ರಾಮಕುಂಜ: ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊಯಿಲ-ರಾಮಕುಂಜ ಇದರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19 ಮತ್ತು 20 ರಂದು ರಾಮಕುಂಜ ಗ್ರಾಮದ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ.ಆರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ನಡೆಯಿತು. ಸೆ.19ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಟೆ, ವಿವಿಧ ಭಜನಾ ತಂಡಗಳಿಂದ ಭಜನೆ ಸೇವೆ, ಸಾರ್ವಜನಿಕ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ರಂಗಪೂಜೆ ನಡೆಯಿತು.
ಧಾರ್ಮಿಕ ಸಭೆ:
ರಾತ್ರಿ ಕೊಯಿಲ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ರವಿ ಮಂಡ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಪ್ರಗತಿಪರ ಕೃಷಿಕ ಭಾಸ್ಕರ ಹಿರಿಂಜ ಉಪಸ್ಥಿತರಿದ್ದರು.
ಈ ಸಂದರ್ಭ ನಿವೃತ್ತ ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್ ಕೊಯಿಲ ಅವರನ್ನು ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಶರತ್ ಕೆದಿಲ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಪಾದೆ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಗೌರವಾಧ್ಯಕ್ಷ ಪದ್ಮಪ್ಪ ಗೌಡ ವಂದಿಸಿದರು. ಲಕ್ಷ್ಮೀನಾರಾಯಣ ರಾವ್ ಆತೂರು ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸೆ.20ರಂದು ಬೆಳಿಗ್ಗೆ ಶ್ರೀ ದೇವರಿಗೆ ಪೂಜೆ, ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿದ್ಯ, ಆಲಂಕಾರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ದೇವರ ಶೋಭಯಾತ್ರೆ ಕೆಮ್ಮಾರ ದವರೆಗೆ ಸಾಗಿ ಕೆಮ್ಮಾರ ಹೊಳೆಯಲ್ಲಿ ಶ್ರೀ ದೇವರ ಜಲಸ್ಥಂಬನ ನಡೆಸಲಾಯಿತು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ, ಕೀಳು ಕುದುರೆ, ಗೊಂಬೆಕುಣಿತ ಮೆರವಣಿಗೆಗೆ ಮೆರುಗು ನೀಡಿತ್ತು.