ಕೋಡಿಂಬಾಡಿಯ ಶಾಂತಿನಗರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ 8ನೇ ಕಾರ್ಯಕ್ರಮ-ಸನ್ಮಾನ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಗ್ರಾಮ ಪಂಚಾಯತ್ ಕೋಡಿಂಬಾಡಿ ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ ಹೊರನಾಡ ಕನ್ನಡಿಗರಾದ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಮಹಾಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಗ್ರಾಮ ಸಾಹಿತ್ಯ ಸಂಭ್ರಮ’ದ ಸರಣಿ ಎಂಟನೇ ಕಾರ್ಯಕ್ರಮ ಆ.26ರಂದು ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.


ಸಾಹಿತ್ಯದ ಬಗ್ಗೆ ತಿಳಿಸುವ ಕಾರ್ಯ ನಡೆಯುತ್ತಿದೆ: ಮಲ್ಲಿಕಾ ಅಶೋಕ್:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಿಂದ ಶಾಲಾ ಮಕ್ಕಳಿಗೆ ಮತ್ತು ಗ್ರಾಮದ ಜನತೆಗೆ ಸಾಹಿತ್ಯದ ಬಗ್ಗೆ ತಿಳಿಸುವ ಕಾರ್ಯವಾಗುತ್ತಿದೆ. ಈ ಕಾರ್ಯಕ್ರಮ ತಾಲೂಕಿನೆಲ್ಲೆಡೆ ನಡೆಯುತ್ತಿದ್ದು ಇದು ಯಶಸ್ವಿಯಾಗಿ ನಡೆಯಲಿ ಎಂದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್‌ನಿಂದ ಸನ್ಮಾನ ನಡೆದಿದ್ದು ಅದರಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಅಧಿಕವಾಗಿದ್ದರು. ಹೀಗಾಗಿ ವಿದ್ಯಾರ್ಥಿಗಳು ಯಾವ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ಕನ್ನಡಲ್ಲಿ ಅತೀ ಹೆಚ್ಚು ಅಂಕ ಗಳಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.


ಸಾಹಿತ್ಯವನ್ನು ತಿರುಚಬಾರದು-ಪ್ರಕಾಶ್ ಗೌಡ :
ಮುಖ್ಯ ಅಭ್ಯಾಗತರಾಗಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಗೌಡ ಮಾತನಾಡಿ, ಸಾಹಿತ್ಯ ಸಂಭ್ರಮ ಪುರಾತನ, ರಾಜರ ಕಾಲದಿಂದಲೂ ಬೆಳೆದು ಬಂದಿದೆ. ಈಗ ಸರಕಾರದಿಂದ ಸಾಹಿತ್ಯ ಪರಿಷತ್ ಮೂಲಕ ಮುನ್ನಡೆಯುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕರಾವಳಿಗರು ಅಪಾರ ಕೊಡುಗೆ ನೀಡಿದ್ದಾರೆ. ಕರ್ನಾಟಕ್ಕೆ ಬಂದಷ್ಟು ಜ್ಞಾನಪೀಠ ಪ್ರಶಸ್ತಿ ಬೇರೆಲ್ಲಿಗೂ ಬಂದಿಲ್ಲ. ಆಧುನಿಕ ಕಾಲದಲ್ಲಿ ಕೆಲವೊಂದು ಮಾಧ್ಯಮಗಳ ವಿಚಾರಗಳಿಂದಾಗಿ ಕನ್ನಡ ಸಾಹಿತ್ಯ ನಶಿಸುತ್ತಾ ಹೋಗುತ್ತಿದೆ. ಕವಿಗಳಿಗೆ ಇದ್ದಷ್ಟು ತಾಳ್ಮೆ ಬೇರೆ ಯಾರಿಗೂ ಇಲ್ಲ. ಯಾರೂ ಸಾಹಿತ್ಯವನ್ನು ತಿರುಚುವ ಕೆಲಸ ಮಾಡಬಾರದು ಎಂದು ಹೇಳಿದರು.


ಸಂಪೂರ್ಣ ಸಹಕಾರ ಇದೆ- ಜಯಪ್ರಕಾಶ್ ಬದಿನಾರು :
ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಸಾಹಿತ್ಯ ಸರಣಿ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ನಡೆಯುತ್ತಿರುವುದು ಸಂತೋಷ ತಂದಿದೆ. ಈ ಕಾರ್ಯಕ್ರಮದಲ್ಲಿ ಕೋಡಿಂಬಾಡಿ ಗ್ರಾಮದ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ, ಅಭಿನಂದಿಸುತ್ತಿರುವುದು ಅರ್ಥ ಪೂರ್ಣವಾಗಿದೆ. ಸಾಹಿತ್ಯ ಪರಿಷತ್‌ನ ಎಲ್ಲಾ ಕಾರ್ಯಕ್ರಮಗಳಿಗೂ ನಮ್ಮ ಸಹಕಾರವಿದೆ ಎಂದರು.

ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಯಬೇಕು-ಮೋನಪ್ಪ ಗೌಡ :
ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಾಲಾ ಸ್ಥಳದಾನಿ ಮೋನಪ್ಪ ಗೌಡ ಪಮ್ಮನಮಜಲು ಮಾತನಾಡಿ, ಆಂಗ್ಲ ಭಾಷಾ ಶಿಕ್ಷಣಕ್ಕೆ ಆಕರ್ಷಿತವಾಗಿದ್ದ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಗ್ರಾಮದಲ್ಲಿ ನಡೆಯುವ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ಗ್ರಾಮದವರನ್ನು ಸೇರಿಸಿಕೊಂಡು ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಸುವಂತಾಗಬೇಕು ಎಂದರು.

ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶ- ನಾರಾಯಣ ಕುಂಬ್ರ :
ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಾಹಿತ್ಯದ ಒಲವು ಮೂಡಿಸಿ, ಕನ್ನಡಾಭಿಮಾನವನ್ನು ವೃದ್ಧಿಸಿ ಗ್ರಾಮದಲ್ಲಿ ಬಹರಗಾರರನ್ನು ಪ್ರೋತ್ಸಾಹಿಸುವುದು, ಅವರ ಬರಹಗಳು ಪತ್ರಿಕೆಗಳಲ್ಲಿ ಪ್ರಸಾರಗೊಳ್ಳುವಂತೆ ಮಾಡುವುದು ಹಾಗೂ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.


ಸಾಹಿತ್ಯ ಪರಿಷತ್ ಚಿಂತನೆ ಶ್ಲಾಘನೀಯ-ನಿರಂಜನ್ ರೈ :
ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಂ. ನಿರಂಜನ ರೈ ಮಠಂತಬೆಟ್ಟು ಮಾತನಾಡಿ, ನಮ್ಮಲ್ಲಿ ಭಾಷಾ ಬೇಧ ಭಾವವಿಲ್ಲ. ಇತರ ಭಾಷೆಗಳ ಜೊತೆಗೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಕನ್ನಡ ಸಾಹಿತ್ಯ ಪಟ್ಟಣದಲ್ಲಿ ಬೆಳೆದರೆ ಸಾಲದು. ಗ್ರಾಮಗಳಿಗೂ ವಿಸ್ತರಿಸಬೇಕು. ಕನ್ನಡ ಸಾಹಿತ್ಯವನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯವ ಸಾಹಿತ್ಯ ಪರಿಷತ್‌ನ ಚಿಂತನೆ ಶ್ಲಾಘನೀಯ ಎಂದರು.

ಹಿರಿಯ ವಿದ್ಯಾರ್ಥಿ ಸಂಘ ಪುನರ್ ರಚನೆ- ಸಂತೋಷ್ ಕುಮಾರ್ :
ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ ಮಾತನಾಡಿ, ನಾವು ಓದಿರುವ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘವನ್ನು ಪುನರ್ ರಚಿಸಲಾಗುವುದು ಎಂದರು.

ಶಾಂತಿನಗರ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮುಖ್ಯಗುರು ವಿಷ್ಣುಪ್ರಸಾದ್ ಸಿ. ಸ್ವಾಗತಿಸಿದರು. ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಶ್ರೀಕಲಾ ಕಾರಂತ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ರಶ್ಮಿತಾ ಸುರೇಶ್ ಮಾಣಿ ವಂದಿಸಿದರು.


ಉದ್ಘಾಟನಾ ಕಾರ್ಯಕ್ರಮದ ಬಳಿಕ ಬೆಳ್ಳಿಪ್ಪಾಡಿ ಹಿ.ಪ್ರಾ. ಶಾಲಾ ಮುಖ್ಯಗುರು ಯಶೋದರವರು ‘ಸಾಹಿತ್ಯ ಮತ್ತು ಶಿಕ್ಷಣಕ್ಕೆ ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ಗ್ರಾಮದ ಕೊಡುಗೆಗಳು’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು. ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು. ನಂತರ ಬಾಲಕಥಾಗೋಷ್ಠಿ ಮತ್ತು ಬಾಲ ಕವಿಗೋಷ್ಠಿ ಜರಗಿತು. ಮಧ್ಯಾಹ್ನ ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಪರಾಹ್ನ ಸಾರ್ವಜನಿಕರಿಗಾಗಿ ಯುವ ಕವಿಗೋಷ್ಠಿ ನಡೆಯಿತು. ಸರಕಾರಿ ಪ್ರೌಢಶಾಲೆ ಶಾಂತಿನಗರ, ಹಿ.ಪ್ರಾ ಶಾಲೆ ಕೋಡಿಂಬಾಡಿ ಹಾಗೂ ಉನ್ನತ ಹಿ.ಪ್ರಾ ಶಾಲೆ ಬೆಳ್ಳಿಪ್ಪಾಡಿಯ ವಿದ್ಯಾರ್ಥಿಗಳು ಬಾಲ ಕಥಾಗೋಷ್ಠಿ, ಬಾಲ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಿಯಾ ಸುಳ್ಯ, ನವ್ಯ ಪ್ರಸಾದ ನೆಲ್ಯಾಡಿ ಹಾಗೂ ರಶ್ಮಿತಾ ಸುರೇಶ್ ಜೋಗಿಬೆಟ್ಟು ಹಾಗೂ ಮಂಜುಶ್ರೀ ನಲ್ಕ ಗೋಷ್ಠಿಗಳ ನಿರೂಪಣೆ ಮಾಡಿದರು. ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ, ಉದ್ಯಮಿ ಜಾನ್ ಕೆನ್ಯೂಟ್ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ ಮತ್ತು ಶಿಕ್ಷಕ ವೃಂದದವರು ಸಹಕರಿಸಿದರು


