ಪುತ್ತೂರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘವು 2022-2023ನೇ ಸಾಲಿನ ಬ್ಯಾಂಕಿಗ್ ವ್ಯವಹಾರದಲ್ಲಿ 2ನೇ ಬಾರಿ ಗುರಿ ಮೀರಿದ ವಿಶೇಷ ಸಾಧನೆ ಮಾಡಿರುವುದನ್ನು ಗುರುತಿಸಿ ದ.ಕ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲದ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸೆ.5ರಂದು ಮೆಲ್ಕಾರ್ ಬಿರ್ವಾ ಸೆಂಟರ್ ಸಭಾಭವನದಲ್ಲಿ ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ಎನ್ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎನ್. ಲಿಂಗಪ್ಪ ಪೂಜಾರಿ ಅವರನ್ನು ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾದ ಕೆ.ಸಂಜೀವ ಪೂಜಾರಿಯವರು ಸನ್ಮಾನಿಸಿ ಗೌರವಿಸಿದರು. ಮಹಾಮಂಡಲದ ಉಪಾಧ್ಯಕ್ಷರಾದ ರಾಜೇಶ್ ಸುವರ್ಣ, ನಿದೇಶಕರಾದ ವಿನಯಕುಮಾರ್ ಸೊರಕೆ, ಆರ್.ಸಿ ನಾರಾಯಣ, ಅಣ್ಣಿ ಯಾನೆ ನೋಣಯ್ಯ, ಉಷಾ ಅಂಚನ್, ಬೇಬಿ ಕುಂದರ್, ಗಣೇಶ್ ಪೂಜಾರಿ, ಹರೀಶ್ ಸುವರ್ಣ, ಪದ್ಮನಾಭ ಕೋಟ್ಯಾನ್, ಪುರುಷ ಸಾಲಿಯಾನ್, ಶಿವಪ್ಪ ಸುವರ್ಣ, ವಿಶ್ವನಾಥ ಬಿ. ವಿಶ್ವನಾಥ ಪಂಜ ಉಪಸ್ಥಿತರಿದ್ದರು.
ಸಂಘದ ಸಾಧನೆ:
ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘವು ಕಡಬ ತಾಲೂಕಿನ ಕೊಲ, ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಪೆರಾಬೆ, ಕುಂತೂರು, ಬಲ್ಯ, ಕುಟ್ರುಪ್ಪಾಡಿ, ರೆಂಜಿಲಾಡಿ, ಕಡಬ, ಕೋಡಿಂಬಾಳ, 102 ನೆಕ್ಕಿಲಾಡಿ, ನೂಜಿಬಾಳ್ತಿಲ, ಬಂಟ್ರ (ಮರ್ದಾಳ), ಐತ್ತೂರು ಮತ್ತು ಬಿಳಿನೆಲೆ ಎಂಬ 16 ಗ್ರಾಮಗಳ ಕಾರ್ಯಕ್ಷೇತ್ರವನ್ನು ಹೊಂದಿದೆ. ಸಂಘವು 2022-2023ನೇ ಸಾಲಿನಲ್ಲಿ 176.43 ಕೋಟಿ ವ್ಯವಹಾರ ನಡೆಸಿ ಶೇ.98.96 ಸಾಲ ವಸೂಲಾತಿಯೊಂದಿಗೆ, 72.16 ಲಕ್ಷ ನಿವ್ವಳ ಲಾಭ ಬಂದಿರುತ್ತದೆ. ಸಂಘದ ನೆಟ್ಟಣ ಶಾಖೆಯು ಎರಡನೇ ವರ್ಷವು ಶೇ.100 ಸಾಲ ವಸೂಲಾತಿ ದಾಖಲೆ ನಿರ್ಮಿಸಿದೆ. ಕಲ್ಲುಗುಡ್ಡೆ-ನೂಜಿಬಾಳ್ತಿಲ ಶಾಖೆ ಈ ಬಾರಿ ಶೇ.100 ಸಾಲ ವಸೂಲಾತಿಯನ್ನು ಸಾಧಿಸಿದೆ. ಒಟ್ಟು 2619 ಸದಸ್ಯರಿಗೆ ಶೇ.25 ಡಿವಿಡೆಂಟ್ ನೀಡಲಾಗಿದೆ.
