ಪುತ್ತೂರು: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಯುಕೆಜಿ ಪುಟಾಣಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕೆಯ್ಯೂರಿನಿಂದ ವರದಿಯಾಗಿದೆ. ಕೆಯ್ಯೂರು ಗ್ರಾಮದ ಪಾತುಂಜ ನಿವಾಸಿ ಹಾರೀಶ್ ದಾರಿಮಿ ಎಂಬವರ ಪುತ್ರ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಯುಕೆಜಿ ವಿದ್ಯಾರ್ಥಿ ಮೊಹಮ್ಮದ್ ಆದಿಲ್ (5ವ) ಮೃತಪಟ್ಟ ಪುಟಾಣಿ ಮೊಹಮ್ಮದ್ ಆದಿಲ್‌ರವರು ಸೆ.23 ರಂದು ಸಂಜೆ ಶಾಲೆ ಬಿಟ್ಟು ತನ್ನ ಮೂವರು ಅಕ್ಕಂದಿರ ಜೊತೆಯಲ್ಲಿ ಮನೆಗೆ ತೆರಳಿದ್ದರು. ಶಾಲೆಯಿಂದ ಕೊಂಚ ದೂರದಲ್ಲಿ ತನ್ನ ಮನೆಗೆ ಹೋಗುವ ದಾರಿಗಾಗಿ ರಸ್ತೆ ದಾಟಿದ ವೇಳೆ ಬೆಳ್ಳಾರೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಮಾರುತಿ ಇಕೊ ಕಾರೊಂದು ಮೊಹಮ್ಮದ್ ಆದಿಲ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆದಿಲ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿತ್ತು ತಕ್ಷಣವೇ ಸ್ಥಳದಲ್ಲಿದ್ದವರು ಮಗುವನ್ನು ಡಿಕ್ಕಿ ಹೊಡೆದ ಕಾರಿನಲ್ಲಿಯೇ ಕೆಯ್ಯೂರು ಕ್ಲಿನಿಕ್‌ಗೆ ಕರೆ ತಂದರು ಅಲ್ಲಿಂದ ಬೇರೊಂದು ವಾಹನದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆ ತರಲಾಗಿತ್ತು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಮಗು ಮೊಹಮ್ಮದ್ ಅದಿಲ್ ಮೃತಪಟ್ಟಿದ್ದಾರೆ.ಹಾರೀಸ್ ದಾರಿಮಿ ಮತ್ತು ಆಬೀದಾರವರ ನಾಲ್ವರು ಮಕ್ಕಳಲ್ಲಿ ಮೊಹಮ್ಮದ್ ಆದಿಲ್ ಏಕ ಮಾತ್ರ ಪುತ್ರನಾಗಿದ್ದು ಉಳಿದ ಮೂವರು ಪುತ್ರಿಯರಾಗಿದ್ದಾರೆ. ಪುತ್ರನನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಕ್ಕಂದಿರ ಜೊತೆಯಲ್ಲೇ ಮನೆಗೆ ಹೋಗುತ್ತಿದ್ದ ಆದಿಲ್: ಮೊಹಮ್ಮದ್ ಆದಿಲ್‌ರವರು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಯುಕೆಜಿ ವಿದ್ಯಾರ್ಥಿಯಾಗಿದ್ದು ಇವರ ಅಕ್ಕಂದಿರಾದ ಆದಿಲಾ, ಹಾದಿಯ ಮತ್ತು ಹಿಬಾ ಫಾತಿಮಾ ಇದೇ ಶಾಲೆಯಲ್ಲಿ 7,5 ಮತ್ತು 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಜೆ 3 ಗಂಟೆಗೆ ಯುಕೆಜಿ ತರಗತಿ ಬಿಟ್ಟರೂ ಆದಿಲ್ ಅಕ್ಕಂದಿರ ಕ್ಲಾಸ್ ಬಿಡುವ ತನಕ ಶಾಲೆಯಲ್ಲೇ ಇದ್ದು ಸಂಜೆ ಸ್ಕೂಲ್ ಬಿಟ್ಟ ಬಳಿಕ ಅಕ್ಕಂದಿರ ಜೊತೆಯಲ್ಲಿಯೇ ಮನೆಗೆ ಹೋಗುತ್ತಿದ್ದರು.ಅದೇ ರೀತಿ ಸೆ.23 ರಂದು ಕೂಡ ಸಂಜೆ ಸುಮಾರು 4.40ರ ವೇಳೆಗೆ ತನ್ನ ಅಕ್ಕಂದಿರ ಜೊತೆಯಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇಲ್ಲಿ ಅವಘಡಗಳು ನಡೆಯುತ್ತಲೇ ಇರುತ್ತದೆ
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಳಿಯಿಂದ ಸಂತೋಷ್‌ನಗರದ ತನಕ ರಸ್ತೆಯು ನೇರವಾಗಿದ್ದು ವಾಹನಗಳು ಅತೀ ವೇಗದಿಂದ ಚಲಿಸುತ್ತಿವೆ. ಶಾಲಾ ಮಕ್ಕಳ ಸುರಕ್ಷತೆಗಾಗಿ ದಾನಿಗಳ ಕೊಡುಗೆಯಿಂದ ಶಾಲಾ ಬಳಿ ಬ್ಯಾರಿಕೇಡ್ ಅನ್ನು ಅಳವಡಿಸುವ ಕೆಲಸವನ್ನು ಶಾಲಾ ವತಿಯಿಂದ ಮಾಡಲಾಗಿದೆ. ಇದೇ ರಸ್ತೆಯಲ್ಲಿ ಶಾಲೆಯಿಂದ ಕೊಂಚ ದೂರ ಸಂತೋಷ್‌ನಗರದ ಸ್ವಲ್ಪ ಹಿಂದೆ ಒಂದು ಅಪಾಯಕಾರಿ ಜಾಗ ಎನ್ನಲಾಗಿದ್ದು ಇಲ್ಲಿ ಹಲವು ಅವಘಡಗಳು ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಜಾಗದಲ್ಲಿ ಪುಟಾಣಿಗೆ ಕಾರು ಡಿಕ್ಕಿ ಹೊಡೆದಿದೆ.