ವಿಟ್ಲ: ಆಟೋ ರಿಕ್ಷಾವೊಂದರಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಹಿತ ಆರೋಪಿಯೋರ್ವರನ್ನು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ವಿಟ್ಲ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಸೆ.16ರಂದು ನಡೆದಿದೆ. ಸುಳ್ಯ ಕಸಬಾ ನಿವಾಸಿ ಎನ್ ಎಂ ಮಹಮ್ಮದ್ ಕಲಂದರ್ ಶಾ (36 ವ.) ಬಂಧಿತ ಆರೋಪಿ.
ವಿಟ್ಲ ಠಾಣಾ ಪೊಲೀಸರು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಆಟೋ ರಿಕ್ಷಾದೊಳಗೆ 6.110 ಕೆ ಜಿ. ಗಾಂಜಾ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಂಧಿತ ಆರೋಪಿಯಿಂದ 1,35,000 ರೂಪಾಯಿ ಮೌಲ್ಯದ 6.110 ಕೆ ಜಿ. ಗಾಂಜಾ ಸಹಿತ 1,60,000ರೂಪಾಯಿ ಮೌಲ್ಯದ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯ ವಿರುದ್ಧ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.