ಸಂಘವು ಗಳಿಸಿರುವ ಲಾಭದ ಒಂದು ಅಂಶವನ್ನು ಸಂಘದ ಕಾರ್ಯಕ್ಷೇತ್ರದಲ್ಲಿರುವ ಪ್ರೌಢಶಾಲೆಯ ಹತ್ತನೇ ತರಗತಿ ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಪದವಿ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘದ ಮಹಾಸಭೆಯಲ್ಲಿ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ಸಂಘದ ಸದಸ್ಯರ ಮಕ್ಕಳಿಗೆ, ಮೂರ್ತೆದಾರರ ಮಕ್ಕಳಿಗೂ ಒಟ್ಟು 62 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. 13 ಶಾಶ್ವತದತ್ತಿ ನಿಧಿಯ ಬಡ್ಡಿಯಿಂದ ಬಡತನದಲ್ಲಿರುವ ವಿದ್ಯಾರ್ಥಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಮೂವರು ಮೂರ್ತೆದಾರ ಸದಸ್ಯರಿಗೆ ಮತ್ತು ಇಬ್ಬರು ಹಿರಿಯ ಮಹಿಳಾ ಸದಸ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಉಚಿತ ನೇತ್ರ ಚಿಕಿತ್ಸಾ ಶಿಬಿರ:
ಸಂಘದ ಆಶ್ರಯದಲ್ಲಿ 2022ರ ಡಿ.18ರಂದು ಉಚಿತ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಆಲಂಕಾರು ಗ್ರಾಮ ಪಂಚಾಯತ್ ಇವರುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ 586 ಮಂದಿ ಕಣ್ಣಿನ ತಪಾಸಣೆ ಮಾಡಿಕೊಂಡಿದ್ದು 27 ಮಂದಿಯ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗಿತ್ತು. ಆನಾಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಗಂಗಾಧರ ರೈ ನೆಲ್ಯಾಡಿಯವರ ಸಹಕಾರದೊಂದಿಗೆ ಈ ಉಚಿತ ನೇತ್ರಾಚಿಕಿತ್ಸಾ ಶಿಬಿರದ ಜವಾಬ್ದಾರಿಯನ್ನು ಸಂಘವು ವಹಿಸಿಕೊಂಡಿತು.
ಉಚಿತ ಫೂಟ್ ಪಲ್ಸ್ ಥೆರಪಿ
ಸಂಘದ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಆಲಂಕಾರು ಮತ್ತು ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಪುತ್ತೂರು ಇದರ ವತಿಯಿಂದ 28.12.2022 ರಿಂದ 11.01.2023ರ ತನಕ ಆಲಂಕಾರು ಗ್ರಾಮ ಪಂಚಾಯತ್ ಮತ್ತು ಪೆರಾಬೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಮಾಹಿತಿದಾರರಾಗಿ ಪ್ರಭಾಕರ ಸಾಲಿಯಾನ್ರವರು ಮಧುಮೇಹ, ಅಧಿಕ ರಕ್ತದ ಒತ್ತಡ, ಸಂಧಿವಾತ, ಸ್ನಾಯು ಸೆಳೆತ, ವಾತ, ಪಾರ್ಶ್ವ ವಾಯು, ಬೆನ್ನು ನೋವು, ಬೊಜ್ಜು ನಿವಾರಣೆ, ಇನ್ನಿತರ ಎಲ್ಲಾ ಕಾಯಿಲೆಗಳಿಗೆ ಪರಿಹಾರ ಎಂದು ಶಿಬಿರಾರ್ಥಿ ಮಾಹಿತಿ ನೀಡಿದರು. ಒಟ್ಟು 14 ದಿನದ ಈ ಶಿಬಿರದಲ್ಲಿ 1050 ಮಂದಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು.
ಸಂಘವು ಲಾಭದ ಉದ್ದೇಶವನ್ನು ಇಟ್ಟುಕೊಳ್ಳದೆ, ಸಾರ್ವಜನಿಕರಿಗೆ ಉಪಯುಕ್ತ ಸೇವೆ ನೀಡುವುದರ ಮೂಲಕ ಸಂಘವು ಯಶಸ್ವಿಯಾಗಿದೆ. ಸಂಘದ ಅಧ್ಯಕ್ಷರ, ಉಪಾಧ್ಯಕ್ಷರ, ನಿರ್ದೇಶಕರ, ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ, ಸಿಬ್ಬಂದಿ ವರ್ಗದ ಸಹಕಾರದಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು.