ಪುತ್ತೂರು: ಮರೀಲ್ ಇಎಸ್ಆರ್ ಪ್ರೆಸಿಡೆನ್ಸಿ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಬ್ಯಾಂಡ್ ನೊಂದಿಗೆ ಶಿಕ್ಷಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ತಾವೇ ಕೈಯಲ್ಲಿ ತಯಾರಿಸಿದ ವೆಲ್ಕಮ್ ಕಾರ್ಡನ್ನು ನೀಡಿ ಸ್ವಾಗತಿಸಲಾಯಿತು. ಸಭೆಯ ಮುಖ್ಯ ಅತಿಥಿಗಳಾಗಿ ಎಲ್ಲಾ ಶಿಕ್ಷಕರು ಹಾಗೂ ಪಿಟಿಎಂ ಗೌರವಾಧ್ಯಕ್ಷ ಹಮೀದ್ ಕೆ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಶಿಕ್ಷಕರ ಸೇವೆಯನ್ನು ಸ್ಮರಿಸುವ ಹಾಡು ಹಾಡಿ, ನೃತ್ಯ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಝಾಕೀರ್ ಹುಸೇನ್ ಮಾತನಾಡಿ, ಪ್ರತೀ ವ್ಯಕ್ತಿಯು ತನ್ನ ಜೀವನದಲ್ಲಿ ತಂದೆ – ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡುತ್ತಾನೆ. ಶಿಕ್ಷಕರನ್ನು ಗೌರವಿಸುವುದು ವಿದ್ಯಾರ್ಥಿಗಳಾದ ತಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಪಿಟಿಎಂ ಗೌರವಾಧ್ಯಕ್ಷ ಹಮೀದ್ ಕೆ ಎ ಮಾತನಾಡಿ ಗುರು ಬದುಕಿಗೆ ದಾರಿ, ಜೀವನಕ್ಕೆ ಜ್ಯೋತಿ ಎಂಬಂತೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವ ಮಹಾನ್ ಶಕ್ತಿ ಎಂದರೆ ಗುರುಗಳು. ಹೀಗಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿಗೆ ಒಳ್ಳೆಯ ಸ್ಥಾನವನ್ನು ನೀಡಬೇಕು ಇಂತಹ ಸ್ಥಾನದಲ್ಲಿರುವ ಶಿಕ್ಷಕರಿಗೆ ಮೀಸಲಾದ ದಿನವೇ ಸೆಪ್ಟೆಂಬರ್ 5 ಎಂದು ಹೇಳಿ ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ತಾಜುನ್ನಿಸಾ ಸಮಯೋಚಿತವಾಗಿ ಮಾತನಾಡಿ ಆಯೋಜಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯರು ಹಾಗೂ ಆಡಳಿತ ಮಂಡಳಿಯವರು ಶಿಕ್ಷಕರಿಗೆ ಅನೇಕ ಮನೋರಂಜನ ಆಟಗಳನ್ನು ಏರ್ಪಡಿಸಿದರು. ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಆಟಗಳಲ್ಲಿ ಪಾಲ್ಗೊಂಡರು. ನಂತರ ಪೋಷಕರು, ಹಲವು ಬಗೆಯ ತಿಂಡಿ ತಿನಿಸುಗಳನ್ನು, ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿಕೊಂಡು ತಂದು ಶಿಕ್ಷಕರಿಗೆ ಹಂಚಿದರು. ಕಾರ್ಯಕ್ರಮಗಳನ್ನು ಆಯೋಜಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಶಿಕ್ಷಕ ವೃಂದದವರು ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಾಲೆಗೆ ಕೊಡುಗೆ ನೀಡಿದರು. ಅಫ್ಶಿನ್ ಸ್ವಾಗತಿಸಿದರು. ಆಯಿಷತ್ ಸಲ್ವ ವಂದಿಸಿದರು. ವಿದ್ಯಾರ್ಥಿಗಳಾದ ಝಿಷನ್ ಇಬ್ರಾಹಿಂ ಎಸ್ ಕಾರ್ಯಕ್ರಮ ನಿರೂಪಿಸಿದರು.