ಪುತ್ತೂರು: ಧರ್ಮಸ್ಥಳದಲ್ಲಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮರುತನಿಖೆ ನಡೆಸುವ ಕುರಿತು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಪುತ್ತೂರು ಸಹಿತ ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಸಮಾಜದ ಸೌಜನ್ಯ ಹೋರಾಟ ಸಮಿತಿಯ ಪ್ರಮುಖರಿಗೆ ಭರವಸೆ ನೀಡಿದ್ದಾರೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವು ಹೋರಾಟಗಳು ನಡೆಯುತ್ತಿದ್ದು ಇದೀಗ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಹೋರಾಟದ ಹೊಸ ಹಾದಿ ಮತ್ತು ಈ ಕುರಿತು ಸಮಗ್ರವಾಗಿ ಚರ್ಚಿಸಲು ಆದಿ ಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಆಹ್ವಾನದಂತೆ ಸೆ.10ರಂದು ದ.ಕ ಜಿಲ್ಲೆಯ ಹೆಚ್ಚು ಮಂದಿ ಒಕ್ಕಲಿಗ ಗೌಡ ಸಮುದಾಯದ ನಾಯಕರು ಆದಿ ಚುಂಚನಗಿರಿ ಕ್ಷೇತ್ರಕ್ಕೆ ತೆರಳಲಿದಾಗ ಅಲ್ಲಿ ಸಭೆ ನಡೆಸಿದ ಶ್ರೀ ಗಳು ಸೌಜನ್ಯಳಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಪ್ರಕರಣವನ್ನು ಮರು ತನಿಖೆ ಮಾಡುವ ಕುರಿತು ಒಂದು ವಾರದೊಳಗೆ ನಾನೆ ಸತಃ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ ಎಂದು ಹೋರಾಟ ಸಮಿತಿಗೆ ಭರವಸೆ ನೀಡಿದರು. ದಕ್ಷಿಣ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ಡಿ.ಬಿ ಬಾಲಕೃಷ್ಣ ಸಹಿತ ದ.ಕ ಜಿಲ್ಲಾ ಪ್ರತಿ ತಾಲೂಕಿನ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಯುವ ಗೌಡ ಸಂಘದ ನಾಗೇಶ್ ಕೆಡೆಂಜಿ, ಶ್ರೀಧರ್ ಕಣಜಾಲು, ರವಿ ಮುಂಗ್ಲಿಮನೆ, ನಾಗಪ್ಪ ಗೌಡ ಬೊಮ್ಮೆಟ್ಟಿ, ಸುರೇಶ್ ಕಲ್ಲಾರೆ, ಪ್ರವೀಣ್ ಕುಂಟ್ಯಾನ, ಯಶವಂತ ಕಳುವಾಜೆ, ನ್ಯಾಯವಾದಿ ಮೋಹಿತ್ ಕುಮಾರ್ ಸಹಿತ ಸುಮಾರು 150ಕ್ಕೂ ಅಧಿಕ ಮಂದಿ ಸಭೆಯಲ್ಲಿ ಪಾಲ್ಗೊಂಡರು.