ಆಲಂಕಾರು ಜೇಸಿಐ ’ಜೇಸಿ ಸಪ್ತಾಹ-2023’ ಸಮಾರೋಪ

0

ಹೇಮಲತಾ ಪ್ರದೀಪ್‌ರವರಿಗೆ ಕಮಲಪತ್ರ ಪ್ರಶಸ್ತಿ-ಸಾಧಕರಿಗೆ ಸನ್ಮಾನ

ಆಲಂಕಾರು: ಜೇಸಿಐ ಆಲಂಕಾರು ಇದರ ಜೈತ್ರ ’ಜೇಸಿ ಸಪ್ತಾಹ-2023’ ಇದರ ಸಮಾರೋಪ ಸಮಾರಂಭ, ಕಮಲಪತ್ರ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಸೆ.15ರಂದು ಸಂಜೆ ಆಲಂಕಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಆಲಂಕಾರು ಜೆಸಿಐ ಅಧ್ಯಕ್ಷ ಲಕ್ಮೀನಾರಾಯಣ ಅಲೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ರಾಷ್ಟ್ರೀಯ ತರಬೇತುದಾರರೂ, ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕರೂ ಆದ ಸತೀಶ್ ಭಟ್ ಬಿಳಿನೆಲೆ ಅವರು ಮಾತನಾಡಿ, ಮಾರ್ಕೆಟಿಂಗ್ ಸ್ಕಿಲ್ ಬೆಳವಣಿಗೆ ಬಗ್ಗೆ ಯುವಜನತೆ ಹೆಚ್ಚಾಗಿ ತಿಳಿದುಕೊಳ್ಳಬೇಕು. ಇದರಿಂದ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಲಿದೆ ಎಂದರು. ಇನ್ನೋರ್ವ ವಲಯ ಉಪಾಧ್ಯಕ್ಷ ಪ್ರಶಾಂತ್‌ಕುಮಾರ್ ರೈಯವರು ಮಾತನಾಡಿ, 14ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಆಲಂಕಾರು ಜೇಸಿಐ ಮುಂದೆ ಬೆಳ್ಳಿಹಬ್ಬ ಆಚರಿಸುವ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ಬೇಕಾಗಿದೆ. ಇದಕ್ಕಾಗಿ ಚಾರಿಟೇಬಲ್ ಟ್ರಸ್ಟ್ ರಚಿಸಿಕೊಂಡು ನಿಧಿ ಸಂಗ್ರಹಿಸಬೇಕೆಂದು ಹೇಳಿದರು. ವಲಯ ೧೫ರ ವಲಯ ಉಪಾಧ್ಯಕ್ಷರಾದ ಅಜಿತ್‌ಕುಮಾರ್ ರೈಯವರು ಮಾತನಾಡಿ, ಆಲಂಕಾರು ಜೇಸಿಐ ಘಟಕ ಎಜುಕೇಟೆಡ್ ಘಟಕ ಎಂದೇ ವಲಯದಲ್ಲಿ ಗುರುತಿಸಿಕೊಂಡಿದೆ. ಪ್ರತಿಷ್ಠಿತ ಘಟಕವೂ ಆಗಿದೆ ಎಂದರು. ಜೇಸಿಐ ವಲಯ ೧೫ರ ನಿಕಟಪೂರ್ವ ವಲಯಾಧ್ಯಕ್ಷ ರಾಯನ್ ಉದಯ ಕ್ರಾಸ್ತರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.


ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಜೇಸಿಐ ವಲಯ ತರಬೇತಿ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ, ಜೇಸಿಐನ ವಿನೀತ್ ಶಗ್ರಿತ್ತಾಯ, ಜೇಸಿರೆಟ್ ಅಧ್ಯಕ್ಷೆ ಜಯಶ್ರೀ ಅಲೆಪ್ಪಾಡಿ, ಜೆಜೆಸಿ ಅಧ್ಯಕ್ಷ ವಿಖಿತ್ ಜೆ.ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಜುನಾಥ ಮಾಣಕವಾಡ, ಪೂರ್ಣೇಶ್ ಬಲ್ಯ ಅತಿಥಿಗಳನ್ನು ಪರಿಚಯಿಸಿದರು. ಸಪ್ತಾಹ ನಿರ್ದೇಶಕಿ ಮಮತಾ ಅಂಬರಾಜೆ ಅವರು ಸಪ್ತಾಹದ ವರದಿ ವಾಚಿಸಿದರು. ಲಕ್ಷ್ಮೀನಾರಾಯಣ ಅಲೆಪ್ಪಾಡಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು. ಗುರುಪ್ರಸಾದ್ ರೈ ಜೇಸಿವಾಣಿ ವಾಚಿಸಿದರು.


ಕಮಲಪತ್ರ ಪ್ರಶಸ್ತಿ ಪ್ರದಾನ:
ಆಲಂಕಾರು ಜೆಸಿಐನ ಪೂರ್ವಾಧ್ಯಕ್ಷರಾದ ಹೇಮಲತಾ ಪ್ರದೀಪ್ ಅವರಿಗೆ ಕಮಲಪತ್ರ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಹೇಮಲತಾ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಸರಿತಾ ಜನಾರ್ದನ ಅವರು ಪರಿಚಯಿಸಿದರು.

ಸನ್ಮಾನ:
ಧಾರ್ಮಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೃಷ್ಣಕುಮಾರ್ ಅತ್ರಿಜಾಲು ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕಾಗಿ ಸುದ್ದಿಬಿಡುಗಡೆ ಪತ್ರಿಕೆಯ ಹರೀಶ್ ಬಾರಿಂಜ ಅವರನ್ನು ದಂಪತಿ ಜೊತೆಗೂಡಿ ಸನ್ಮಾನಿಸಲಾಯಿತು. 2023-24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲೆ ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ.,ರವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು. ಕೃಷ್ಣಕುಮಾರ್ ಅತ್ರಿಜಾಲು, ಹರೀಶ್ ಬಾರಿಂಜ ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದರು. ಜಯಶ್ರೀ ಅಲೆಪ್ಪಾಡಿ, ಗುರುಕಿರಣ್ ರೈ, ಪುರಂದರ ಅವರು ಸನ್ಮಾನಿತರನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here