ಪುತ್ತೂರು: ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ವರ್ಸಸ್ ಕೇರಳ ಸ್ಟೇಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಲ್ಯಾಂಡ್‌ಮಾರ್ಕ್ ತೀರ್ಪಿನ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ನಡೆಯುವ ವಿಚಾರ ಸಂಕಿರಣದ ಉದ್ಘಾಟನೆಯು ಸೆ.2ರಂದು ಬೆಳಗ್ಗೆ 9.30ಕ್ಕೆ ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಲಿದೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ| ಸರಸ ವೆಂಕಟನಾರಾಯಣ ಭಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇರಳ ಹೈಕೋರ್ಟ್ ನ್ಯಾಯಾಧೀಶ ನ್ಯಾ| ಎನ್. ನಗರೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಸ್ವರ್ಣಜಯಂತಿ ಮಹೋತ್ಸವ ಸಮಿತಿಯ ಅಧ್ಯಕ್ಷ ಎಮ್. ನಾರಾಯಣ ಭಟ್ ತಿಳಿಸಿದ್ದಾರೆ.
ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ಗಂಟೆ 11:15 ಗಂಟೆಗೆ ತೀರ್ಪಿನ ಪ್ರಭಾವ ಮತ್ತು ಸಂವಿಧಾನ ಸಂಬಂಧಿ ವಿಷಯದಲ್ಲಿ ವಿಚಾರ ಗೋಷ್ಠಿ ನಡೆಯಲಿದ್ದು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಮತ್ತು ಕೇರಳ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಅಸಫ್ ಆಲಿ ವಿಚಾರ ಮಂಡನೆ ಮಾಡಲಿದ್ದಾರೆ. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಅವರು ದಿಗ್ದರ್ಶನ ಮಾಡಲಿದ್ದಾರೆ. ದ.ಕ ಜಿಲ್ಲೆ, ಕಾಸರಗೋಡು ಜಿಲ್ಲೆ, ಉಡುಪಿ ಜಿಲ್ಲೆಗಳ ವಿವಿಧ ವಕೀಲರ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾನೂನು ಮಹಾ ವಿದ್ಯಾಲಯಗಳ ಅಧ್ಯಾಪಕರು. ವಿದ್ಯಾರ್ಥಿಗಳು, ಕಾನೂನು ತಜ್ಞರು ಮತ್ತು ಸ್ಥಳೀಯ ಆಹ್ವಾನಿತರು ಭಾಗವಹಿಸಲಿದ್ದಾರೆ.
1973ರಲ್ಲಿ 13 ನ್ಯಾಯಾಧೀಶರನ್ನು ಹೊಂದಿದ ಸಂವಿಧಾನ ಪೀಠದ ಈ ಮಹತ್ತರ ತೀರ್ಪು ಎಡನೀರು ಮಹಾಧೀಶರ ಸತತ ಪ್ರಯತ್ನ ಫಲವಾಗಿದ್ದು ಈ ತೀರ್ಪನ್ನು ಭಾರತದ 2ನೇ ಸಂವಿಧಾನ ಎಂದು ಪ್ರಪಂಚದಾದ್ಯಂತ ವಿಶ್ಲೇಷಿಸಲಾಗಿದ್ದು, ಎಡನೀರು ಸಂಸ್ಥಾನಕ್ಕೆ ಹೆಮ್ಮೆಯ ವಿಷಯವಾಗಿರುತ್ತದೆ .ಪತ್ರಿಕಾಗೋಷ್ಠಿಯಲ್ಲಿ ಸ್ವರ್ಣಜಯಂತಿ ಮಹೋತ್ಸವ ಸಮಿತಿ ಉಪಾಧ್ಯಕ್ಷ ಪೃಥ್ವಿರಾಜ್ ರೈ, ಮಹಾಕಾರ್‍ಯದರ್ಶಿ ಪುತ್ತೂರಿನ ನ್ಯಾಯವಾದಿ ಕೆ.ಆರ್.ಆಚಾರ್ಯ ಮತ್ತು ಕಾಸರಗೋಡು, ವಕೀಲರ ಸಂಘದ ಕಾರ್‍ಯದರ್ಶಿ ಪ್ರದೀಪ್ ರಾವ್ ಉಪಸ್ಥಿತರಿದ್ದರು.