುದರಿಂದ ಜನಸಂದಣಿ ಹೆಚ್ಚುವುದರ ಜತೆಗೆ ಕೇಂದ್ರದಲ್ಲಿ ತ್ವರಿತಗತಿ ಸೇವೆ ಒದಗಿಸುವುದಕ್ಕೆ ತೊಡಕಾಗುತ್ತಿತ್ತು. ಸಾರ್ವಜನಿಕರು ಸೇವೆಗಳನ್ನು ಪಡೆಯಲು ತುಂಬಾ ದೂರ ಕ್ರಮಿಸಬೇಕಾದುದರಿಂದ ಸಾಕಷ್ಟು ಹಣ ವ್ಯಯಿಸಬೇಕಾಗುತ್ತಿತ್ತು. ಈ ಕಾರಣದಿಂದಾಗಿ ಗ್ರಾಪಂಗಳ ಹಂತದಲ್ಲಿಯೇ ಸೇವೆ ದೊರಕುವಂತೆ ಅನುಕೂಲ ಕಲ್ಪಿಸಲಾಗಿದೆ.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿಣಿ ವ್ಯವಸ್ಥೆಯಡಿ ವಿವಿಧ ಸೇವೆಗಳನ್ನು ಪಡೆಯುವಲ್ಲಿ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳು ಮಹತ್ವದ ಪಾತ್ರವಹಿಸಲಿವೆ.