ಪರ್ಪುಂಜದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಠಮಿ, ಕ್ರೀಡಾಪ್ರತಿಭೆಗಳಿಗೆ ಸನ್ಮಾನ

0

ಧರ್ಮ ಜಾಗೃತಿಯನ್ನು ಕಲಿಸಿದ ದೇವರು ಶ್ರೀಕೃಷ್ಣ ಪರಮಾತ್ಮ : ಸಂಜೀವ ಮಠಂದೂರು

ಪುತ್ತೂರು: ಶ್ರೀ ಕೃಷ್ಣನ ಜೀವನವೇ ಒಂದು ಧರ್ಮ ಗ್ರಂಥವಾಗಿದೆ. ಕೃಷ್ಣನಿಂದ ನಾವು ಕಲಿಯುವಂತಹುದು ಬಹಳಷ್ಟಿದೆ. ಧರ್ಮದ ಉಳಿವಿಗಾಗಿ ನಾವೆಲ್ಲರೂ ಒಂದು ಪಣತೊಡಬೇಕಾದ ಅಗತ್ಯತೆ ಇದೆ. ಧಾರ್ಮಿಕ ಆಚರಣೆಯ ಮೂಲಕ ನಮ್ಮ ದೇಶದ ಪರಂಪರೆ, ಧರ್ಮವನ್ನು ಉಳಿಸುವ ಅಗತ್ಯತೆ ಇದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ಅವರು ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಇದರ ಜಂಟಿ ಆಶ್ರಯದಲ್ಲಿ ಸೆ.6 ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ನಡೆದ 19 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಶ್ರೀಕೃಷ್ಣ ಎಂದರೆ ಒಂದು ಅದ್ಭುತ ಜ್ಞಾನ ಭಂಡಾರ ಆಗಿದೆ. ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ಓದುವ ಮೂಲಕ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ನಮ್ಮದು ಸನಾತನ ಧರ್ಮವಾಗಿದ್ದು ಇಲ್ಲಿ ಆಚರಣೆಯನ್ನು ಎಲ್ಲರೂ ಒಟ್ಟಾಗಿ ಸಂಭ್ರಮಿಸುವುದೇ ಧರ್ಮವಾಗಿದೆ ಎಂದರು. ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ಯುವಕ ಮಂಡಲ ಮತ್ತು ಮಹಿಳಾ ಮಂಡಲ ಸೇರಿಕೊಂಡು ಒಂದು ಉತ್ತಮ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗುವಲ್ಲಿ ನಮ್ಮೆಲ್ಲರ ಶ್ರಮ ಇರಲಿ ಎಂದು ಹೇಳಿ ಶುಭ ಹಾರೈಸಿದರು. ಗರಡಿಯ ಅರ್ಚಕ ಹರೀಶ್ ಶಾಂತಿ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನರವರು ಸಂದರ್ಭೋಚಿತವಾಗಿ ಮಾತನಾಡಿದರು.


ವೇದಿಕೆಯಲ್ಲಿ ಕುಂಬ್ರದ ಉದ್ಯಮಿ ಮೋಹನದಾಸ ರೈ ಕುಂಬ್ರ, ಯುವ ಉದ್ಯಮಿ ಗಣೇಶ್ ಕೋಡಿಬೈಲು, ಸ್ನೇಹ ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಬೇಬಿ ರೈ, ಯುವಕ ಮಂಡಲದ ಗೌರವ ಅಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಯುವಕ ಮಂಡಲದ ಅಧ್ಯಕ್ಷ ವಿಪಿನ್ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ರೈ, ಕಾರ್ಯದರ್ಶಿಗಳಾದ ನಿತಿನ್ ಗೌಡ ಮತ್ತು ಪವಿತ್ರ ಉಪಸ್ಥಿತರಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರುರವರನ್ನು ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜರವರು ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.


ಶ್ರೇಯಾ ರೈ ಮತ್ತು ರಕ್ಷಾ ಆರ್.ಪಿ ಪ್ರಾರ್ಥಿಸಿದರು. ಪ್ರಮೀಳಾ ನಾರಾಯಣ ಸುಳ್ಯ ಸ್ವಾಗತಿಸಿದರು. ಪ್ರಮೀಳಾ ರಾಧಾಕೃಷ್ಣ ವರದಿ ವಾಚಿಸಿದರು. ಪವಿತ್ರ, ಶ್ರೇಯಾ, ರಕ್ಷಾ ಸನ್ಮಾನ ಪತ್ರ ವಾಚಿಸಿದರು. ಸುರೇಶ್ ಪರ್ಪುಂಜ ವಂದಿಸಿದರು. ಸಂತೋಷ್ ರೈ ಕೈಕಾರ ಮತ್ತು ಪ್ರಮೀಳಾ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಸ್ನೇಹ ಯುವಕ, ಮಹಿಳಾ ಮಂಡಲದ ಪದಾಧಿಕಾರಿಗಳು ಸಹಕರಿಸಿದ್ದರು.


ವಿದ್ಯಾಸಾಧಕರಿಗೆ. ಕ್ರೀಡಾಪಟುಗಳಿಗೆ ಸನ್ಮಾನ
10 ನೇ ತರಗತಿ ಮತ್ತು ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ವಿದ್ಯಾಕ್ಷೇತ್ರದಲ್ಲಿ ವೀಕ್ಷಿತಾ ಪಿ.ಸಿ, ಗೌರವ್ ಪಿ.ಡಿ, ಶ್ರಾವ್ಯ ಪಿ.ಡಿ, ಸಂಜನಾ ಪಿ, ಕ್ರೀಡಾಕ್ಷೇತ್ರದಲ್ಲಿ ಅನ್ವಿತಾ ರೈ, ಅದ್ವಿತ್ ರೈ ಮತ್ತು ಪ್ರೀತಿಕಾರವರನ್ನು ಶಾಲು,ಸ್ಮರಣಿಕೆ,ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here