ತುಳು ಅಪ್ಪೆಕೂಟ ಉದ್ಘಾಟನೆ, ಸನ್ಮಾನ, ಪಂಚಮಿನದ ಕಾರ್ಯಕ್ರಮ

0

ಪುತ್ತೂರು:ತುಳು ನಾವೆಲ್ಲ ಮಾತನಾಡುವ ಭಾಷೆ. ದ.ಕ ಜಿಲ್ಲೆಯಲ್ಲಿ ತುಳು ಮಾತನಾಡುವವರೇ ಅಧಿಕ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡಿಸಿಯೇ ಸಿದ್ದ. ಇದರಲ್ಲಿ ಎರಡು ಮಾತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ತುಳು ಅಪ್ಪೆ ಕೂಟ ಪುತ್ತೂರು ಇದರ ವತಿಯಿಂದ ಆ.26ರಂದು ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಉದಿಪನ, ತಮ್ಮನ, ಬಲ್ಮನ, ಪಂಚ ಮಿನದನ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಅಮೇರಿಕಾ ಯುನಿವರ್ಸಿಟಿಯಲ್ಲಿ ತುಳುವಿನಲ್ಲಿ ಅರ್ಜಿ ಹಾಕಲು ಅವಕಾಶವಿದೆ. ಪಶ್ಚಿಮ ಬಂಗಾಲದಲ್ಲಿ 14 ಹೆಚ್ಚುವರಿ ಭಾಷೆಗಳಿವೆ. ಕೇರಳದಲ್ಲಿ 12 ಹೆಚ್ಚುವರಿ ಭಾಷೆಗಳಿವೆ. ದ.ಕ ದವರು ತುಳುವಿನಲ್ಲಿ ಮಾತನಾಡುವವರು. ಆದರೆ ಕೇಳುವವರು ಹಿಂದೆ. ಈ ಬಾರಿ ಕೇಳುವ ಕೆಲಸವಾಗಿದೆ. ಅದನ್ನು ಹೋರಾಟದ ಮೂಲಕ ತುಳುವರು ಪಡೆದುಕೊಳ್ಳುವ ಕೆಲಸ ಮಾಡಿದರೆ ಖಂಡಿತಾ 6 ತಿಂಗಳಲ್ಲಿ ಅಧಿಕೃತ ಭಾಷೆಯಾಗಿ ಬರಲಿದೆ. ಇದಕ್ಕೆ 5 ಇಲಾಖೆಗಳಿಂದ ಎನ್‌ಒಸಿ ಬರಬೇಕಾಗಿದ್ದು 1 ಇಲಾಖೆಯಿಂದ ಈಗಾಗಲೇ ಬಂದಿದೆ. ತುಳು ಅಕಾಡೆಮಿಯ ಅಧಕ್ಷರಾದವರು ಉಳಿದ 4 ಇಲಾಖೆಗಳಿಂದ ಎನ್‌ಒಸಿ ತರುವ ಕೆಲಸ ಮಾಡಬೇಕು. ಇಲ್ಲಿಗೆ ಸೀಮಿತವಾಗಿದ್ದ ತುಳುವನ್ನು ಉಳಿಸುವ ಹೋರಾಟವನ್ನು ಈ ಭಾರಿ ವಿಧಾನ ಸೌಧದಲ್ಲಿ ವಿಚಾರ ಮಂಡಿಸಲಾಗಿದೆ ಎಂದ ಅವರು ತುಳುವಿನ ಆಚಾರ, ವಿಚಾರಗಳನ್ನು ರಾಜ್ಯ, ದೇಶಕ್ಕೆ ತಿಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗಿದೆ. ಇದರ ಮೂಲಕ ಬೆಂಗಳೂರಿನಲ್ಲಿ ತುಳು ಭವನಕ್ಕೆ ನಿವೇಶನ ಮಂಜೂರಾಗಿ, ಅಲ್ಲಿ ತುಳು ಭವನ ನಿರ್ಮಾಣವಾಗಬೇಕು. ಹೀಗಾಗಿ 125 ಜೋಡಿ ಕೋಣಗಳ ಕಂಬಳವನ್ನು ವಿಶೇಷ ಶೈಲಿಯಲ್ಲಿ ಮಾಡಲಾಗುತ್ತಿದ್ದು ಇದಕ್ಕೆ ಪ್ರೋತ್ಸಾಹಿಸಿ, ಕಾಳೆಲೆಯುವ ಕೆಲಸ ಮಾಡುವುದು ಬೇಡ ಎಂದು ಅಶೋಕ್ ರೈಯವರು ಹೇಳಿದರು.


