ಪುತ್ತೂರು : ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾಮಟ್ಟದ ಪ್ರತಿಭಾ – 2023 ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆಪ್ಟೆಂಬರ್ 14ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಖ್ಯಾತ ಸಿವಿಲ್ ಇಂಜಿನಿಯರ್ ಹಾಗೂ ಶ್ರೀರಾಮ ಕನ್ಸ್ಟ್ರಕ್ಷನ್ ನ ಮಾಲಕರು ಆಗಿರುವ ಪ್ರಸನ್ನ ಎನ್ ಭಟ್ ಮಾತನಾಡಿ ಯಾರನ್ನೋ ಅನುಕರಿಸಿ ಜೀವನದಲ್ಲಿ ನಾವೇನು ಆಗಲು ಸಾಧ್ಯವಿಲ್ಲ. ನಮ್ಮ ಜೀವನದ ಯಶಸ್ಸಿಗೆ ನಾವೇ ಏನಾದರೂ ಮಾಡಬೇಕಿರುವುದು ಅನಿವಾರ್ಯ. ಗುರಿ ಸಾಧನೆಗೆ ನಮ್ಮದೇ ದಾರಿ ಕಂಡುಕೊಳ್ಳಬೇಕು. ಆದರೂ ಸಾಧಕರ ಯಶೋಗಾಥೆಗಳಿಂದ ಪ್ರೇರಣೆ ದೊರಕುತ್ತದೆ, ಸಮಸ್ಯೆ, ಸಂಕಷ್ಟಗಳನ್ನು ಎದುರಿಸಿದ ಬಗೆ, ಪ್ರವಾಹದ ವಿರುದ್ಧ ಈಜುವ ಛಾತಿ, ಆತ್ಮಸ್ಥೈರ್ಯದ ಕಥೆಗಳು ನಮಗೆ ಜೀವ ತುಂಬಿ ಜೀವನದ ಯಶಸ್ಸಿಗೆ ಸ್ಫೂರ್ತಿಯಾಗುತ್ತವೆಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ರೆ.ಫಾ. ಸ್ಟ್ಯಾನಿ ಪಿಂಟೋ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಪ್ರಯತ್ನಶೀಲತೆ ಇದ್ದರೆ ಏನನ್ನು ಸಾಧಿಸಬಹುದು. ಇರುವ ಸಂಪತ್ತು, ಬುದ್ಧಿವಂತಿಕೆ, ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಕೌಶಲವನ್ನು ರೂಢಿಸಿಕೊಳ್ಳಬೇಕು. ನಮ್ಮ ಯಶಸ್ಸಿನ ಗುಟ್ಟು ಪರಿಶ್ರಮದಲ್ಲಿ ಅಡಗಿದೆ ಎಂದು ಹೇಳಿದರು. ಇನೋರ್ವ ಮುಖ್ಯ ಅತಿಥಿಗಳಾದ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಂತ್ ನಡುಬೈಲು ಮಾತನಾಡಿ ಅವಿರತ ಪ್ರಯತ್ನ ನಿಮ್ಮಲ್ಲಿರಲಿ. ಸೋಲು ಗೆಲುವು ಮುಖ್ಯ ಅಲ್ಲ. ಭಾಗವಹಿಸುವಿಕೆ ಮುಖ್ಯ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿ ಕೋಸ್ಟಾ , ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ . ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಪ್ರತಿಭಾ-2023 ರ ಸಂಯೋಜಕರಾದ ಡಾ.ಆಶಾ ಸಾವಿತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಬಾರಿಯ ‘ಪ್ರತಿಭಾ-2023’ ಸ್ಪರ್ಧೆಯಲ್ಲಿ ಸುಳ್ಯದ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ದ್ವಿತೀಯ ಸ್ಥಾನವನ್ನು ಹಾಗೂ ಸೈಂಟ್ ವಿಕ್ಟರ್ಸ್ ಬಾಲಕಿಯರ ಪ್ರೌಢಶಾಲೆ ಹಾಗೂ ಸಾಂದೀಪನಿ ಪ್ರೌಢಶಾಲೆ ಪುರುಷರ ಕಟ್ಟೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ರಸಪ್ರಶ್ನೆ, ಕನ್ನಡ ಹಾಗೂ ಇಂಗ್ಲಿಷ್ ವಿಚಾರ ಸಂಕಿರಣ, ಪೆನ್ಸಿಲ್ ಸ್ಕೆಚ್, ಮಣ್ಣಿನ ಮಾದರಿ ತಯಾರಿ, ವಿಜ್ಞಾನ ಮಾದರಿ ತಯಾರಿ, ಜಾನಪದ ಗಾಯನ ಸ್ಪರ್ಧೆ, ಕೊಲಾಜ್ ತಯಾರಿಕೆ, ಸ್ಟ್ಯಾಂಡ್ ಅಪ್ ಕಾಮಿಡಿ, ಜಾಹೀರಾತು ಸ್ಪರ್ಧೆ, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ , ಫೇಸ್ ಪೈಂಟಿಂಗ್ ಹಾಗೂ ನೃತ್ಯ ಸ್ಪರ್ಧೆ ಹೀಗೆ 13 ಸ್ಪರ್ಧೆಗಳಲ್ಲಿ 45 ಪ್ರೌಢಶಾಲೆಗಳಿಂದ 900 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಉಪನ್ಯಾಸಕಿಯಾದ ವೀಕ್ಷಾ ವಿ.ರೈ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ರವಿ ಪ್ರಸಾದ್ ವಂದಿಸಿದರು.