ಸನ್ಮಾನ
ನಾಟಕ ರಚನೆಗಾರ, ನಿರ್ದೇಶಕ, ಕಲಾವಿದ ಎಚ್. ವಿಶ್ವನಾಥ ಬೆಳ್ಳಿಪ್ಪಾಡಿ, ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರರೂ ಆಗಿರುವ ಬೆಳ್ತಂಗಡಿ ಸುದ್ದಿ ಬಿಡುಗಡೆಯ ನಿಯೋಜಿತ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಸಾಹಿತ್ಯ, ಸಂಘಟನೆ, ಜಾನಪದ ಕ್ಷೇತ್ರದ ಸಾಧಕ ಎಂ. ನಿರಂಜನ ರೈ ಮಠಂತಬೆಟ್ಟು, ಯಕ್ಷಗಾನ, ರಂಗಕರ್ಮಿ ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಯುವ ಸಾಹಿತಿ ವೈಶಾಲಿ ಕೋಡಿಂಬಾಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಜನ ಸಾಮಾನ್ಯರ ಸಾಹಿತ್ಯ ಪರಿಷತ್-ಉಮೇಶ್ ನಾಯಕ್
ಅಧಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಯುವ ಜನತೆಯನ್ನು ಕನ್ನಡ ಸಾಹಿತ್ಯ ಲೋಕದತ್ತ ಬರ ಮಾಡಿಕೊಳ್ಳುವ ಜೊತೆಗೆ ಸಾಹಿತ್ಯ ಪರಿಷತ್ ಜನ ಸಾಮಾನ್ಯರ ಪರಿಷತ್ ಆಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂಬುದು ಗ್ರಾಮ ಸಾಹಿತ್ಯ ಸಂಭ್ರಮದ ಉzಶವಾಗಿದೆ ಎಂದರು. ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಕಾರ್ಯಕ್ರಮವಾಗಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಪ್ರತಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಸಣ್ಣ ಸ್ವರೂಪದ ಕಾರ್ಯಕ್ರಮವಾಗಿದ್ದರೂ ಈಗ ವೈಭವದಿಂದ ನಡೆಯುತ್ತಿದೆ. ಈ ಕಾರ್ಯಕ್ರಮದ ಮೂಲಕ ಚದುರಿ ಹೋಗಿದ್ದ ಎಲ್ಲಾ ಬಳಗಗಳನ್ನು ಒಗ್ಗೂಡಿಸುವ ಕೆಲಸದ ಜೊತೆಗೆ ಮಕ್ಕಳಿಗೂ ವೇದಿಕೆ ನೀಡಲಾಗುತ್ತಿದೆ ಎಂದ ಅವರು ಕನ್ನಡ ಸಾಹಿತ್ಯಕ್ಕೆ ಈಗ ರಾಜಾಶ್ರಯವಿಲ್ಲ. ಇಲ್ಲಿ ಗ್ರಾಮ ಪಂಚಾಯತ್ ಹಾಗೂ ಮಹಾಪೋಷಕರಾಗಿರುವ ಮಿತ್ರಂಪಾಡಿ ಜಯರಾಮ ರೈಯವರು ಸಹಕಾರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.

ರಾಜೇಂದ್ರ ಆರಿಗರಿಗೆ ಮನೆಯಲ್ಲಿ ಸನ್ಮಾನ
ನಾಟಕ, ಕೃತಿ, ಕವನ ರಚನೆ, ಪುಸ್ತಕ ಬರೆಯುವಿಕೆ, ಕೋಡಿಂಬಾಡಿ ಗ್ರಾಮದ ಮಾಹಿತಿಯುಳ್ಳ ಪುಸ್ತಕ ರಚನೆ ಸೇರಿದಂತೆ ವಿವಿಧ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮುಗುರು ತೆಲಿಕೆ ಖ್ಯಾತಿಯ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ. ರಾಜೇಂದ್ರ ಆರಿಗ ನಿಡ್ಯ ಅವರನ್ನು ಅವರ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here