ದೇವಸ್ಥಾನಕ್ಕೆ ರೂ.5.6ಕೋಟಿ ಅನುದಾನ:
ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ರೂ.5.6ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಮಾತನಾಡಿ, ಸಂಸ್ಕೃತಿಯ ಮೂಲ ಸಂಸ್ಕಾರ, ಅಂತರ್ಯದ ಪ್ರಜ್ಞೆ ನಮ್ಮಲ್ಲಿದ್ದರೆ ಸಂಸ್ಕಾರ ಬೆಳೆಯಲು ಸಾಧ್ಯ. ತುಳು ಭಾಷೆಯು ಕ್ರಿ.ಶ ಎರಡನೇ ಶತಮಾನದಲ್ಲಿಯೇ ಗ್ರೀಕ್ ರಾಜ್ಯದಲ್ಲಿತ್ತು. ನಂತರ ರಾಜ ಮನೆತನದ ಆಳ್ವಿಕೆಯ ಕನ್ನಡದಿಂದಾಗಿ ಆಡಳಿತ ಭಾಷೆಯಿಂದ ತುಳು ಕೆಳಕ್ಕೆ ತಲ್ಲಲ್ಪಟ್ಟಿದೆ. ಈಗ ಸಾಕಷ್ಟು ಜಾಗೃತಿಯಾಗಿದೆ. ತುಳು ಭಾಷೆಯು ಎರಡನೇ ಅಧಿಕೃತ ಭಾಷೆಯಾಗಿ ಬರಬೇಕು. ಎಂಟನೇ ಪರಿಚ್ಷೇದಕ್ಕೆ ಸೇರ್ಪಡೆಯಾಗಲಿ ಎಂದರು. ಮಹಿಳೆಯರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ಧರ್ಮ, ಸಂಸ್ಕೃತಿಯ ಮೂಲ ಮಹಿಳೆ. ಮಹಿಳೆಯಲ್ಲಿ ಮಹಾ ಶಕ್ತಿ ದೈವ ಶಕ್ತಿ, ನೈತಿಕತೆ ಪ್ರಾಮುಖ್ಯವಾಗಿರಬೇಕು. ತುಳು ಮಹಿಳಾ ಕೂಟಗಳು ಬೇರೆಲ್ಲಿಯೂ ಇಲ್ಲ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಉದ್ಘಾಟನೆಗೊಂಡಿದೆ ಎಂದು ಅವರು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕಲಿಯುಗದಲ್ಲಿ ಸಂಘ ಶಕ್ತಿಯೇ ಪ್ರಾಮುಖ್ಯವಾಗಿದೆ. ತುಳು ಕೂಟಕ್ಕೆ ಪೂರಕವಾಗಿ ಇದೀಗ ಮಹಿಳಾ ಕೂಟವು ಪ್ರಾರಂಭಗೊಂಡಿದೆ. ಇದು ಹತ್ತೂರಿನಲ್ಲಿ ಹೆಸರು ಪಡೆಯುವಂತಾಗಲಿ ಎಂದರು.


ಸಂಪ್ಯ ಅಕ್ಷಯ ಕಾಲೇಜಿನ ಚೆಯರ್ ಮೆನ್ ಜಯಂತ ನಡುಬೈಲು ಮಾತನಾಡಿ, ತುಳು ಭಾಷೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಅಪ್ಪೆ ಕೂಟ ಸಹಕಾರಿಯಾಗಲಿದೆ. ತಾಯಂದಿರು ಮಕ್ಕಳಿಗೆ ತುಳು ಭಾಷೆ ಕಲಿಸುವ ಕೆಲಸವಾಗಬೇಕು. ಮಾತೃ ಭಾಷೆ ಉಳಿಸಿಕೊಂಡು ಇತರ ಭಾಷೆ ಕಲಿಸುವ ಎಂದರು.


ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ವಿಜಯಲಕ್ಷ್ಮಿ ಪ್ರಸಾದ್ ರೈ ಮಾತನಾಡಿ, ತುಳುನಾಡಿನ ಆಚರಣೆಗಳ ಹಿಂದೆ ವೈಜ್ಞಾನಿಕ ಹಿನ್ನೆಲೆಯಿದ್ದು ಅದು ಮೂಡನಂಬಿಕೆಗಳಲ್ಲ. ಅದು ಮೂಲ ನಂಬಿಕೆಯಾಗಿದೆ. ನಮ್ಮ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳ ವಸ್ತು ಸ್ಥಿತಿ ತಿಳಿಸುವ ಕಾರ್ಯವಾಗಬೇಕು ಎಂದರು.


ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ದೇವರ ಗುಣ, ಗಾನಗಳು ತುಳು ಪಾಡ್ದನಗಳಲ್ಲಿದೆ. ಇಂತಹ ತುಳುಪಾಡ್ದನಗಳಿಂದಾಗಿ ತುಳು ಭಾಷೆ ಜೀವಂತಿಕೆಯಾಗಿದೆ.ಗಿನ್ನಿಸ್ ದಾಖಲೆಯಾಗಿ ಉಳಿಯಲಿದೆ ಎಂದರು.
ತುಳು ಕೂಟದ ಅಧ್ಯಕ್ಷ ಫ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಮಾತನಾಡಿ, 1973ರಲ್ಲಿ ಪ್ರಾರಂಭಗೊಂಡಿರುವ ಪುತ್ತೂರಿನ ತುಳು ಕೂಟ ಈ ವರ್ಷ ಸುವರ್ಣ ಸಂಭ್ರಮಾಚರಣೆಯ ಸಂಭ್ರಮದಲ್ಲಿದೆ. ಪ್ರತಿ ತಿಂಗಳು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಮುಂದೆ ಜತೆಯಾಗಿ ಕಾರ್ಯಕ್ರಮ ಆಯೋಜನೆ ಮಾಡಬಹುದು ಎಂದರು.


ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಮಾತನಾಡಿ, ತುಳು ಭಾಷೆ ಬೆಳೆಯಲು ತುಳು ಪತ್ರಿಕೆಗಳು ಸಹಕಾರಿಯಾಗಿದೆ. ಆದರೆ ಇಲ್ಲಿ ಎರಡೇ ತುಳು ಪತ್ರಿಕೆಯಿರುವುದು. ತುಳು ಪತ್ರಿಕೆಗಳು, ಶಿಕ್ಷಣಗಳು ಬೆಳೆಯಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ ಭಂಡಾರಿ ಮಾತನಾಡಿ, ತುಳು ಭಾಷೆಯು ಎಲ್ಲರನ್ನು ಪ್ರೀತಿಯಿಂದ ಒಟ್ಟು ಸೇರಿಸುವ ಭಾಷೆಯಾಗಿದೆ. ತುಳು ಕೂಟವು 1969ರಲ್ಲಿ ಪ್ರಾರಂಭಗೊಂಡು 46 ವಿವಿದ ಕೂಟಗಳು ಕೆಲಸ ಮಾಡುತ್ತಿದೆ. ಅದರಲ್ಲಿ ಪುತ್ತೂರಿನಲ್ಲಿ ಪ್ರಾರಂಭ ಗೊಂಡ ಮಹಿಳಾ ಕೂಟವು ಒಂದು. ಇದು ಪುತ್ತೂರಿಗೆ ಸೀಮಿತವಲ್ಲ. ಜಿಲ್ಲಾ ಮಟ್ಟದಲ್ಲಿ ಪ್ರಾರಂಭವಾಗಬೇಕು ಎಂದರು.


ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ತುಳು ಕೂಟದ ಐವತ್ತನೇ ಸಂಭ್ರಾಮಚರಣೆಯಲ್ಲಿ ಅಪ್ಪೆ ಕೂಟ ಉದ್ಘಾಟನೆಗೊಂಡಿದೆ. ಇದು ತುಳು ಕೂಟಕ್ಕೆ ಸಾಥ್ ನೀಡಲಿದೆ. ತುಳು ಸಂಸ್ಕೃತಿಯ ಉಳಿಸುವ ಕಾರ್ಯವಾಗಬೇಕು. ತುಳು ಉಳಿಸಲು ಅಳಿಲ ಸೇವೆ ಸಲ್ಲಿಸುವಂತಾಗಲಿ ಎಂದರು.


ಸನ್ಮಾನ
ನಾಟಿ ವೈದ್ಯ, ಸಾಹಿತ್ಯ ಕ್ಷೇತ್ರದಲ್ಲಿ ಲಕ್ಷ್ಮೀ ಬಳ್ಳಕ್ಕುರಾಯ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಕಲಾವಿದೆ ನಯನಾ ವಿ ರೈ, ಸಂಘಟಕಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರೇಮಲತಾ ರಾವ್, ಸಂಗೀತ, ಭರತನಾಟ್ಯ ತುಳು ಲಿಪಿಯಲ್ಲಿ ಭಗವದ್ಗೀತೆ ಬರೆದ ಅಪರ್ಣಾ ಕೊಡಂಕಿರಿ, ಕೃಷಿ, ಹೈನುಗಾರಿಕೆ ಯಲ್ಲಿ ಪ್ರೇಮಲತಾ ಮಾಧವ ಬಂಗೇರರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಶಾಂತಾ ಕುಂಟಿನಿ ಪ್ರಾರ್ಥಿಸಿದರು. ತುಳು ಅಪ್ಪೆ ಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿದರು. ಪ್ರೇಮಲತಾ ರಾವ್, ವಸಂತ ಲಕ್ಷ್ಮೀ, ಡಾ.ಶೋಭಿತಾ ಸತೀಶ್, ಡಾ.ಕವಿತಾ ಅಡೂರು, ಪುಪ್ಪ ಅರೆಪ್ಪಾಡಿ, ಶಾರದಾ ಕೇಶವ್ ಅತಿಥಿಗಳಿಗೆ ಹೂ, ಶಾಲು ನೀಡಿ ಸ್ವಾಗತಿಸಿದರು. ವೀಣಾ ತಂತ್ರಿ, ಸವಿತಾ ಮದಕ, ಭಾರತಿ ವಸಂತ, ಮಲ್ಲಿಕಾ ಜೆ.ರೈ ಸನ್ಮಾನಿತರ ಪರಿಚಯ ಮಾಡಿದರು. ವಿದ್ಯಾಶ್ರೀ ಎಸ್ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ನಡೆದ ಕವಿ ಕೂಟದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಅಪೂರ್ವ ಕಾರಂತ್, ಸಂಧ್ಯಾ ರಾವ್ ಪುತ್ತೂರು, ದೇವಕಿ ಬನ್ನೂರು, ರೋಹಿಣಿ ರಾಘವ ಆಚಾರ್ಯ, ಶಾಂತಾ ಪುತ್ತೂರು, ಪರಮೇಶ್ವರಿ ಪ್ರಸಾದ್, ಸುಪ್ರಿತಾ ಚರಣೆ ಪಾಲಪ್ಪೆ, ರಮ್ಯಶ್ರೀ ಸುನಿಲ್ ಸರ್ವೆ ಭಾಗವಹಿಸಿದ್ದರು. ನಂತರ ನಡೆದ ದ್ರೌಪದಿ ಸ್ವಯಂವರ ವಾಚನ, ವ್ಯಾಖ್ಯಾನದಲ್ಲಿ ಡಾ.ಶೋಭಿತಾ ಸತೀಶ್ ವಾಚನ ಮಾಡಿದರು. ಕವಿತಾ ಅಡೂರು ವ್ಯಾಕ್ಯಾನ ನೀಡಿದರು. ನಂತರ ಮಹಿಳೆಯಿಂದ ಭಾರತೀಯ ಸಾಂಪ್ರದಾಯಿ ಶೈಲಿಯಲ್ಲಿ ಸೀರೆಯಟ್ಟ ಮಹಿಳೆಯರ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here