ಬದುಕಿನ ಚೈತನ್ಯ ಹೆಚ್ಚಿಸುವ ಸಾಧನ ಕ್ರೀಡೆ- ಗಂಗಾಧರ್ ನೆಕ್ಕರಾಜೆ
ಬಾಲಕ-ಬಾಲಕಿಯರ ವಿಭಾಗದಲ್ಲಿ ಇಂದ್ರಪ್ರಸ್ಥ ಪ್ರಥಮ
ಬಾಲಕರ ವಿಭಾಗದಲ್ಲಿ ಸೈಂಟ್ ಮೆರೀಸ್ ದ್ವಿತೀಯ
ಬಾಲಕಿಯರ ವಿಭಾಗದಲ್ಲಿ ಹಿರೆಬಂಡಾಡಿ ಸರ್ಕಾರಿ ಶಾಲೆ ದ್ವಿತೀಯ
ನೆಲ್ಯಾಡಿ: ಕ್ರೀಡೆ ನಮ್ಮ ಬದುಕಿನ ಚೈತನ್ಯ ಹೆಚ್ಚಿಸುವ ಸಾಧನ. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕ. ಕ್ರೀಡೆ ಎಂಬುವುದು ಸುಲಭ ಸಾಧ್ಯವಲ್ಲ. ಅದರ ಚಾಕಚಕ್ಯತೆಗಳ ಅರಿವು ಅರಿತಾಗ ಮಾತ್ರ ಅದರಲ್ಲಿ ಯಶಸ್ಸು ಸಾಧ್ಯ. ನಮ್ಮ ಜೀವನದಲ್ಲಿಯೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಲ್ಲಿ ಕ್ರೀಡಾಕೂಟಗಳು ಮಹತ್ವ ಪಡೆದಿವೆ ಎಂದು ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ನೆಕ್ಕರಾಜೆ ಹೇಳಿದರು.
ಅವರು ಸೆ.೧೩ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಗದ್ದೆ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿಯ ಖ್ಯಾತ ದಂತ ವೈದ್ಯರಾದ ಡಾ.ರಾಜಾರಾಮ್ ಕೆ.ಬಿ ಅವರು ಮಾತನಾಡಿ, ವಿದ್ಯೆ ನಮ್ಮ ಬದುಕಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರೆ ಕ್ರೀಡೆ ನಮ್ಮಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸುತ್ತದೆ. ನೈತಿಕ ಶಿಕ್ಷಣ ಹಾಗೂ ದೇಶಭಕ್ತಿಯ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ. ಹಾಗಾಗಿ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಪೋಷಕರು ಹೆಚ್ಚು ಆಸಕ್ತರಾಗಬೇಕು ಎಂದರು. ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ ಮಾತನಾಡಿ, ಬದುಕಿಗೆ ಅರ್ಥ ನೀಡುವ ಕ್ರೀಡೆ ಜನಜೀವನದ ಅಂಗವಾಗಿ ಪರಿವರ್ತಿತಗೊಳ್ಳಬೇಕು. ಗ್ರಾಮೀಣ ಭಾಗದ ಹೊಸಗದ್ದೆ ಶಾಲೆ ತನ್ನ ನಿರಂತರ ಕ್ರೀಯೆಗಳಿಂದಾಗಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದರು. ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಣಾಲು ಮಾತನಾಡಿ, ಹೊಸ ಮನೋ ಚಿಂತನೆಗಳನ್ನು ನಮ್ಮಲ್ಲಿ ಹುಟ್ಟುಹಾಕುವ ಕ್ರೀಡೆ ಮಾನಸಿಕ ನೆಮ್ಮದಿಯ ಜತೆಗೆ ಮನೋಬಲವನ್ನು ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಓಮಂದೂರು ವಹಿಸಿದ್ದರು. ವೇದಿಕೆಯಲ್ಲಿ ಸರ್ವೋದಯ ಪೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಗೌಡ, ಬಜತ್ತೂರು ಗ್ರಾ.ಪಂ ಸದಸ್ಯ ಸಂತೋಷ್ ಪಂರ್ದಾಜೆ, ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೊಸಗದ್ದೆ ಶಾಲಾ ಪ್ರಭಾರ ಮುಖ್ಯಗುರು ವಿದ್ಯಾ ಕೆ ಸ್ವಾಗತಿಸಿದರು. ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ ಕೆ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪಿನಂಗಡಿ ಕ್ಲಸ್ಟರ್ ಸಿಆರ್‌ಪಿ ಅಶ್ರಫ್ ವಂದಿಸಿದರು. ಹೊಸಗದ್ದೆ ಶಾಲಾ ಶಿಕ್ಷಕಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿಯರಾದ ಚಿತ್ರಾವತಿ, ಪ್ರಭಾ, ಗೌರವ ಶಿಕ್ಷಕಿ ಪವಿತ್ರಾ ಸಹಕರಿಸಿದರು.
ಬಾಲಕ-ಬಾಲಕಿಯರ ವಿಭಾಗದಲ್ಲಿ ಇಂದ್ರಪ್ರಸ್ಥ ಪ್ರಥಮ- ಸೈಂಟ್ ಮೆರೀಸ್, ಹಿರೇಬಂಡಾಡಿ ದ್ವಿತೀಯ
ಪಂದ್ಯಾಟದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯವು ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ ಸೈಂಟ್ ಮೆರೀಸ್ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಹಿರೆಬಂಡಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ವೈಯುಕ್ತಿಕ ಪ್ರಶಸ್ತಿಗಳನ್ನು ಇಂದ್ರಪ್ರಸ್ಥ ವಿದ್ಯಾಲಯದ ಇರಾಜ್, ಸಮೃದ್, ಅನುಶ್ರೀ ಮತ್ತು ಅಧಿತಿ, ಹಿರೆಬಂಡಾಡಿ ಶಾಲೆಯ ಪ್ರತೀಕ್ಷಾ ಮತ್ತು ಸೈಂಟ್ ಮೆರೀಸ್ ಶಾಲೆಯ ಸಲೀಲ್ ಪಡೆದುಕೊಂಡರು.
ಸಮಾರೋಪ ಕಾಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಕಾರ್ಯದರ್ಶಿ ವಿಮಲ್ ಕೆ ನೆಲ್ಯಾಡಿ, ರಾಮಕುಂಜ ಸಿಆರ್‌ಪಿ ಮಹೇಶ್, ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ್ ಕೆ.ವಿ, ಶಿಕ್ಷಕರಾದ ಶಾಂತಾರಾಮ ಓಡ್ಲ, ಬಾಲಕೃಷ್ಣ ಕೊಣಾಲು, ಕೆ.ಪಿ ಜೋನ್ ನೆಲ್ಯಾಡಿ, ಮೋಹನ್ ಗೌಡ ಪೆರಿಯಡ್ಕ, ಶಾಲಾ ಪ್ರಭಾರ ಮುಖ್ಯಗುರು ವಿದ್ಯಾ ಕೆ ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಓಮಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.