ಪುತ್ತೂರು: ಹಿಂದು ಯುವತಿಯನ್ನು ಕರೆದೊಯ್ದ ವಿಚಾರವಾಗಿ ಸುಳ್ಯ ತೊಡಿಕಾನದಲ್ಲಿ ಕಾರು ತಡೆದು ಹಲ್ಲೆ ನಡೆಸಿದ ಪ್ರರಕಣಕ್ಕೆ ಸಂಬಂಧಿಸಿ ಆರೋಪಿಗಳ ಪೈಕಿ ಇಬ್ಬರಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆ.12ರಂದು ಕೇರಳ ರಾಜ್ಯ ಮಲಪುರಂ ನಿವಾಸಿಯಾಗಿದ್ದು ಅರಂತೋಡು ಬಿಳಿಯಾರಿನ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೊಂದಿರುವ ಮೊಹಮ್ಮದ್ ಜಲೀಲ್(39ವ)ರವರು ಹಲ್ಲೆಗೊಳಗಾದವರು. ಅವರು ಕೇರಳದ ಸೌಮ್ಯ ಎಂಬವರಿಗೆ ವಿಶ್ರಾಂತಿ ಪಡೆಯಲು ಸುಳ್ಯದ ಲಾಡ್ಜ್ನಲ್ಲಿ ರೂಮ್ ಮಾಡಿಕೊಡಲೆಂದು ಸ್ಕೋರ್ಪಿಯೋ ಕಾರಿನಲ್ಲಿ ಬಂದು ಪುನಃ ಅರಂತೋಡಿಗೆ ಹಿಂದಿರುಗುವಾಗ ಸುಳ್ಯದ ತೊಡಿಕಾನದಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ಲತೀಶ್ ಗುಂಡ್ಯ, ವರ್ಷಿತ್, ಪುನಿತ್ ಮತ್ತಿತರರು ಮೊಹಮ್ಮದ್ ಜಲೀಲ್ ಅವರಿಗೆ ಹಲ್ಲೆ ನಡೆಸಿ ನಿನಗೆ ಹಿಂದೂ ಹುಡುಗಿ ಬೇಕಾ ಎಂದು ಪ್ರಶ್ನಿಸಿ, ಇನ್ನು ಮುಂದೆ ಹಿಂದೂ ಹುಡುಗಿಯ ಸುದ್ದಿಗೆ ಹೋದರೆ ನಿನ್ನನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿತ್ತು. ಮೊಹಮ್ಮದ್ ಜಲೀಲ್ ಅವರು ನೀಡಿದ ದೂರಿನಂತೆ ಸುಳ್ಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ವಿಚಾರಣೆ ನಡೆಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳ ಪೈಕಿ ಲತೀಶ್ ಗುಂಡ್ಯ ಮತ್ತು ವರ್ಷಿತ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಮಾದವ ಪೂಜಾರಿ, ರಾಕೇಶ್ ಬಲ್ನಾಡು ವಾದಿಸಿದರು.