ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

0

ಪುತ್ತೂರು: ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಸಾಧನೆ ಮಾಡಿದರಷ್ಟೇ ಸಾಲದು. ಮುಂದೆ ಜೀವನಕ್ಕೆ ಬೇಕಾದ ಎಲ್ಲಾ ಅಂಶಗಳು ಅವರಿಗೆ ದೊರೆಯಬೇಕು. ಈ ನಿಟ್ಟಿನಲ್ಲಿ ವಿದ್ಯಾಭಾರತಿಯು ಒಂದೊಳ್ಳೆ ಪ್ರಯತ್ನ ಮಾಡುತ್ತಾ ಬಂದಿದೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ ಮತ್ತು ಆತ್ಮ ಸ್ಥೈರ್ಯ ಬೆಳೆಸುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಕಬಕ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ವಿದ್ಯಾಭಾರತಿ ಕರ್ನಾಟಕ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟ-2023 ವಿವೇಕ ಸಂಭ್ರಮ ಕಾರ್ಯಕ್ರಮದ ಉದ್ಘಾಟಕರಾಗಿ ಅವರು ಮಾತನಾಡಿದರು.

ಪುತ್ತೂರಿನ ಯುವಜನ ಸೇವಾ ಇಲಾಖೆ ಮತ್ತು ಕ್ರೀಡಾ ಅಧಿಕಾರಿ ಶ್ರೀಕಾಂತ್ ಬಿರಾವು ಮುಖ್ಯ ಅತಿಥಿಗಳಾಗಿ ಮಾತನಾಡಿ, ಕರ್ನಾಟಕ ವಿದ್ಯಾ ಭಾರತಿಯು ನಡೆಸುವ ಈ ಕ್ರೀಡೆಯು ನಿಮ್ಮ ವೈಯುಕ್ತಿಕ ಬೆಳವಣಿಗೆಗೂ ಪೂರಕ. ರಾಜ್ಯ ಮತ್ತು ರಾಷ್ಟ್ರ ಕ್ರೀಡಾಪಟುಗಳಾಗಿ ಗುರುತಿಸಿಕೊಳ್ಳುವುದಕ್ಕೆ ಇದು ಒಳ್ಳೆಯ ಅವಕಾಶ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾ ಸಂಸ್ಥೆ ಕಲ್ಲಡ್ಕ ಇದರ ಸಂಚಾಲಕ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಸಂತ ಮಾಧವ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಂದ ಕ್ರೀಡಾ ಜ್ಯೋತಿ ಆಗಮನವಾಯಿತು. ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಸುಮಾರು 14ಕ್ಕೂ ಹೆಚ್ಚಿನ ಸಂಸ್ಥೆಗಳ 900ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ, ಜಿಲ್ಲಾ ಪ್ರಮಖ್ ಕರುಣಾಕರ ಸ್ವಾಗತಿಸಿ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವಿದ್ಯಾ ರಾಣಿ ವಂದಿಸಿ, ಕೃತಿಕಾ ನಿರ್ವಹಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಕುಮಾರಿ, ಯತೀಶ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here