





ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾಗಿದ್ದ—ಸುಮುಖ ಎಂ. ಹಾಗೂ ಶೋಷನ್ ಕುಮಾರ್ ಎನ್. ತಮ್ಮ ಎಂ.ಎಸ್ಸಿ ಭೌತಶಾಸ್ತ್ರದ ವಿದ್ಯಾರ್ಥಿ ಪ್ರಾಜೆಕ್ಟ್ ಅನ್ನು ಪ್ರತಿಷ್ಠಿತ ಅಂತರರಾಷ್ಟ್ರೀಯ ನಿಯತಕಾಲಿಕೆ ಮೆಟೀರಿಯಲ್ ಸೈನ್ಸ್ ಇನ್ ಸೆಮಿಕಂಡಕ್ಟರ್ ಪ್ರೊಸೆಸ್ಸಿಂಗ್ ನಲ್ಲಿ ಸಂಶೋಧನಾ ಪ್ರಬಂಧವಾಗಿ ಪ್ರಕಟಿಸಿದ್ದಾರೆ.


ಫ್ಲೆಕ್ಸಿಬಲ್ ಪಿವಿಎ / ಸಿಲ್ವರ್ ಸಲ್ಫೈಡ್ ನಾನೋ ಹೈಬ್ರಿಡ್ ಫಿಲ್ಮ್ಸ್ ಆಸ್ ಡ್ಯೂಯಲ್ ಫಂಕ್ಷನಲ್ ಮೆಟೀರಿಯಲ್ಸ್ ಫಾರ್ ಯುವಿ ಶೀಲ್ಡಿಂಗ್ ಅಂಡ್ ನಾನ್ ಲೀನಿಯರ್ ಆಪ್ಟಿಕಲ್ ಅಪ್ಪ್ಲಿಕೇಷನ್ಸ್ ಎಂಬ ಶೀರ್ಷಿಕೆಯ ಈ ಪ್ರಬಂಧವು 4.6 ಇಂಪ್ಯಾಕ್ಟ್ ಫ್ಯಾಕ್ಟರ್ ಮತ್ತು Q1 ರ್ಯಾಂಕಿಂಗ್ ಹೊಂದಿರುವ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.





ನೇರಳಾತೀತ ಕಿರಣಗಳು ಮತ್ತು ಅತಿ ತೀವ್ರ ಲೇಸರ್ ಕಿರಣಗಳನ್ನು ನಿರ್ಬಂಧಿಸುವಂತಹ ವಸ್ತುಗಳ ಕುರಿತು ಈ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು. ಕಾಲೇಜಿನ ಎಂ.ಎಸ್ಸಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಡಾ. ಶಿಲ್ಪಾ ಎಂ.ಪಿ. ಅವರ ಮಾರ್ಗದರ್ಶನದಲ್ಲಿ, ಡಾ. ಎ.ಪಿ. ರಾಧಾಕೃಷ್ಣ ಅವರ ವಿಜಿಎಸ್ಟಿ ಪ್ರಾಯೋಜಿತ ಘನಸ್ಥಿತಿ ಸಂಶೋಧನಾಲಯದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಂಟನಿ ಪ್ರಕಾಶ್ ಮೊಂತೇರೊ ಹರ್ಷ ವ್ಯಕ್ತಪಡಿಸಿ, ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸಂಶೋಧನಾ ನೈಪುಣ್ಯತೆ ಹಾಗೂ ಶ್ರಮವನ್ನು ಶ್ಲಾಘಿಸಿದ್ದಾರೆ.








