ಉಪ್ಪಿನಂಗಡಿ: ಕಾರು ಬಾಕಿ…! ಕಾಲು ಬಾಕಿ…!

0

ಉಪ್ಪಿನಂಗಡಿ: ಕಾಮಗಾರಿ ಗುತ್ತಿಗೆದಾರರ ದುಡುಕಿನ ನಿರ್ಧಾರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸರಿಯಾಗಿ ಮಾಹಿತಿ ನೀಡದಿದ್ದುದ್ದರಿಂದ ಸಚಿವರೊಂದಿಗೆ ಬಂದ ಕಾರು ಹಾಗೂ ಶಾಸಕರ ಸಹಿತ ಹಲವರ ಕಾಲುಗಳು ಕೆಸರಲ್ಲಿ ಹೂತು ಹೋದ ಪ್ರಸಂಗ ಬಿಳಿಯೂರಿನ ಕಿಂಡಿ ಅಣೆಕಟ್ಟು ಬಳಿ ನಡೆಯಿತು.


ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರ ದ.ಕ. ಜಿಲ್ಲಾ ಪ್ರವಾಸದ ಪಟ್ಟಿಯಲ್ಲಿ ಬಿಳಿಯೂರಿನ ಕಿಂಡಿ ಅಣೆಕಟ್ಟು ವೀಕ್ಷಣೆ ಬಗ್ಗೆ ಇರಲಿಲ್ಲ. ಆದರೆ ಶಾಸಕರ ಕಾರ್ಯಕ್ರಮದ ಪಟ್ಟಿಯಲ್ಲಿ ಶಾಸಕರು ಮಾತ್ರ ಬಿಳಿಯೂರು ಕಿಂಡಿ ಅಣೆಕಟ್ಟಿಗೆ ಭೇಟಿ ನೀಡಲಿದ್ದಾರೆ ಎಂದಿತ್ತು. ಮಧ್ಯಾಹ್ನ 11 ಗಂಟೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಸಚಿವರ ಭೇಟಿಯೂ ಇದೆ ಎಂದು ಮಾಹಿತಿ ಸಿಕ್ಕಿತ್ತು. ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಕಿಂಡಿ ಅಣೆಕಟ್ಟು ಹಾಗೂ ಸಂಪರ್ಕ ಸೇತುವೆಯು ಎರಡು ತಾಲೂಕುಗಳನ್ನು ಬೆಸೆಯುತ್ತದೆ. ಇಲ್ಲಿಗೆ ಆಗಮಿಸಲು ಒಂದು ರಸ್ತೆ ಬಂಟ್ವಾಳ ತಾಲೂಕಿನ ಪೆರ್ನೆಯಿಂದ ಬಂದರೆ, ಮತ್ತೊಂದು ರಸ್ತೆ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆಯಿಂದ ಇತ್ತು. ಸರಳೀಕಟ್ಟೆಯ ರಸ್ತೆಯು ಉತ್ತಮವಾಗಿದ್ದು, ಕಿಂಡಿ ಅಣೆಕಟ್ಟಿನ ಮೇಲೆ ನೇರವಾಗಿ ಆಗಮಿಸಬಹುದು. ಆದರೆ ಪೆರ್ನೆಯಿಂದ ಬರುವ ರಸ್ತೆಯು ಬಿಳಿಯೂರು ಬಳಿ ಮತ್ತೊಬ್ಬರ ಖಾಸಗಿ ಜಾಗದಿಂದ ಬಂದು ಕಿಂಡಿ ಅಣೆಕಟ್ಟು ಸಮೀಪದ ನದಿ ತೀರಕ್ಕೆ ಮಾತ್ರ ಸಂಪರ್ಕ ಕಲ್ಪಿಸುತ್ತಿತ್ತು. ಇಲ್ಲಿಂದ ಎತ್ತರದಲ್ಲಿರುವ ಕಿಂಡಿ ಅಣೆಕಟ್ಟಿನ ಮೇಲೆ ಹೋಗಲು ಸಾಧ್ಯವಿರಲಿಲ್ಲ. ಶಾಸಕರು ಭೇಟಿ ನೀಡುತ್ತಾರೆನ್ನುವ ಮಾಹಿತಿ ಸಿಕ್ಕ ಗುತ್ತಿಗೆದಾರರು ಅಣೆಕಟ್ಟಿನ ಬಳಿ ಸುಮಾರು 200 ಮೀಟರ್‌ನಷ್ಟು ಅಲ್ಲೇ ಇರುವ ಧರೆಯನ್ನು ಅಗೆದು, ಆ ಮಣ್ಣನ್ನು