ಮನವಿಗೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ: ಅರುಣ್ ಎಂ. ವಿಟ್ಲ
ವಿಟ್ಲ: ಶಾಸಕರು ಮತ್ತು ಅಧಿಕಾರಿಗಳು ಅನುದಾನ ವಿತರಣೆಯಲ್ಲಿ ತಾರತಮ್ಯವೆಸಗಿದ್ದಾರೆ ಎಂದು ಆರೋಪಿಸಿ ವಿಟ್ಲ ಪಟ್ಟಣ ಪಂಚಾಯತ್‌ನ 12 ಮಂದಿ ಬಿಜೆಪಿ ಸದಸ್ಯರು ಪಟ್ಟಣ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಉದ್ದೇಶಿಸಿ ಪ.ಪಂ ಸದಸ್ಯ ಅರುಣ್ ವಿಟ್ಲ ಮಾತನಾಡಿ, ಹಳೆಯ ಪುರಭವನದಲ್ಲಿ ನೂತನ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ನಿಗದಿಪಡಿಸಿದ 54 ಲಕ್ಷ ರೂ. ಅನುದಾನವನ್ನು ಬದಲಿಸಬಾರದು. ನಗರೋತ್ಥಾನ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಬೆಂಬಲಿತ 12 ಮಂದಿ ಸದಸ್ಯರನ್ನು ಕಡೆಗಣಿಸಿ, ಶಾಸಕರು ಅನುದಾನವನ್ನು ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸದಸ್ಯರ ವ್ಯಾಪ್ತಿಗೆ ಹಂಚಲಾಗಿದೆ. ಈ ಬಗ್ಗೆ ಶಾಸಕರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಸ್ಪಂದಿಸಿಲ್ಲ. ಅದಕ್ಕಾಗಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ.
ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯ ಅನುದಾನವೂ ಬಂದಿದೆ. ಅದನ್ನು ಪಕ್ಷಭೇದವಿಲ್ಲದೇ ಹಂಚಬೇಕು. ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪಟ್ಟಣ ಪಂಚಾಯತ್‌ನಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ವಿಟ್ಲ ಪ.ಪಂನಲ್ಲಿ ಬ್ರೋಕರೇಜ್ ನಿಲ್ಲಿಸಬೇಕು. ಪ್ರತಿಯೊಂದಕ್ಕೂ ಕಮಿಷನ್ ದಂಧೆ ನಡೆಯುತ್ತಿದೆ. ಕೆಲವು ಸದಸ್ಯರು ಹಾಗೂ ಸದಸ್ಯರ ಮನೆಯವರು ಪಟ್ಟಣ ಪಂಚಾಯತ್‌ನಲ್ಲಿ ಮಧ್ಯವರ್ತಿಗಳಾಗಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಆಡಳಿತ ಅಧಿಕಾರಿ ಹಾಗೂ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಆಗಮಿಸಿ, ಪ್ರತಿಭಟನಕಾರರಿಂದ ಮನವಿ ಪಡೆದು, ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಹರೀಶ್ ಸಿ.ಎಚ್., ವಿಜಯಲಕ್ಷ್ಮೀ, ಸುನಿತಾ ಪೂಜಾರಿ, ರಕ್ಷಿತಾ ಸನತ್, ಸಂಗೀತಾ, ಜಯಂತ್ ಚಂದಪ್ಪಾಡಿ, ಕರುಣಾಕರ ನಾಯ್ತೊಟ್ಟು, ಎನ್.ಕಷ್ಣ , ವಸಂತ ಪುಚ್ಚೆಗುತ್ತು ಉಪಸ್ಥಿತರಿದ್ದರು.