ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ಆದರ್ಶನಗರ ಜನತಾ ಕಾಲನಿಗೆ ಆ.30ರಂದು ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈಯವರು ಅಲ್ಲಿನವರ ಸಮಸ್ಯೆಗಳನ್ನು ಆಲಿಸಿದರು.
ಎತ್ತರದ ಗುಡ್ಡದ ಮೇಲೆ ಈ ಕಾಲನಿಯಿದ್ದು, ಇಲ್ಲಿ ಹಲವು ಮನೆಗಳಿವೆ. ಗುಡ್ಡದಲ್ಲೇ ನಿವೇಶನ ಹಂಚಿದ್ದರಿಂದ ಅಲ್ಲಲ್ಲಿ ಗುಡ್ಡವನ್ನು ಸಮತಟ್ಟುಗೊಳಿಸಿ ನಿವೇಶನ ಮಾಡಿಕೊಂಡು ಅಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ಇಲ್ಲಿ ಮಳೆಗಾಲದಲ್ಲಿ ಧರೆ ಕುಸಿತ ಸಾಮಾನ್ಯವಾಗಿದೆ. ಶಾಸಕರು ಇಲ್ಲಿಗೆ ಭೇಟಿ ನೀಡಿದ ಸಂದರ್ಭ ಈ ಕಾಲನಿಗೆ ಹಾಗೂ ಅಲ್ಲಿರುವ ಅಂಗನವಾಡಿಗೆ ತೆರಳಲು ಕೂಡಾ ಸರಿಯಾದ ದಾರಿ ಇಲ್ಲದಂತಹ ಪರಿಸ್ಥಿತಿಯನ್ನು ಶಾಸಕರಲ್ಲಿ ಕಾಲನಿಯವರು ವಿವರಿಸಿ, ನಮಗೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಬ್ಲಾಕ್ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ನ ಹಿರಿಯ ಮುಖಂಡ ಡಾ. ರಘು ಬೆಳ್ಳಿಪ್ಪಾಡಿ, ೩೪ ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಕಾಂಗ್ರೆಸ್ ಕಾರ್ಯಕರ್ತರಾದ ಅಬ್ದುಲ್ ಖಾದರ್, ಇಸ್ಹಾಕ್, ಹಮೀದ್, ಯಹ್ಯಾ, ಪ್ರಕಾಶ್ ಬಶೀರ್, ಅಝೀಝ್, ತಾಹಿರಾ, ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.