ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ದಿ.ಎನ್.ಸುಧಾಕರ ಶೆಟ್ಟಿರವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ, ಶ್ರದ್ಧಾಂಜಲಿ

0

ಪುತ್ತೂರು: ಸೆ.10ರಂದು ನಿಧನರಾದ ಪುತ್ತೂರು ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿರವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಮತ್ತು ಶ್ರದ್ಧಾಂಜಲಿ ಸಭೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ ಹುಟ್ಟುವಾಗ ಕುಟುಂಬಕ್ಕೆ ಮತ್ತು ಸಾಯುವಾಗ ಸಮಾಜಕ್ಕೆ ತಿಳಿದಿರಬೇಕು. ಸುಧಾಕರ ಶೆಟ್ಟಿರವರು ಅಜಾತಶತ್ರುವಾಗಿ ಬಾಳಿದವರು. ಅವರ ಅಗಲುವಿಕೆ ಪಕ್ಷಕ್ಕೆ ನಷ್ಟವಾಗಿದೆ. ನಾವು ಪಕ್ಷ ಸಂಘಟನೆ ಮಾಡುವ ಮೂಲಕ ಆ ಶಕ್ತಿಯನ್ನು ತುಂಬಬೇಕು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಿಕ್ಕಿದ ಅವಕಾಶದಲ್ಲಿ ಉತ್ತಮ ಸೇವೆಯನ್ನು ಮಾಡಿದ್ದಾರೆ. ದೇವಸ್ಥಾನಕ್ಕೆ ಪ್ರತಿನಿತ್ಯ ಹೋಗಿ ದೇವರ ದರ್ಶನ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದರು. ಅವರ ಆತ್ಮ ನಮ್ಮನ್ನು ಬಿಟ್ಟುಹೋಗಿದೆ. ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹೇಳಿ ನಮನ ಸಲ್ಲಿಸಿದರು.


ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಸಾವನ್ನು ತಡೆಯಲು ಸಾಧ್ಯವಿಲ್ಲ. ಹುಟ್ಟು ಸಾವಿನ ಮಧ್ಯೆ ಯಾವ ರೀತಿ ಬದುಕಿದ್ದೇವೆ ಎನ್ನುವುದು ಮುಖ್ಯ. ಯಾರು ಕೂಡ ಶಾಸ್ವತವಾಗಿ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಸುಧಾಕರ ಶೆಟ್ಟಿರವರು ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಆರಂಭವಾಗುವ ಸಮಯದಲ್ಲಿ ಸುಧಾಕರ ಶೆಟ್ಟಿಯವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಇವರಿಗೆ ಕಾಂಗ್ರೆಸ್‌ನ ಮೇರು ನಾಯಕರುಗಳು ನಿಕಟವರ್ತಿಯಾಗಿದ್ದರು. ದೈವಭಕ್ತರಾಗಿದ್ದ ಅವರು ಪುತ್ತೂರು ಕಿಲ್ಲೆ ಮೈದಾನದ ಗಣೇಶೋತ್ಸವದಲ್ಲಿ ಸಕ್ರಿಯರಾಗಿ ಭಾಗಿಯಾದವರು. ಕುಟುಂಬದವರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಹೆಸರನ್ನು ಸಮಾಜದಲ್ಲಿ ಉಳಿಸಿಕೊಂಡು ಹೋಗಲು ಎಲ್ಲರಿಗೆ ಕಷ್ಟ ಆದರೆ ಸುಧಾಕರ ಶೆಟ್ಟಿರವರು ಹೆಸರನ್ನು ಉಳಿಸಿ ಹೋಗಿದ್ದಾರೆ. ಪುತ್ತೂರಿನ ಕಾಂಗ್ರೆಸ್‌ನಲ್ಲಿ ಮೇರು ವ್ಯಕ್ತಿತ್ವದ ನಾಯಕ ಇಲ್ಲದಂತಾಗಿದೆ. ಕಾಂಗ್ರೆಸ್‌ನ ಸ್ಥಿತ್ಯಂತರ ಸಮಯದಲ್ಲಿ ಪಕ್ಷಕ್ಕೆ ಉತ್ತಮ ನಾಯಕನಾಗಿದ್ದರು. ಕಾಂಗ್ರೆಸ್ ಪಕ್ಷದ ಕಛೇರಿ ಆರಂಭಕ್ಕೆ ನಾಂದಿ ಹಾಕಿದವರಲ್ಲಿ ಇವರೂ ಒಬ್ಬರು. ಯಾವುದೇ ವಿಚಾರವನ್ನು ಸುಧಾಕರ ಶೆಟ್ಟಿರವರು ಸ್ಪಂದಿಸುತ್ತಿದ್ದರು. ಕಾಂಗ್ರೆಸ್ ನೀಡಿದ ಅವರ ನಾಯಕತ್ವವನ್ನು ನಾವು ನೆನಪಲ್ಲಿಟ್ಟುಕೊಳ್ಳಬೇಕು. ಅವರಿಲ್ಲದ ಕಾಂಗ್ರೆಸ್, ಪುತ್ತೂರು, ಗಣೇಶೋತ್ಸವವನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ಕೊಳ್ತಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೆರೆಮೂಲೆ ಮಾತನಾಡಿ ಸುಧಾಕರ ಶೆಟ್ಟಿರವರು ಕಿಲ್ಲೆ ಮೈದಾನದ ಗಣೇಶೋತ್ಸವವನ್ನು ಹಬ್ಬದ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಒಡನಾಟ ಪ್ರಾರಂಭವಾದ ಮೇಲೆ ನಾನು ಸುಧಾಕರ ಶೆಟ್ಟಿರವರು ಸಹೋದರರಂತೆ ಇದ್ದೆವು. ಅಧಿಕಾರ ಸಿಗಲಿಲ್ಲ ಎಂಬ ಕಾರಣಕ್ಕೆ ಅವರು ಬೇಸರ ಮಾಡಿಕೊಳ್ಳದೆ ಪಕ್ಷಕ್ಕಾಗಿ ದುಡಿದಿದ್ದಾರೆ. ಪುತ್ತೂರಿನ ಜನರ ಅನಭಿಷಕ್ತನಾಗಿ ಬದುಕಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಮತ್ತು ಪುತ್ತೂರಲ್ಲಿ ಕಾಂಗ್ರೆಸ್ ವ್ಯವಸ್ಥೆ ಬರಬೇಕು ಎಂದು ಅಭಿಲಾಷೆ ಹೊಂದಿದ್ದರು ಎಂದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಶಶಿಕಿರಣ್ ರೈ ಮಾತನಾಡಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅವರ ನಾಯಕತ್ವದಲ್ಲಿ ಎಲ್ಲಾ ಚುನಾವಣೆಗಳನ್ನು ಗೆದ್ದಿದ್ದೇವೆ. ಆದರೆ ಅವರಿಗೆ ಶಾಸಕರಾಗು, ಸಂಸದರಾಗುವ ಯೋಗ ಕೂಡಿ ಬರಲಿಲ್ಲ. ನಾವು ನಿಕಟ ಸಂಬಂಧ ಹೊಂದಿದ್ದೆವು. ಕಿಲ್ಲೆ ಮೈದಾನದ ಸಮೀಪ ಅಥವಾ ಪುತ್ತೂರು ನಗರದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡುವ ಆಸೆ ಹೊಂದಿದ್ದರು ಎಂದರು. ಪುತ್ತೂರು ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಮಾತನಾಡಿ 1994ರ ಸಮಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ನಾನು ಸ್ಪರ್ಧಿಸಲು ಸುಧಾಕರ ಶೆಟ್ಟಿ ಮತ್ತು ವಿನಯ ಕುಮಾರ್ ಸೊರಕೆ ಮಹತ್ತರ ಪಾತ್ರ ವಹಿಸಿದ್ದಾರೆ. ಅವರು ಮಹಿಳಾ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ನೀಡಿದ್ದಾರೆ. ಜವಾಬ್ದಾರಿ ಹೊಂದಿದ ವ್ಯಕ್ತಿಯಾಗಿದ್ದರು. ಸೋತವರನ್ನು ಕೂಡ ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿ ಪಕ್ಷ ಸಂಘಟನೆಗೆ ದುಡಿದ ಅನುಭವ ಹಂಚಿಕೊಂಡರು. ಪುತ್ತೂರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್ಷದ್ ದರ್ಬೆ ಮಾತನಾಡಿ ನಮ್ಮ ಕುಟುಂಬ ಮತ್ತು ಅವರ ಕುಟುಂಬ ಫ್ಯಾಮಿಲಿ ಫ್ರೆಂಡ್ಸ್ ಆಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಪರಿಚಯಿಸಿದವರು. ಯೂತ್ ಕಾಂಗ್ರೆಸ್ ಸಂಘಟನೆಗೆ ಮಾರ್ಗದರ್ಶಕರಾಗಿದ್ದರು. ಅವರ ಅಗಲುವಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಲ ರಾಮಚಂದ್ರ ಸ್ವಾಗತಿಸಿ ನುಡಿನಮನ ಸಲ್ಲಿಸಿದರು. ಸಭೆಯ ಕೊನೆಗೆ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪಕ್ಷದ ಮುಖಂಡರು, ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮೃತದೇಹಕ್ಕೆ ಅಂತಿಮ ನಮನ
ದಿ.ಎನ್.ಸುಧಾಕರ ಶೆಟ್ಟಿರವರ ಪಾರ್ಥೀವ ಶರೀರವನ್ನು 11 ಗಂಟೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಎದರುಗಡೆ ತರಲಾಯಿತು. ಬಳಿಕ ಮೃತದೇಹಕ್ಕೆ ಕಾಂಗ್ರೆಸ್ ಪಕ್ಷದ ಧ್ವಜ ಹಾಕಿ ಅಂತಿಮ ನಮನ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here