ಪುತ್ತೂರು: ಇಲ್ಲಿನ ಟೌನ್ ಹಾಲ್ನಲ್ಲಿ ನಡೆಯುತ್ತಿರುವ ಎಸ್ವೈಎಸ್ ಅಲ್ ಅರ್ಖಮಿಯ್ಯ ಕಾರ್ಯಕ್ರಮಕ್ಕೆ ಮಧ್ಯಾಹ್ನದ ವೇಳೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ನಾವು ನಮ್ಮ ಧರ್ಮವನ್ನು ಆಚರಿಸಿಕೊಂಡು ಇನ್ನೊಂದು ಧರ್ಮವನ್ನು ಗೌರವಿಸಿದಾಗ ಸಮಾಜದಲ್ಲಿ ಅನ್ಯೋನ್ಯತೆ ನೆಲೆ ನಿಲ್ಲುತ್ತದೆ, ರಕ್ತಕ್ಕೆ ಇಲ್ಲದ ಜಾತಿ ಧರ್ಮ ಮನುಷ್ಯರಾದ ನಮಗೆ ಯಾಕೆ, ಜಾತಿ ಧರ್ಮವನ್ನು ನಾವೆಲ್ಲರೂ ಬದಿಗಿಟ್ಟು ನಾವೆಲ್ಲಾ ಒಂದೇ ಎಂಬ ಭಾವನೆಯಲ್ಲಿ ಜೀವಿಸಬೇಕು, ಸೌಹಾರ್ದತೆಯಿಂದ ಸಮಾಜದಲ್ಲಿ ನೆಮ್ಮದಿ ಸಾಧ್ಯ, ನಮ್ಮ ದೇಶ ವಿಶ್ವಗುರು ಆಗಬೇಕಾದರೆ ಎಲ್ಲ ಧರ್ಮಗಳ ಧರ್ಮಗುರುಗಳು ಒಂದೇ ಕಡೆ ಸೇರುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಎಸ್ವೈಎಸ್ ಮತ್ತು ಎಸ್ಸೆಸ್ಸೆಫ್ನವರು ಸಮಾಜಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಶ್ಲಾಘನೀಯ, ನಿಮ್ಮ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಯಾವತ್ತೂ ಇದೆ ಎಂದ ಅಶೋಕ್ ರೈ ಅವರು ಎಸ್ವೈಎಸ್ ಹಮ್ಮಿಕೊಂಡ ಶಿಸ್ತುಬದ್ದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶಾಸಕರನ್ನು ಎಸ್ವೈಎಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.