ರಸ್ತೆಗೆ ಹಾಕಿ ಅಣೆಕಟ್ಟಿನ ಮೇಲೆ ಹೋಗಲು ರಸ್ತೆ ನಿರ್ಮಿಸಿದ್ದರು. ಆದರೆ ಮಳೆಯ ಕಾರಣದಿಂದ ಅದು ಇಂದು ಸಂಪೂರ್ಣ ಕೆಸರಾಗಿ ಕಾಲು ಹೂತು ಹೋಗುವಂತಾಗಿತ್ತು. ಜಕ್ರಿಬೆಟ್ಟಿಗೆ ಭೇಟಿ ನೀಡಿದ್ದ ಸಚಿವರು ಅಲ್ಲಿಂದಲೇ ನೇರವಾಗಿ ಸರಳೀಕಟ್ಟೆಯ ಮೂಲಕ ಬಿಳಿಯೂರು ಕಿಂಡಿ ಅಣೆಕಟ್ಟಿನ ಮೇಲೆ ಸುಮಾರು ಅರ್ಧ ಗಂಟೆ ಮೊದಲೇ ಆಗಮಿಸಿದ್ದರು. ಆ ಸಂದರ್ಭ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಲ್ಲಿದ್ದರು. ಆದರೆ ಯಾರೂ ಕೂಡಾ ಶಾಸಕರಲ್ಲಿ ಈ ದಾರಿ ಸರಿಯಿಲ್ಲ ಎಂದು ತಿಳಿಸಿರಲಿಲ್ಲ. ಪೆರ್ನೆ ಮಾರ್ಗವಾಗಿ ಬಂದ ಶಾಸಕರು ಕಾರು ಹೋಗದಂತಹ ಪರಿಸ್ಥಿತಿಯಲ್ಲಿ ಅಲ್ಲಿರುವ ಖಾಸಗಿ ಜಾಗದಲ್ಲಿ ಕಾರಿನಿಂದ ಇಳಿದು ಕೆಸರಿನಲ್ಲೇ ಒಂದೊಂದೇ ಹೆಜ್ಜೆಯನ್ನಿಡುತ್ತಾ, ಕೆಸರಿನಿಂದ ಜಾರುತ್ತಿದ್ದ ಆ ಏರು ರಸ್ತೆಯನ್ನು ಹತ್ತಿ ಅಣೆಕಟ್ಟಿನ ಮೇಲ್ಗಡೆ ಬಂದರು. ಅಣೆಕಟ್ಟಿನ ಮೇಲೆ ಮುಟ್ಟುವಾಗ ಶಾಸಕರು ಸೇರಿದಂತೆ ಅವರನ್ನು ಹಿಂಬಾಲಿಸಿದ ಪತ್ರಕರ್ತರು ಸಹಿತ ಹಲವರ ಕಾಲುಗಳು ಸಂಪೂರ್ಣ ಕೆಸರಿನಲ್ಲಿ ಹೂತು ಹೋಗಿ ಧರಿಸಿದ್ದ ಪಾದರಕ್ಷೆಗಳು ಕೂಡಾ ಸಂಪೂರ್ಣ ಕೆಸರಿನಲ್ಲಿ ಮುಳುಗಿಹೋಗಿತ್ತಲ್ಲದೆ, ಕೈ, ಮೈ, ಪ್ಯಾಂಟ್‌ಗಳಲ್ಲಿ ಕೆಸರು ಮೆತ್ತಿಕೊಳ್ಳುವಂತಾಯಿತು. ಕಿಂಡಿ ಅಣೆಕಟ್ಟಿನ ಮೇಲ್ಗಡೆಯ ಸಂಪರ್ಕ ಸೇತುವೆಯಿಂದ ನೇರವಾಗಿ ಬಂದು ಪೆರ್ನೆ ಕಡೆಯ ಮಣ್ಣಿನ ರಸ್ತೆಗೆ ಇಳಿದ ಸಚಿವರೊಂದಿಗೆ ಬಂದ ಕರ್ನಾಟಕ ಸರಕಾರದ ಕಾರೊಂದು ಅಲ್ಲೇ ಕೆಸರಲ್ಲಿ ಹೂತು ಹೋಗಿ ಕೊನೆಗೇ ಜೀಪು ತಂದು ಅದನ್ನು ಎಳೆಯುವಂತಾಯಿತು. ಶಾಸಕರು ಬಳಿಕ ಸರಳೀಕಟ್ಟೆ ಮಾರ್ಗವಾಗಿ ಕಾರನ್ನು ತರಿಸಿ, ಅಲ್ಲಿಂದ ಉಪ್ಪಿನಂಗಡಿ ಕಡೆಗೆ ತೆರಳಿದರು.
ಒಟ್ಟಿನಲ್ಲಿ ಗಡಿಬಿಡಿ, ಗೊಂದಲ, ಸರಿಯಾದ ಮಾಹಿತಿ ನೀಡುವವರು ಇಲ್ಲದ್ದರಿಂದ ಕೆಸರಿನಲ್ಲಿ ಕಾಲು ಬಾಕಿ, ಕಾರು ಬಾಕಿಯಾಗುವಂತಹ ಪ್ರಸಂಗ ಒದಗಿಬಂದಿತ್ತು.

LEAVE A REPLY

Please enter your comment!
Please enter your name here