ಸೆ.6: ಪುತ್ತೂರಿನಲ್ಲಿ `ಶ್ರೀಕೃಷ್ಣ ಲೋಕ’ದ ಬೆಳ್ಳಿ ಹಬ್ಬದ ಸಂಭ್ರಮ

0

ಪುತ್ತೂರು:ಸನಾತನವಾಗಿ ಒಗ್ಗೂಡಿಸುವ ಜೊತೆಗೆ ಮಕ್ಕಳಲ್ಲಿಯೂ ಶ್ರೀಕೃಷ್ಣ ಭಕ್ತಿ ಹಾಗೂ ಆದರ್ಶಗಳನ್ನು ತಿಳಿಸುವ ನಿಟ್ಟಿನಲ್ಲಿ ವಿವೇಕಾನಂದ ಶಿಶು ಮಂದಿರದಲ್ಲಿ ಪ್ರಾರಂಭಗೊಂಡಿರುವ ಶ್ರೀಕೃಷ್ಣಲೋಕ ಕಾರ್ಯಕ್ರಮದ ಬೆಳ್ಳಿ ಹಬ್ಬದ ಸಂಭ್ರಮವು ಸೆ.6ರಂದು ಪುತ್ತೂರಿನಲ್ಲಿ ಮೇಲೈಸಲಿದೆ ಎಂದು ಶ್ರೀಕೃಷ್ಣಲೋಕ ಸಮಿತಿ ಅಧ್ಯಕ್ಷ ದಾಮೋದರ ಪಾಟಾಳಿ ಹೇಳಿದರು.


ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಶುಮಂದಿರದಲ್ಲಿ ಆರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಮೂಲಕ ಬಾಲಕೃಷ್ಣ ತೊಟ್ಟಿಲ ಸಂಭ್ರಮ, ಮಗುವಿನ ತಾಯಿಗೆ ಬಾಗಿನಸಮರ್ಪಣೆ ಹಾಗೂ ಮಡಿಲು ತುಂಬಿಸುವ ಕಾರ್ಯಕ್ರಮ ನಡೆಯಲಿದೆ. 10 ಗಂಟೆಗೆ ಶಿಶು ಮಂದಿರ ಆವರಣದಿಂದ ವೇಷಧಾರಿ ಶ್ರೀಕೃಷ್ಣ ಮತ್ತು ರಾಧೆಯರ ಶೋಭಾಯಾತ್ರೆ ನಡೆಯಲಿದೆ. ಶಿಶು ಮಂದಿರದ ಆವರಣದಿಂದ ಹೊರಡುವ ಮೆರವಣಿಗೆಗೆ ನ್ಯಾಯಾಲಯದ ಮುಂಭಾಗದಲ್ಲಿ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಗುವುದು. ಬಳಿಕ ಮೆರವಣಿಗೆಯು ಕೋರ್ಟ್‌ರಸ್ತೆ, ಮುಖ್ಯರಸ್ತೆಯ ಮೂಲಕ ಪ್ರಧಾನ ಅಂಚೆಕಚೇರಿ ಬಳಿಯಿಮದಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಸಮಾಪನಗೊಳ್ಳಲಿದೆ. ಕಳೆದ ವರ್ಷದ ಕೃಷ್ಣಲೋಕದಲ್ಲಿ 1300ಮಂದಿ ಶ್ರೀಕೃಷ್ಣ ಹಾಗೂ ರಾಧೆಯರು ಪಾಲ್ಗೊಂಡಿದ್ದು ಈ ವರ್ಷ 2000 ಸೇರುವ ನಿರೀಕ್ಷೆಯಿದೆ. ಭಾಗವಹಿಸಿದ ಪ್ರತಿಯೊಬ್ಬ ಮಕ್ಕಳಿಗೂ ಸ್ಮರಣಿಕ ನೀಡಿ ಗೌರವಿಸಲಾಗುವುದು.


ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಕೆ ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಯುಎಸ್‌ಎ ಹ್ಯೂಸ್ಟನ್ ಶ್ರೀಕೃಷ್ಣ ಬೃಂದಾವನದ ಅರ್ಚಕರು, ವ್ಯವಸ್ಥಾಪಕರಾಗಿರುವ ರಘುರಾಮ ಭಟ್ ಮಣಿಕ್ಕರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ದೈವ ನರ್ತಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಆಚರಿಸಲಾಗುತ್ತಿದ್ದು ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಬೆಳ್ಳಿ ಹಬ್ಬದ ಸಂಭ್ರಮವನ್ನು ದಿನಪೂರ್ತಿ ಆಚರಿಸಲಾಗುತ್ತಿದ್ದು ಅಪರಾಹ್ನ ಅನ್ನಸಂತರ್ಪಣೆಯ ಬಳಿಕ ಪುತ್ತೂರು ವೈಷ್ಣವಿ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯ ವೃಂದದವರಿಂದ ಭರತನಾಟ್ಯ ಹಾಗೂ ಸುಪ್ರಸಿದ್ದ ಕಲಾವಿದರ ಕೂಡುವಿಕೆಯೊಂದ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ. ಮಕ್ಕಳು, ಪೋಷಕರು, ಸಾರ್ವಜನಿಕರು ಸೇರಿದಂತೆ ಕಾರ್ಯಕ್ರಮದಲ್ಲಿ ಸುಮಾರು 6000 ಮಂದಿ ಸೇರುವ ನಿರೀಕ್ಷೆಯಿದೆ ಎಂದರು.


ರೂ.5ಲಕ್ಷದ ಅನ್ನದಾನ ನಿಧಿ:
ಶಿಶು ಮಂದಿರದಲ್ಲಿ ಈಗಾಗಲೇ ಸುಮಾರು 100ಮಕ್ಕಳಿದ್ದು ಅವರಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಇದಕ್ಕಾಗಿ ಮಕ್ಕಳ ಪೋಷಕರಿಂದ ಯಾವುದೇ ಶುಲ್ಕ ಸಂಗ್ರಹಿಸಲಾಗುವುದಿಲ್ಲ. ಹೀಗಾಗಿ ಕೃಷ್ಣಲೋಕ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ರೂ.5ಲಕ್ಷದ ಅನ್ನದಾನ ನಿಧಿಯನ್ನು ಸ್ಥಾಪಿಸಲಾಗಿದ್ದು ಇದಕ್ಕೆ ದಾನಿಗಳ ನೆರವು ಸಹಕಾರ ದೊರೆತಿದೆ. ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ಬಡ್ಡಿಯ ಹಣದಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡುವ ಯೋಜನೆ ಹಾಕಿಕೊಳ್ಳಲಾಗಿದ್ದು ಈ ಮೊತ್ತವನ್ನು ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಲಾಗುವುದು.


ಪ್ರಾರಂಭದ ತೊಟ್ಟಿಲ ಸಂಭ್ರಮ ಪಡೆದ ಡಾ.ಚಂದನ್ ಭಾಗಿ:
ಶಿಶು ಮಂದಿರದ ವತಿಯಿಂದ ಕಳೆದ 25 ವರ್ಷಗಳ ಹಿಂದೆ ಪ್ರಾರಂಭಗೊಂಡ ಶ್ರೀಕೃಷ್ಣಲೋಕ ಕಾರ್ಯಕ್ರಮದಲ್ಲಿ ಬಾಲಕೃಷ್ಣನಾಗಿ ತೊಟ್ಟಿಲ ಸಂಭ್ರಮ ಪಡೆದಿರುವ ಡಾ.ಚಂದನ್ ಬೆಳ್ಳಿ ಹಬ್ಬ ಸಂಭ್ರಮದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಾಗವಹಿಸಲಿದ್ದಾರೆ.
ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್, ಕೃಷ್ಣಲೋಕ ಕಾರ್ಯಕ್ರಮದ ಗೌರವಾಧ್ಯಕ್ಷೆ ರಾಜಿ ಬಲರಾಮ ಆಚಾರ್ಯ, ಕಾರ್ಯದರ್ಶಿ ಸಂತೋಷ ಕುಮಾರ್ ರೈ, ಉಪಾಧ್ಯಕ್ಷ ಚಂದ್ರಶೇಖರ ಹಾಗೂ ಗೌರವ ಸಲಹೆಗಾರ ಉಪೇಂದ್ರ ಬಲ್ಯಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here