ಪುತ್ತೂರು: ಸೌಜನ್ಯ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಪತ್ತೆ ಮಾಡಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಬೇಕು ಮತ್ತು ಸೌಜನ್ಯ ಹಾಗು ಸಂಬಂಧಿತ ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಧಕ್ಕೆ ತರುವಂತಹ ಪ್ರಕರಣಗಳನ್ನು ತಕ್ಷಣ ಹತ್ತಿಕ್ಕಬೇಕೆಂದು ರಾಜ್ಯ ಸರಕಾರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಪಕ್ಕದ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿದೆ.
ಸೌಜನ್ಯಳಿಗೆ ನ್ಯಾಯ ಸಿಗುವ ತನಕ ಎಬಿವಿಪಿ ಹೋರಾಟ ನಿಲ್ಲುವುದಿಲ್ಲ:
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ ಅವರು ಮಾತನಾಡಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯಾಗಿ 11 ವರ್ಷಗಳ ಬಳಿಕವೂ ನ್ಯಾಯ ಸಿಗದಿರುವುದು ದುರದೃಷ್ಟಕರ. ನಿಜವಾದ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಇಷ್ಟರ ತನಕ ಆಗಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಹೆಣ್ಣಿಗೆ ಗೌರವ ಕೊಡುವ ಈ ಮಣ್ಣಿನಲ್ಲಿ ಇನ್ನೂ ನ್ಯಾಯ ಸಿಗದಿರುವುದು ಬೇಸರದ ವಿಚಾರ. ಸೌಜನ್ಯ ಕೊಲೆಯ ಸಂದರ್ಭ ಆರೋಪಿಯ ಬಂಧನಕ್ಕೆ ರಾಜ್ಯಾದ್ಯಂತ ಹೋರಾಟ ಮಾಡಿದ ಏಕೈಕ ಸಂಘಟನೆ ಎಬಿವಿಪಿ. ಅವತ್ತು ಆರೋಪಿ ಬಂಧನವಾಯಿತ್ತೆಂದು ಹೋರಾಟ ನಿಲ್ಲಿಸಿದ್ದೆವು. ಆದರೆ ಆರೋಪಿ ನಿರಪರಾಧಿಯಾಗಿ ಸಾಬೀತಾದ ಬಳಿಕ ಈ ಪ್ರಕರಣವನ್ನು ಮರುತನಿಖೆಗೆ ಒಪ್ಪಿಸಿ ನೈಜ ಆರೋಪಿಯನ್ನು ಬಂಧಿಸದೇ ಇದ್ದಲ್ಲಿ ಮತ್ತೊಮ್ಮೆ ರಾಜ್ಯದ್ಯಾಂತ ಎಬಿವಿಪಿಯಿಂದ ಪ್ರತಿ ಶಾಖೆಗಳಲ್ಲೂ ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಕೆ ನೀಡಿದರಲ್ಲದೆ ಇದರ ಜೊತೆಗೆ ಸೌಜನ್ಯ ಮತ್ತು ಸಂಬಂಧಿತ ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಘನತೆಗೆ ಮತ್ತು ಸಾಮಾನ್ಯ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವುದನ್ನು ಕೂಡಾ ತಕ್ಷಣ ಹತ್ತಿಕ್ಕಬೇಕು ಮತ್ತು ಇದರ ಹಿಂದಿರು ಕಾಣದ ಕೈಗಳಿಗೆ ಕಠಿಣ ಶಿಕ್ಷೆ ಆಗಬೇಕು. ಒಟ್ಟಿನಲ್ಲಿ ಸೌಜನ್ಯಳಿಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದರು. ಎಬಿವಿಪಿ ನಗರ ಕಾರ್ಯಕರ್ತೆ ಸ್ವರ್ಣ ಗೌರಿ ಮಾತನಾಡಿದರು. ಎಬಿವಿಪಿ ಸಂಘಟನೆಯ ಸ್ವಸ್ತಿಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ತೇಜಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಗೃಹಮಂತ್ರಿಗಳಿಗೆ ಮನವಿ ಮಾಡಲಾಯಿತು.